ADVERTISEMENT

ಚಾಮರಾಜನಗರ: ಕೃಷಿ ಹೊಂಡಗಳತ್ತ ರೈತರ ಚಿತ್ತ

ಜಿಲ್ಲೆಯಲ್ಲಿ 483 ಕೃಷಿ ಹೊಂಡಗಳ ನಿರ್ಮಾಣ; ಗುರಿ ಮೀರಿದ ಸಾಧನೆ

ಬಾಲಚಂದ್ರ ಎಚ್.
Published 5 ಡಿಸೆಂಬರ್ 2025, 4:29 IST
Last Updated 5 ಡಿಸೆಂಬರ್ 2025, 4:29 IST
ಕೃಷಿ ಹೊಂಡ ಸಾಂದರ್ಭಿಕ ಚಿತ್ರ 
ಕೃಷಿ ಹೊಂಡ ಸಾಂದರ್ಭಿಕ ಚಿತ್ರ    

ಚಾಮರಾಜನಗರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ಕೃಷಿಗೆ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಕೃಷಿ ಭಾಗ್ಯ ಯೋಜನೆ ರೈತರ ಪಾಲಿಗೆ ವರದಾನವಾಗಿದೆ.

ಜಿಲ್ಲೆಯಲ್ಲಿ ಮಳೆಯಾಶ್ರಿತ ಕೃಷಿ ಮಾಡುತ್ತಿರುವ ರೈತರು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. 2025–26ನೇ ಸಾಲಿನಲ್ಲಿ ಜಿಲ್ಲೆಗೆ 120 ಕೃಷಿ ಹೊಂಡಗಳ ನಿರ್ಮಾಣ ಗುರಿ ನಿಗದಿಯಾಗಿತ್ತು. ಯೋಜನೆಯ ಲಾಭ ಪಡೆಯಲು ರೈತರಿಂದ ನಿರೀಕ್ಷೆಗೂ ಮೀರಿ ಬೇಡಿಕೆ ಬಂದ ಪರಿಣಾಮ 483 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಹೆಚ್ಚುವರಿಯಾಗಿ 120 ಕೃಷಿ ಹೊಂಡಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಷ್ಮಾ.

ಮಳೆ ಆಶ್ರಿತ ಕೃಷಿ ಭೂಮಿ ಹೊಂದಿರುವ ಹನೂರು ತಾಲ್ಲೂಕಿನಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 221 ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಉಳಿದಂತೆ, ಗುಂಡ್ಲುಪೇಟೆ 181, ಚಾಮರಾಜನಗರ 59 ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 13 ಹೊಂಡಗಳ ನಿರ್ಮಾಣವಾಗಿವೆ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ವಾಣಿಜ್ಯ ಬೆಳೆಗೆ ಸಹಕಾರಿ: ಜಿಲ್ಲೆಯಲ್ಲಿ ಕೊಳ್ಳೇಗಾಲ, ಯಳಂದೂರು ಹಾಗೂ ಭಾಗಶಃ ಚಾಮರಾಜನಗರ ತಾಲ್ಲೂಕುಗಳಲ್ಲಿ ಮಾತ್ರ ನೀರಾವರಿ ಕೃಷಿ ಇದೆ. ಉಳಿದಂತೆ ಹನೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸಂಪೂರ್ಣ ಮಳೆಯಾಶ್ರಿತ ಕೃಷಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಮಳೆ ಅನಿಶ್ಚಿತತೆಯಿಂದಾಗಿ ಕೃಷಿ ಮಾಡುವುದು ಸವಾಲಾಗಿದ್ದು ನೀರಿನ ಲಭ್ಯತೆ ಆಧರಿಸಿ ಬೆಳೆಗಳನ್ನು ಬೆಳೆಯಲಾಗುತ್ತದೆ. 

ಸಾಮಾನ್ಯವಾಗಿ ಹನೂರು ತಾಲ್ಲೂಕಿನಲ್ಲಿ ಮಳೆ ಕೊರತೆ ಹೆಚ್ಚಾಗಿದ್ದು ರೈತರು ರಾಗಿ ಹೊರತಾಗಿ ಇತರೆ ಬೆಳೆ ಬೆಳೆಯಲು ಆಸಕ್ತಿ ತೋರುವುದಿಲ್ಲ. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡ ನಂತರ ತರಕಾರಿ, ಶುಂಠಿ, ಬಾಳೆ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.

ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಬೇಸಿಗೆಯಲ್ಲಿ ನೀರು ಹಾಯಿಸುತ್ತಾರೆ. ಬೋರ್‌ವೆಲ್‌ಗಳಲ್ಲಿ ನೀರಿನ ಒರತೆ ಹೆಚ್ಚಾಗಿದ್ದಾಗ ಕೃಷಿ ಹೊಂಡಗಳನ್ನು ತುಂಬಿಸಿ ಅವಶ್ಯಕತೆ ಇದ್ದಾಗ ಬಳಸುತ್ತಿದ್ದಾರೆ. ಇದರಿಂದ ನೀರಿನ ಗರಿಷ್ಠ ಸದ್ಬಳಕೆಯಾಗುತ್ತಿದ್ದು ವಾರ್ಷಿಕ ಹಲವು ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ.

ಸಣ್ಣ ಕೃಷಿ ಭೂಮಿ ಹಿಡುವಳಿದಾರರು ಕನಿಷ್ಠ 10 ಮೀ ಉದ್ದ, 10 ಮೀ ಅಗಲ ಹಾಗೂ 3 ಮೀ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು. ಗರಿಷ್ಠ 21 ಮೀ.ವರೆಗೂ ಕೃಷಿ ಹೊಂಡಗಳನ್ನು ಮಾಡಿಕೊಳ್ಳಲು ಅವಕಾಶವಿದೆ. 10ಮೀx10ಮೀx3ಮೀ ಕೃಷಿ ಹೊಂಡದಲ್ಲಿ 3 ಲಕ್ಷ ಲೀಟರ್ ನೀರು ಸಂಗ್ರಹ ಮಾಡಿಕೊಳ್ಳಬಹುದು. ವರ್ಷದಲ್ಲಿ ಎರಡು ಬಾರಿ ಕೃಷಿ ಹೊಂಡ ತುಂಬಿದರೂ ಒಂದು ಎಕರೆ ರಾಗಿಗೆ ಕನಿಷ್ಠ 2 ಬಾರಿ ನೀರುಣಿಸಬಹುದು ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಷ್ಮಾ. 

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡದ ಜೊತೆಗೆ ಸುತ್ತಲೂ ಬದುಗಳನ್ನು ನಿರ್ಮಾಣ ಮಾಡಿಕೊಳ್ಳುವ ಮೂಲಕವೂ ಮಳೆ ನೀರು ಸಂಗ್ರಹ ಮಾಡಿಕೊಳ್ಳಬಹುದು. ಕೃಷಿ ಹೊಂಡಗಳು ಮಳೆಯಾಶ್ರಿತ ಕೃಷಿಗೆ ಹೆಚ್ಚು ಅನುಕೂಲವಾಗಿದ್ದು ಜಮೀನಿನ ಸುತ್ತಮುತ್ತ ಇರುವ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. 

ಸುಷ್ಮಾ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ

‘ಕೃಷಿ ಹೊಂಡಗಳು ಮಳೆಯಾಶ್ರಿತ ಕೃಷಿಗೆ ಹೆಚ್ಚು ಸೂಕ್ತ’ ‘ಅಂತರ್ಜಲ ಮಟ್ಟ ಹೆಚ್ಚಳ; ಕೊಳವೆಬಾವಿಗಳ ಮರುಪೂರಣ’ ‘ಬೇಸಿಗೆಯಲ್ಲಿ ಬೆಳೆ ಬೆಳೆಯಲು ಸಹಕಾರಿ’

ಮಳೆ ಆಶ್ರಿತ ಕೃಷಿಕರಿಗೆ ನೆರವು

ಮಳೆ ಆಶ್ರಿತ ಕೃಷಿ ಮಾಡುವ ರೈತರಿಗೆ ನೆರವು ನೀಡುವ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿದೆ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಕೊರತೆ ಎದುರಾಗಬಾರದು ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂಬುದು ಯೋಜನೆಯ ಉದ್ದೇಶ. ಕೃಷಿ ಭೂಮಿಯ ಪ್ರಮಾಣಕ್ಕೆ ಅನುಗುಣವಾಗಿ ರೈತರು ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು. ಮಳೆ ನೀರಿನ ಗರಿಷ್ಠ ಸಂಗ್ರಹಣೆ ಹಾಗೂ ಸದ್ಬಳಕೆಗೆ ಕೃಷಿ ಹೊಂಡಗಳು ಸಹಕಾರಿಯಾಗಿದ್ದು ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಹೊಂಡದ ಸುತ್ತಲೂ ಬೇಲಿ ಅಳವಡಿಸಿಕೊಳ್ಳಲು ಪಾಲಿಥಿನ್ ಹೊದಿಕೆ ಹಾಕಲು ಪಂಪ್‌ಸೆಟ್‌ಗಳನ್ನು ಖರೀದಿಸಲು ಸಹಾಯಧನ ದೊರೆಯಲಿದೆ.

‘ಬೇಲಿ ನಿರ್ಮಾಣ ಕಡ್ಡಾಯ’

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳುವ ರೈತರು ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಹೊಂಡಗಳ ಸುತ್ತಲೂ ಬೇಲಿ ನಿರ್ಮಾಣ ಮಾಡಿಕೊಳ್ಳಬೇಕು ಕೃಷಿ ಹೊಂಡ ಯೋಜನೆ ಪಡೆಯಲು ರೈತರು ಅರ್ಜಿಯ ಜೊತೆಗೆ ಜಮೀನಿನ ಪಹಣಿ ಸಹಿತ ಅಗತ್ಯ ದಾಖಲಾತಿಗಳನ್ನು ಸಲ್ಲಿಕೆ ಮಾಡಿದರೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾರ್ಯಾದೇಶ ನೀಡುತ್ತಾರೆ. ರೈತರೇ ಕೃಷಿ ಹೊಂಡಗಳನ್ನು ತೋಡಿಸಿಕೊಳ್ಳಬೇಕು ನಂತರ ಅವರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ. –ಸುಷ್ಮಾ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.