ADVERTISEMENT

ಕೊಳ್ಳೇಗಾಲ | ಜಿಟಿ ಜಿಟಿ ಮಳೆಯ ನಡುವೆಯೂ ರೈತರ ತೀವ್ರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:16 IST
Last Updated 27 ಜುಲೈ 2025, 4:16 IST
ಮಾನವ ಸರಪಣಿ ಮಾಡಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು
ಮಾನವ ಸರಪಣಿ ಮಾಡಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು   

ಕೊಳ್ಳೇಗಾಲ: ಅರಣ್ಯ ಪ್ರದೇಶದಲ್ಲಿ ಜಾನುವಾರುಗಳು ಮೇಯಲು ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ  ರೈತರು ಶನಿವಾರ ನಗರದಲ್ಲಿ ಜಿಟಿಜಿಟಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದರು.

ನಗರದ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡ ನೂರಾರು ಪ್ರತಿಭಟನಕಾರರು ಸರ್ಕಾರ, ಅರಣ್ಯ ಸಚಿವ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಡಾ. ವಿಷ್ಣುವರ್ಧನ್ ರಸ್ತೆ, ಡಾ. ರಾಜಕುಮಾರ್ ರಸ್ತೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ಬಂದು, ಎಡಿಬಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿ, ನಂತರ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್ಒ ಅವರಿಗೆ ಮನವಿ ಸಲ್ಲಿಸಿದರು. 

ADVERTISEMENT

ಹಿರಿಯ ರೈತ ಮುಖಂಡ, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖ್ಯಸ್ಥ ಹೊನ್ನೂರು ಪ್ರಕಾಶ್ ಮಾತನಾಡಿ, ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಿಗೂ ಅನ್ವಯಿಸುವಂತೆ ಅರಣ್ಯದೊಳಗೆ ದನಕರು, ಕುರಿ, ಮೇಕೆ ಮುಂತಾದ ಸಾಕು ಪ್ರಾಣಿಗಳನ್ನು ಮೇಯಿಸುವುದನ್ನು ಸಂಪೂರ್ಣ ನಿಷೇಧಿಸಲು ತಕ್ಷಣ ಕ್ರಮವಹಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಚನೆ ನೀಡಿರುವುದು ಸರಿಯಲ್ಲ. ಇದಕ್ಕೆ ವಿರೋಧ ವ್ಯಕ್ತವಾದ ಮೇಲೆ ಹೊರ ರಾಜ್ಯಗಳ ದನಕರು ಮೇಯಿಸಲು ಮಾತ್ರ ನಿಷೇಧ ಹೇರಲಾಗಿದ್ದು, ಸ್ಥಳೀಯ ರೈತರು ಆತಂಕಪಡುವ ಅಗತ್ಯವಿಲ್ಲವೆಂದು ಪತ್ರಿಕಾ ಪ್ರಕಟಣೆ ನೀಡಿದ್ದೀರಿ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಇದರಿಂದ ಕಾಳಂಚಿನ ಭಾಗದ ರೈತರು ಆತಂಕದಲ್ಲಿದ್ದಾರೆ. ಕಾಡಿಗೆ ನಾಡಿಗೆ ಅವಿನಾಭಾವ ಸಂಬಂಧಗಳು ಇವೆ. ದನ ಕರುಗಳು ಅರಣ್ಯದಲ್ಲಿ ಮೇಯುವುದು ಬೇಡ ಎನ್ನುವುದಕ್ಕೆ ಸಚಿವರು ಯಾರು? ಕೂಡಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರಾಜೀನಾಮೆ ನೀಡಬೇಕು. ಆದೇಶ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ರೈತ ಸಂಘಗಳಿಗೆ ಕರೆ ಕೊಟ್ಟು, ಬಾರ್ಕೋಲ್ ಚಳವಳಿ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

‘ವನ್ಯಜೀವಿ ಮಾಂಸ ಮಾರಾಟ ಕಣ್ಣಿಗೆ ಕಾಣುತ್ತಿಲ್ಲವೇ’

ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ರಕ್ಷಿಸಬೇಕೆ ಹೊರತು ರೈತರಿಗೆ ತೊಂದರೆ ಕೊಡುವುದಲ್ಲ. ಈಗಾಗಲೇ ಕಾಡಿನಲ್ಲಿ ಕಳ್ಳತನಗಳು ಹೆಚ್ಚುತ್ತಿವೆ. ಇದಕ್ಕೆ ಪ್ರಮುಖ ಕಾರಣ ‌ಹೊರಗುತ್ತಿಗೆ ವಾಚರ್‌ಗಳಿಗೆ ಸಂಬಳ ನೀಡದೆ ಇರುವುದು. ಜಿಂಕೆ ಮಾಂಸ, ಕಡವೆ ಮಾಂಸ, ನವಿಲು ಮಾಂಸ ಸೇರಿ ಅನೇಕ ಕಾಡು ಪ್ರಾಣಿಗಳ ಮಾಂಸ ಪ್ರತಿನಿತ್ಯ ಮಾರಾಟವಾಗುತ್ತಿದೆ. ಇದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಏಕೆ ಮೌನ ವಹಿಸಿದ್ದಾರೆ ಎಂದು ಹೊನ್ನೂರು ಪ್ರಕಾಶ್‌ ಸೇರಿದಂತೆ ವಿವಿಧ ರೈತ ಮುಖಂಡರು ಪ್ರಶ್ನಿಸಿದರು.

ಬಂಡಿಪುರ, ಕಾಕನಕೋಟೆ, ನಾಗರಹೊಳೆ, ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಹಾಗೂ ಕಾವೇರಿ ವನ್ಯಜೀವಿ ವಿಭಾಗದಲ್ಲಿ ಅರಣ್ಯವನ್ನು ನಾಶ ಮಾಡಿ, ಅಕ್ರಮವಾಗಿ ರೆಸಾರ್ಟ್‌ಗಳನ್ನು ನಿರ್ಮಿಸಲಾಗಿದೆ. ಅರಣ್ಯದೊಳಗೆ ಅಕ್ರಮವಾಗಿ ಬೋರ್‌ವೇಲ್ ಕೊರೆದು, ಹಣ ಪಡೆದಿದ್ದಾರೆ. ಕಾಡು ಪ್ರಾಣಿಗಳು ರೈತರ ಬೆಳೆ ಹಾಗೂ ಮನೆಗಳನ್ನು ಹಾನಿ ಮಾಡಿದ್ದರೂ ಇದರ ಬಗ್ಗೆ ಅರಣ್ಯ ಇಲಾಖೆ ಏಕೆ ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದರು.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ, ಬಿಆರ್‌ಟಿ ವನ್ಯಜೀವಿ ವಿಭಾಗದಲ್ಲಿ  ಸಾವಿರಾರು ಗಂಧದ ಮರಗಳು, ಆನೆಗಳು, ಹುಲಿಗಳು, ಜಿಂಕೆಗಳು ಹೀಗೆ ಹಲವು ಬಗೆಯ ವನ್ಯಸಂಪತ್ತು ಇತ್ತು. ಆದರೆ, ಈಗ ಎಲ್ಲವೂ ನಶಿಸಿ ಹೋಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಕಾರಣ. ಬಂಡವಾಳ ಶಾಹಿಗಳ ಜೊತೆ ಶಾಮೀಲಾಗಿ ವನ್ಯಜೀವಿಗಳನ್ನು ಸಹ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳು ಹಾಗೂ ಚಲನಚಿತ್ರ ನಟರು ಬೇರೆ ಬೇರೆ ರಾಜ್ಯಗಳಿಂದ, ಬೇರೆ ಬೇರೆ ಜಿಲ್ಲೆಗಳಿಂದ ಬಂದು ನಮ್ಮ ಕಾಡಿನಲ್ಲಿ ಮೋಜು ಮಸ್ತಿ ಮಾಡಿ ಅರಣ್ಯನಾಶ ಮಾಡಿ ಹೋಗುತ್ತಿದ್ದಾರೆ. ಇದನ್ನು ತಡೆಯುವುದು ಬಿಟ್ಟು ರೈತರಿಗೆ ಪ್ರತಿನಿತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂಗಡಿ ಗ್ರಾಮ ಸ್ಥಳಾಂತರಿಸಲು ಹತ್ತಾರು ವರ್ಷಗಳಿಂದ  ಮನವಿ ಮಾಡುತ್ತಲೇ ಇದ್ದೇವೆ. ಆದರೆ, ಯಾರು ಸಹ ಇದಕ್ಕೆ ಕಿವಿಗೊಡದೆ, ದನಗಳನ್ನು ಕಾಡಿಗೆ ಕಳುಹಿಸಬೇಡಿ ಎಂದು ಹೇಳುತ್ತಾರೆ. ನಮ್ಮ ಕಾಡನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂದು ನಮಗೆ ಗೊತ್ತಿದೆ. ಪೋಲಿಸರು, ಅರಣ್ಯ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇಲ್ಲದೆ ರೈತರು ಬದುಕುತ್ತೇವೆ. ನಾವು ಬೆಳೆದ ಬೆಳೆಯನ್ನು ನೀವು ಊಟ ಮಾಡುತ್ತೀರಿ. ನಾವು ಬೆಳೆಯದಿದ್ದರೆ ನೀವು ಮಣ್ಣು ತಿನ್ನಬೇಕಾಗುತ್ತದೆ. ರೈತರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ರೈತರು ಈ ದೇಶದ ಆಸ್ತಿ ಹಾಗೂ ದೇಶಕ್ಕೆ ಅನ್ನದಾತರು ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ರವಿ, ಪಾಪಣ್ಣ, ಚಂದ್ರಪ್ಪ, ತಿಮ್ಮೇಗೌಡ, ಮಹದೇವಸ್ವಾಮಿ, ದೇವರಾಜು, ವೆಂಕಟೇಶ್, ಪ್ರಸಾದ್, ನಾಗರಾಜ್, ರಾಮೇಗೌಡ, ರುದ್ರ ನಾಯಕ, ಸೋಮಪ್ಪ, ಕಾರ್ತಿಕ್, ಮಹಾದೇವ್, ಅರ್ಜುನ್, ಪ್ರೀತಂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.

ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸಲು ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಶನಿವಾರ ನಗರದಲ್ಲಿ ಜಿಟಿಜಿಟಿ ಮಳೆಯ ನಡುವೆಯೂ ಪ್ರತಿಭಟನೆ ಮಾಡಿದರು 
ಕೊಳ್ಳೇಗಾಲ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳು ಮೇಯಲು ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕವು ಶನಿವಾರ ನಗರದಲ್ಲಿ ಜಿಟಿಜಿಟಿ ಮಳೆಯ ನಡುವೆಯೂ ಪ್ರತಿಭಟನೆ ಮಾಡಿದರು.

ರೈತರ ಪ್ರಮುಖ ಬೇಡಿಕೆಗಳು ಕಾಡಂಚಿನ ರೈತರು ಅರಣ್ಯದೊಳಗೆ ಜಾನುವಾರು ಮೇಯಿಸಲು ಅರಣ್ಯ ಇಲಾಖೆ ಅಡ್ಡಿಪಡಿಸಬಾರದು ರೈತರು ಮತ್ತು ರೈತ ಪ್ರತಿನಿಧಿಗಳನ್ನು ಒಳಗೊಂಡ ಅರಣ್ಯ ಅಭಿವೃದ್ಧಿ ಸಮಿತಿ ರಚಿಸಬೇಕು ಕಾಡು ಪ್ರಾಣಿಗಳ ದಾಳಿಯಿಂದ ರೈತ ಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಕಾಡು ಪ್ರಾಣಿಗಳು ರೈತರ ಬೆಳೆ ಹಾನಿ ಮಾಡಿದರೆ ಅದರ ಸಂಪೂರ್ಣ ವೆಚ್ಚವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಂದ ವಸೂಲಿ ಮಾಡಿ ರೈತರಿಗೆ ನೀಡಬೇಕು ಅರಣ್ಯ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸುತ್ತಿರುವ ರೆಸಾರ್ಟ್ ನಿರ್ಮಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅರಣ್ಯದಲ್ಲಿ ಅಕ್ರಮ ಚಟುವಟಿಕೆ ನಡೆಸಲು ವನ್ಯಜೀವಿಗಳನ್ನು ಕೊಲ್ಲುವುದಕ್ಕೆ ಅವಕಾಶ ನೀಡಬಾರದು ಹುಲಿ ಚಿರತೆ ಆನೆಗಳ ಅಸಹಜ ಸಾವಿಗೆ ಸಚಿವರೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಚಂಗಡಿ ಗ್ರಾಮವನ್ನು ಕಾಡಿನಿಂದ ನಾಡಿಗೆ ಸ್ಥಳಾಂತರಿಸಬೇಕು. ಕಾನೂನುಗಳ ಹೆಸರಿನಲ್ಲಿ ಕಾಡಂಚಿನ ರೈತರಿಗೆ ಕಿರುಕುಳ ನೀಡಬಾರದು

ಕೌದಳ್ಳಿ ಆರ್‌ಎಫ್ಒ ವಿರುದ್ಧ ಎಫ್ಐಆರ್

ಚಿರತೆಯ ಅಸಹಜ ಸಾವಿನ ಪ್ರಕರಣ ಸಂಬಂಧ ರೈತರೊಬ್ಬರನ್ನು ಹಿಗ್ಗಾಮುಗ್ಗ ಥಳಿಸಿದ್ದ ಕೌದಳ್ಳಿ ಆರ್‌ಎಫ್ಒ ರಾಜಶೇಖರ್ ಮೂರ್ತಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸ್ಥಳೀಯ ನಿವಾಸಿ ಮಹದೇವ ಎಂಬುವರನ್ನು ಬಲವಂತದಿಂದ ಕರೆದೊಯ್ದು ಚಿರತೆ ಕೊಂದಿರುವುದಾಗಿ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ನನಗೆ ₹15 ಸಾವಿರ ಲಂಚ ನೀಡಬೇಕೆಂದು ಆರ್‌ಎಫ್ಒ ಹಿಗ್ಗಾಮುಗ್ಗ ಧಳಿಸಿದ್ದರು ಎಂದು ಆರೋಪಿಸಲಾಗಿದೆ. ಆರ್‌ಎಫ್‌ಒ ಕೂಡಲೇ ಸ್ಥಳಕ್ಕೆ ಬರಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ಈಗಿಂದೀಗಲೆ ತಡೆಯುತ್ತೇವೆ. ಇಲ್ಲದಿದ್ದರೆ ಪ್ರತಿ ಜಿಲ್ಲೆಯಲ್ಲಿ ಸಚಿವರಿಗೆ ಕಪ್ಪು ಬಾವುಟ ತೋರಿಸುತ್ತೇವೆ ಎಂದು ರೈತರು ಪಟ್ಟುಹಿಡಿದರು. ನಂತರ ಪ್ರಭಾರ ಡಿವೈಎಸ್ಪಿ ಪವನ್ ಕುಮಾರ್ ಅವರು ರೈತ ಮಹದೇವ ಅವರ ದೂರು ಸ್ವೀಕರಿಸಿ  ಕೌದಳ್ಳಿ ಆರ್‌ಎಫ್ಒ ವಿರುದ್ಧ ಎಫ್‌ಐಆರ್‌ ದಾಖಲಿಸಿ ರೈತರ ಮನವೊಲಿಸಿದರು. ನಂತರ ರೈತ ಸಂಘದ ಪ್ರಮುಖರು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಭಾಸ್ಕರ್ ಹಾಗೂ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಸುರೇಂದ್ರ ಅವರಿಗೆ ಮನವಿ ಪತ್ರಗಳನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.