ADVERTISEMENT

7ನೇ ದಿನ ರೈತರಿಂದ ಖಾಲಿ ತಟ್ಟೆ, ಲೋಟ ಚಳವಳಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 15:47 IST
Last Updated 19 ಸೆಪ್ಟೆಂಬರ್ 2021, 15:47 IST
ರೈತ ಮುಖಂಡರು ಭಾನುವಾರ ಜಿಲ್ಲಾಡಳಿತ ಭವನದ ಎದುರು ಧರಣಿ ಕುಳಿತು ಖಾಲಿ ಲೋಟ ಹಾಗೂ ತಟ್ಟೆಯನ್ನು ಬಡಿದು ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ರೈತ ಮುಖಂಡರು ಭಾನುವಾರ ಜಿಲ್ಲಾಡಳಿತ ಭವನದ ಎದುರು ಧರಣಿ ಕುಳಿತು ಖಾಲಿ ಲೋಟ ಹಾಗೂ ತಟ್ಟೆಯನ್ನು ಬಡಿದು ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು   

ಚಾಮರಾಜನಗರ: ರೈತ ಸಂಘಟನೆ ಹಾಗೂ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶರವಣನ್ ಅವರನ್ನು ರಾಜ್ಯದಿಂದ ಹೊರಗಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳ‌ ಮುಖಂಡರು ಪ್ರತಿಭಟನೆಯ 7ನೇ ದಿನವಾದ ಭಾನುವಾರ ಖಾಲಿ ತಟ್ಟೆ ಲೋಟ ಚಳವಳಿ ನಡೆಸಿದರು.

ಕಬ್ಬು ಬೆಳೆಗಾರರ ಸಂಘದ ನೇತೃತ್ಬದಲ್ಲಿ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಹೋರಾಟ ಮುಂದುವರೆಸಿದ ಪ್ರತಿಭಟನಕಾರರು, ಖಾಲಿ ಲೋಟ, ತಟ್ಟೆಗಳನ್ನು ಬಡಿಯುವುದರ ಮೂಲಕ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಬ್ಬು ಬೆಳೆಗಾರರ ಸಂಘದ ಮೈಸೂರು- ಚಾಮರಾಜನಗರ ಘಟಕ್ಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಮಾತನಾಡಿ, 'ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶರವಣನ್ ಅವರು ರೈತ ಸಂಘದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸಿ‌ ನಾವು ಆಗಸ್ಟ್ ತಿಂಗಳ ಆರಂಭದಲ್ಲಿ ಪ್ರತಿಭಟನೆ ನಡೆಸಿದ್ದೆವು. ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶರವಣನ್ ಅವರನ್ನು 15 ದಿನಗಳಲ್ಲಿ ವರ್ಗಾವಣೆ ಮಾಡುವುದಾಗಿ ಆಡಳಿತ ಮಂಡಳಿ‌ ಭರವಸೆ ನೀಡಿತ್ತು. ಈ ಸಂಬಂಧ ಸಭಾ ನಡಾವಳಿಯೂ ಆಗಿದೆ. ಆದರೆ ಇನ್ನೂ ವರ್ಗಾವಣೆ ಮಾಡದೆ ಅವರನ್ನು ಕಾರ್ಖಾನೆಯಲ್ಲೇ ಉಳಿಸಲಾಗಿದೆ' ಎಂದು ಆರೋಪಿಸಿದರು.

ADVERTISEMENT

'ಇದನ್ನು ವಿರೋಧಿಸಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿ ದಿನ ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಜಿಲ್ಲಾಡಳಿತವಾಗಲಿ, ಜಿಲ್ಲೆಯ ಜನ ಪ್ರತಿನಿಧಿಗಳಾಗಲಿ ಈ ಬಗ್ಗೆ ಗಮನಹರಿಸಿಲ್ಲ' ಎಂದು ದೂರಿದರು.

‘ಈ ವಿಚಾರವನ್ನು ಸರ್ಕಾರದ ಗಮನ ಸೆಳೆಯಲು ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಹಾಗಾಗಿ, ಇವರೆಲ್ಲ ಕಾರ್ಖಾನೆಯ ಪರ ಇದ್ದಾರೆ ಎಂಬ ಭಾವನೆ ಮೂಡಿಸಿದೆ. ಶಾಸಕರು ಹಾಗೂ ಅಧಿಕಾರಿಗಳು ಕಾರ್ಖಾನೆಯಿಂದ ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

'ಕೂಡಲೇ ಚುನಾಯಿತ ಪ್ರತಿನಿಧಿಗಳು ಸರ್ಕಾರ ಹಾಗೂ ಜಿಲ್ಲಾಡಳಿತ ಮೇಲೆ ಒತ್ತಡ ತಂದು ಶರವಣನನ್ನು ರಾಜ್ಯದಿಂದ ಬೇರೆ ಕಡೆ ವರ್ಗ ಮಾಡಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು' ಎಂದು ಭಾಗ್ಯರಾಜ್ ಆಗ್ರಹಿಸಿದರು.

'ಶರವಣನ್ ಅವರನ್ನು ವರ್ಗಾವಣೆ ಮಾಡುವ ತನಕ ನಿರಂತರ ಪ್ರತಿಭಟನೆ ನಡೆಸಲಾಗುವುದು. ಏನಾದರೂ ರೈತರಿಗೆ, ರೈತ ಮಕ್ಕಳಿಗೆ ತೊಂದರೆಯಾದರೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರೇ ನೇರಹೊಣೆಯಾಗಬೇಕಾಗುತ್ತದೆ' ಎಂದು ಎಚ್ಚರಿಸಿದರು.

‌ಮೂಡ್ಲುಪುರ ನಾಗರಾಜು, ಅಂಬಳೆ ಮಹದೇವಸ್ವಾಮಿ, ಮಂಜುನಾಥ್, ಶಿವಣ್ಣ, ಕುರುಬೂರು ಸಿದ್ದೇಶ್, ಪ್ರದೀಪ್, ಕೆರೆಹುಂಡಿ ರಾಜಣ್ಣ, ಮಹದೇವಪ್ಪ, ಶಿವಣ್ಣ, ವಾಚ್ ಕುಮಾರ್, ಬಾಣಹಳ್ಳಿ ಕುಮಾರ್, ಹೆಗ್ಗೊಠಾರ ಶಿವಸ್ವಾಮಿ, ಮುದ್ದಹಳ್ಳಿ ಚಿನ್ನಸ್ವಾಮಿ, ತೆಳ್ಳನೂರು ನಾಗೇಂದ್ರ, ನಗರ್ಲೆ ಸುರೇಶ್, ಮಲ್ಲೇಶ್, ಕೃಷ್ಣಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.