ADVERTISEMENT

ದೆಹಲಿಯಲ್ಲಿ ರೈತರ ಹೋರಾಟ ಹತ್ತಿಕ್ಕುವ ಯತ್ನ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 13:20 IST
Last Updated 2 ಡಿಸೆಂಬರ್ 2020, 13:20 IST
ರೈತ ಸಂಘದ ಕಾರ್ಯಕರ್ತರರು ಕೇಂದ್ರ ಸರ್ಕಾರದ ವಿರುದ್ಧ ‌ಬುಧವಾರ ಪ್ರತಿಭಟನೆ ನಡೆಸಿದರು
ರೈತ ಸಂಘದ ಕಾರ್ಯಕರ್ತರರು ಕೇಂದ್ರ ಸರ್ಕಾರದ ವಿರುದ್ಧ ‌ಬುಧವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಪ್ರತಿಭಟನಕಾರರು ಅರೆನಗ್ನರಾಗಿ ಕುತ್ತಿಗೆಗೆ ತೆಂಗಿನ ಕಾಯಿ ಚಿಪ್ಪಿನ ಹಾರ ಹಾಕಿ, ತಲೆಯಲ್ಲಿ ಚಪ್ಪಡಿ ಕಲ್ಲು ಇಟ್ಟುಕೊಂಡು ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ವೃತ್ತದಲ್ಲಿ ಕಲ್ಲಿನಿಂದ ಚಿತೆ ನಿರ್ಮಿಸಿ, ಅಲ್ಲಿ ಚಿಪ್ಪು ರಾಶಿ ಹಾಕಿ ಬೆಂಕಿ ಹಚ್ಚಿ ಪುರಿ ಹಂಚಿದರು. ಕೆಲ ಕಾಲ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಅವರು ಮಾತನಾಡಿ, ‘ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಸಾವಿರಾರು ರೈತರು ಹೋರಾಟ ಮಾಡುತ್ತಿದ್ದಾರೆ. ರೈತರನ್ನು ಗೌರವಯುತವಾಗಿ ಕೂರಿಸಿ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡದೆ ಅವರ ಮೇಲೆ ಜಲ ಫಿರಂಗಿ ಪ್ರಯೋಗ ಮಾಡುವ ಕೆಲಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅವರು ಮಾತನಾಡಿ, ‘ಮೋದಿ ಸರ್ಕಾರ ಏಳು ವರ್ಷಗಳಲ್ಲಿ ರೈತರಿಗೆ ಏನೂ ಮಾಡಿಲ್ಲ. ಅನ್ನದಾತರ ತಲೆಗೆ ಚಪ್ಪಡಿ ಕಲ್ಲು ಹಾಕಿ, ಕೈಗೆ ಚಿಪ್ಪು ನೀಡಿದೆ.ನರೇಂದ್ರ ಮೋದಿ, ಅಮಿತ್ ಷಾ ಅವರು ದೇಶದಲ್ಲಿ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಮೋದಿ ಅವರು ಅಧಿಕಾರದಿಂದ ಕೆಳಗೆ ಇಳಿಯುವ ತನಕ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಹೆಗ್ಗೋಠಾರ ಗಿರಿ, ಸಂಪತ್ತು, ವಿಜಯಕುಮಾರ್, ಮಹೇಶ್, ಗುರು, ಪೃಥ್ವಿ, ಮಹದೇವಸ್ವಾಮಿ, ಬಸವಣ್ಣ, ಜಗ್ಗಿ, ಶೇಖರ್, ಮಲ್ಲಿಕ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.