ADVERTISEMENT

ಚಾಮರಾಜನಗರ | ಜುಲೈ 4ರಂದು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ

ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ– ರೈತ ಮುಖಂಡರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 16:27 IST
Last Updated 23 ಜೂನ್ 2022, 16:27 IST
ಹೊನ್ನೂರು ಪ್ರಕಾಶ್
ಹೊನ್ನೂರು ಪ್ರಕಾಶ್   

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 4ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಜಿಲ್ಲಾಡಳಿತ ಭವನಕ್ಕೆ ಜಿಲ್ಲೆಯ ನಾಲ್ಕು ದಿಕ್ಕುಗಳಿಂದ ಮುತ್ತಿಗೆ ಹಾಕಲಿದೆ. ಅಲ್ಲದೇ ಬೇಡಿಕೆ ಈಡೇರುವವರೆಗೆ ಅಹೋರಾತ್ರಿ ಧರಣಿ ನಡೆಸಲಿದೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎರಡೂ ಬಣಗಳ ಜಿಲ್ಲಾ ಘಟಕದ ಅಧ್ಯಕ್ಷರಾದ ಹೊನ್ನೂರು ಪ್ರಕಾಶ್‌ ಹಾಗೂ ಹೆಬ್ಬಸೂರು ಬಸವಣ್ಣ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದರೂ, ಆಡಳಿತ ನಡೆಸುತ್ತಿರುವ ಸರ್ಕಾರಗಳು ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ರೈತರಿಗೆ ಅನುಕೂಲವಾಗುವ ಕಾಯ್ದೆ ಜಾರಿ ಮಾಡುವ ಬದಲು, ಅವರಿಗೆ ಮಾರಕವಾದ ಕಾನೂನುಗಳನ್ನು ಜಾರಿ ಮಾಡಿ, ಸಂಕಷ್ಟಕ್ಕೆ ಸಿಲುಕಿಸು ತ್ತಿವೆ. ಇದರ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿವೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ವಿಫಲರಾಗಿದ್ದಾರೆ. ಅವರ ವೈಫಲ್ಯ ಖಂಡಿಸಿ. ಜುಲೈ 4ರಂದು ಬೃಹತ್ ಪಾದಯಾತ್ರೆ ಮೂಲಕ ಜಿಲ್ಲಾಡಳಿತಭವನಕ್ಕೆ ಮುತ್ತಿಗೆ ಹಾಕಿ, ಆಹೋರಾತ್ರಿ ಧರಣಿ ನಡೆಸಲಾಗು ವುದು’ ಎಂದು ಹೇಳಿದರು.

ADVERTISEMENT

‘ಮಹದೇಶ್ವರಬೆಟ್ಟ ಸೇರಿದಂತೆ ಹನೂರು, ಕೊಳ್ಳೇಗಾಲ ಭಾಗದವರು ಯಳಂದೂರಿಗೆ ಬರಲಿದ್ದಾರೆ. ಹೆಗ್ಗವಾಡಿ, ಉಮ್ಮತ್ತೂರು ಭಾಗದವರು ಸಂತೇಮರಹಳ್ಳಿಯಲ್ಲಿ ಸೇರಲಿ ದ್ದಾರೆ. ಗುಂಡ್ಲುಪೇಟೆ ತಾಲ್ಲೂಕು ತೆರಕಣಾಂಬಿ, ಚಾಮರಾಜನಗರ ತಾಲ್ಲೂಕಿನ ಪಣ್ಯದಹುಂಡಿ ಬಳಿ, ಅಮೃತಭೂಮಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ರೈತರು ತಮ್ಮ ತಮ್ಮ ಗ್ರಾಮಗಳಿಂದ ಪಾದಯಾತ್ರೆ ಹೊರಟು, ಚಾಮರಾಜನಗರಕ್ಕೆ ಬಂದು ಜಿಲ್ಲಾಡಳಿತಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ. 5,000 ಹೆಚ್ಚು ಮಂದಿ ರೈತ ಕಾರ್ಯಕರ್ತರು ಭಾಗವಹಿಸಲಿ ದ್ದಾರೆ’ ಹೊನ್ನೂರು ಪ್ರಕಾಶ್‌ ಹೇಳಿದರು.

‘ಇಂಧನ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಮನವಿಗೆ ಸ್ಪಂದಿಸಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕು. ಇಲ್ಲದಿದ್ದಲ್ಲಿ ಅಹೋರಾತ್ರಿ ಧರಣಿ ಮುಂದುವರಿಯಲಿದೆ’ ಎಂದರು.

ಜಿಲ್ಲಾ ರೈತ ಸಂಘಟನೆಗಳ ಮುಖಂಡರಾದ ಗುರುಪ್ರಸಾದ್, ಮಹದೇವ ಪ್ರಸಾದ್, ಚಂಗಡಿ ಕರಿಯಪ್ಪ, ಜನ್ನೂರು ಶಾಂತಕುಮಾರ್, ಮರಿಯಾಲ ಮಹೇಶ್ ಹಾಜರಿದ್ದರು.

ಯಾವೆಲ್ಲಾ ಬೇಡಿಕೆಗಳು?
‘ಕರ ನಿರಾಕರಣ ಚಳವಳಿಯ ವಿದ್ಯುತ್ ಬಿಲ್ ಮನ್ನಾ ಮಾಡಬೇಕು, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಕಡಿತ ಮಾಡಬಾರದು, ಜಿಲ್ಲೆಯ ಎಲ್ಲ ಭಾಗಗಳ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು, ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಗ್ರಾಮದ ರೈತರಿಗೆ ಸಾಗುವಳಿ ಚೀಟಿ ಕೊಡಬೇಕು. ಮಹದೇಶ್ವರ ಬೆಟ್ಟದ ಸರ್ವೆ ನಂಬರ್ 124ಕ್ಕೆ ಪೋಡು ಮಾಡಿ ಕೊಡಬೇಕು, ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು, ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು, ಕಾಡು ಪ್ರಾಣಿಗಳಿಂದ ನಷ್ಟವಾಗುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಬೇಕು, ಕೈಗಾರಿಕೆ ಸ್ಥಾಪನೆಗೆ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಳ್ಳದೇ, ಬಂಜರುಭೂಮಿ ಗುರುತಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಹೊನ್ನೂರು ಪ್ರಕಾಶ್‌, ಹೆಬ್ಬಸೂರು ಬಸವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.