ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳಕ್ಕೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ತಾಲ್ಲೂಕು ಕಚೇರಿ ಆವರಣದಲ್ಲಿ 3ನೇ ದಿನವೂ ಧರಣಿ ಮುಂದುವರೆಸಿದ ರೈತರು ನೀರಾವರಿ, ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಕೆರೆಹಳ್ಳಿ ಕೆರೆ ಪಂಪ್ ಹೌಸ್‌ಗೆ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಹಾರಾಷ್ಟ್ರದ ಪುಣೆಯ ಕಂಪನಿಯಿಂದ ಒಪ್ಪಂದದ ಆಧಾರದಲ್ಲಿ ಖರೀದಿಸಿದ ದೊಡ್ಡ ಗಾತ್ರದ ಮೋಟಾರ್‌ಗಳು ಇವಾಗಿದ್ದು, ದುರಸ್ತಿಗೆ ಇನ್ನೂ ಒಂದು ತಿಂಗಳು ಸಮಯ ಬೇಕಾಗಬಹುದು. ದುರಸ್ತಿ ಆದ ಕೂಡಲೇ ನೀರು ಬಿಡಿಸಲು ಕ್ರಮ ವಹಿಸುವ ಭರವಸೆ ನೀಡಿದರು.
ಗೋಮಾಳದಲ್ಲಿ ಕೃಷಿ ಮಾಡುವ ರೈತರಿಗೆ ಸಾಗುವಳಿ ಚೀಟಿ ನೀಡಲು ತಾಂತ್ರಿಕ ಕಾರಣಗಳು ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡರ ಭೇಟಿ ಮಾಡಿ ಚರ್ಚಿಸಲು ನನ್ನೊಂದಿಗೆ ಸಂಘಟನೆಯವರು ಬನ್ನಿ ಎಂದು ಆಹ್ವಾನಿಸಿದರು.
ಸಫಾರಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಎಂಬುದು ಧೃಢಪಟ್ಟರೆ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲು ಕ್ರಮ ವಹಿಸಲಾಗುವುದು. ಪ್ರವಾಸೋದ್ಯಮ ದೃಷ್ಟಿಯಿಂದ ನಿಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದರು.
ವನ್ಯಪ್ರಾಣಿಗಳ ಹಾವಳಿ ಮತ್ತು ಸಾಗುವಳಿ ಚೀಟಿ ನೀಡಲು ಇರುವ ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಭರವಸೆ ನೀಡಿದರು. ಧರಣಿ ಕೈ ಬಿಡುವಂತೆ ಮನವಿ ಮಾಡಿದರು. ಶಾಸಕರ ಭರವಸೆಗೆ ಬಗ್ಗದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಧರಣಿ ಮುಂದುವರಿಸಿದರು.
ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ತಾಲ್ಲೂಕು ಅಧ್ಯಕ್ಷ ಹಂಗಳ ದಿಲೀಪ್, ಹೊನ್ನೇಗೌಡನಹಳ್ಳಿ ಶಿವಮಲ್ಲು, ಮಲ್ಲಯ್ಯನಪುರ ಶಿವಣ್ಣ, ಬೊಮ್ಮನಹಳ್ಳಿ ಲೋಕೇಶ್, ಚನ್ನಮಲ್ಲಿಪುರ ಸುರೇಶ್, ಮುಂಟೀಪುರ ಮಹದೇವಸ್ವಾಮಿ, ರಘು, ಮಂಜು, ಮನು, ಪುತ್ತನಪುರ ಮಹದೇವಪ್ಪ, ಸಂತೋಷ್, ಮೂರ್ತಿ, ಕುಮಾರಸ್ವಾಮಿ, ನಂಜಪ್ಪ ಹಾಜರಿದ್ದರು.
ಅಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಮನವಿ
ಗುಂಡ್ಲುಪೇಟೆ: ಲಿಖಿತ ಭರವಸೆ ನೀಡಿಯೂ ಕೆರೆಗಳಿಗೆ ನೀರು ತುಂಬಿಸದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಡಿಎಸ್‍ಪಿ ಸ್ನೇಹರಾಜ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಬರಬೇಕೆಂಬ ಬೇಡಿಕೆ ಈಡೇರಿಲ್ಲ. ಅಲ್ಲದೇ ಕಳೆದ ವರ್ಷ ಧರಣಿ ವೇಳೆ ಲಿಖಿತ ಭರವಸೆ ನೀಡಿದ ನೀರಾವರಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದ್ದಾರೆ. ಹೀಗಾಗಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.