ಚಾಮರಾಜನಗರ: ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಾಗೂ ರೈತರ ಸಮಸ್ಯೆ ಈಡೇರಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಆ.20ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಗೂ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.
ನಗರದ ಪಿಡಬ್ಲ್ಯೂಡಿ ಗೆಸ್ಟ್ ಹೌಸ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ರೈತರು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡದ ಸರ್ಕಾರ ಅನ್ನದಾತರಿಗೆ ಸ್ವಾತಂತ್ರ್ಯ ನೀಡಿಲ್ಲ. ಪ್ರಸಕ್ತ ಸಾಲಿನ ಪ್ರತಿ ಟನ್ ಕಬ್ಬಿಗೆ ₹ 4,500 ನಿಗದಿಗೊಳಿಸಬೇಕು, ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸಬೇಕು. ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಗೊಳಿಸಬೇಕು.
ಸಕ್ಕರೆ ಕಾರ್ಖಾನೆಗಳಲ್ಲಿ ಇಳುವರಿ ಮೋಸ ತಪ್ಪಿಸಲು ರೈತರು ಹಾಗೂ ತಜ್ಞರ ಸಮಿತಿ ರಚಿಸಬೇಕು. ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಬೇಕು. ₹ 950 ಕೋಟಿ ರೈತರಿಗೆ ಬಾಕಿ ಪಾವತಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ರಸ ಗೊಬ್ಬರ ಸಮರ್ಪಕ ಪೂರೈಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದ್ದು ಗೊಂದಲವಿಲ್ಲದೆ ಪೂರೈಸಬೇಕು, ಕೃತಕ ರಸಗೊಬ್ಬರ ಅಭಾವ ಸೃಷ್ಟಿಸುವವರ ಹಾಗೂ ನಿಗದಿಗಿಂತ ಹೆಚಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ರಸಗೊಬ್ಬರ ದಾಸ್ತಾನು, ಮಾರಾಟದ ಮೇಲೆ ಜಿಲ್ಲಾಡಳಿತ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಹುನ್ನಾರ ಕೈಬಿಡಬೇಕು, ಸ್ಮಾರ್ಟ್ ಮೀಟರ್ ನಿರ್ಧಾರ ಕೈಬಿಟ್ಟು ಅಕ್ರಮ ಸಕ್ರಮ ಯೋಜನೆ ಜಾರಿಗೆ ತರಬೇಕು. ಮೇಕೆದಾಟು ಯೋಜನೆ ಜಾರಿ, ಲೀಟರ್ ಹಾಲಿಗೆ ₹ 55 ನಿಗದಿ, ಹಾಲಿನ ಪ್ರೋತ್ಸಾಹಧನ ಬಾಕಿ ಬಿಡುಗಡೆ ಮಾಡಬೇಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದ ಅಂಗಡಿ ತೆರೆಯುವ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಿಬಿಲ್ ಸ್ಕೋರ್ ಹೊರತಾಗಿ ಕೃಷಿ ಸಾಲ, ವೈಯಕ್ತಿಕ ಬೆಳೆ ವಿಮೆ ಜಾರಿ, ಕೆರೆಕಟ್ಟೆಗಳಿಗೆ ನದಿ ಮೂಲದಿಂದ ನೀರು, ಅಭಿವೃದ್ಧಿ ಹೆಸರಲ್ಲಿ ಕೃಷಿ ಭೂಮಿ ವಶಪಡಿಸಿಕೊಂಡರೆ ಲಾಭ ರೈತರಿಗೆ ಹಂಚಬೇಕು. ಆನ್‌ಲೈನ್ ಗೇಮ್ ರದ್ದುಪಡಿಸಬೇಕು, ಅರಣ್ಯದೊಳಗೆ ರೈತರ ಜಾನುವಾರು ಮೇಯಲು ಅವಕಾಶ ನೀಡಬೇಕು ಎಂದರು.
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ತಾಲ್ಲೂಕು ಅಧ್ಯಕ್ಷ ಸತೀಶ್ ಗುರುವಿನಪುರ ಚಂದ್ರಪ್ಪ, ಆನಂದ, ಅರಳಿಕಟ್ಟೆ ದೊರೆಸ್ವಾಮಿ, ಕಾಳಪ್ಪ, ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.