ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘ ಹಾಗೂ ಆದಿ ಕರ್ನಾಟಕ ಹಾಸ್ಟೆಲ್ ಬಿಲ್ಡಿಂಗ್ ಸಂಘದಲ್ಲಿ ₹ 1.92 ಕೋಟಿ ಅವ್ಯವಹಾರ ನಡೆದಿರುವುದು ವಿಚಾರಣಾ ವರದಿಯಲ್ಲಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸಂಘದ ಆಡಳಿತಾಧಿಕಾರಿ ನೀಡಿರುವ ದೂರಿನಂತೆ ಚಾಮರಾಜನಗರ ಠಾಣೆಯಲ್ಲಿ 23 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
1974ರಿಂದ 2024–25ರ ಅವಧಿಯಲ್ಲಿ ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಡಳಿತ ಮಂಡಳಿಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ ಸೇರಿದಂತೆ ಸದಸ್ಯರ ವಿರುದ್ಧ ಸಂಘದ ಆಡಳಿತಾಧಿಕಾರಿ ಹಾಗೂ ಕೊಳ್ಳೇಗಾಲ ಉಪವಿಭಾಗಾಧಿಕಾರಿಯೂ ಆಗಿರುವ ಬಿ.ಆರ್.ಮಹೇಶ್ ನೀಡಿರುವ ದೂರಿದಂತೆ ಪ್ರಕರಣ ದಾಖಲಾಗಿದೆ.
ಯಾರ ವಿರುದ್ಧ ದೂರು: ನಂಜುಂಡಸ್ವಾಮಿ, ಎಚ್.ಎಂ.ಕೆಂಪಯ್ಯ, ಎಂ.ಮಾದಯ್ಯ, ಹನುಮಯ್ಯ, ಮಲ್ಲಿಕಾರ್ಜುನ, ಮಲ್ಲೇದೇವರು, ಪುಟ್ಟಸ್ವಾಮಿ, ಎನ್.ರಾಜಗೋಪಾಲ್, ಪುಟ್ಟಸ್ವಾಮಿ, ಲಕ್ಷ್ಮೀನರಸಿಂಹ, ಬಸವರಾಜು, ಎಂ.ಬಸವರಾಜು, ಎಸ್.ಮಹದೇವಯ್ಯ, ಕೆ.ಕಾಂತರಾಜು, ಟಿ.ಕೆ.ರಂಗಯ್ಯ, ಪ್ರಕಾಶ್, ವೆಂಕಟೇಶ್, ನಾಗರಾಜು, ನಂಜಯ್ಯ, ಕೆ.ನಾಗರಾಜ್, ಎ.ಎಸ್.ಮಲ್ಲಣ್ಣ, ಸಿ.ಕೆ.ರವಿಕುಮಾರ್, ಪಾರ್ವತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅವ್ಯವಹಾರದ ವಿವರ: 2012–13ರಿಂದ 2023–24ರವರೆಗೆ ಸಂಘದ ಮಳಿಗೆಗಳನ್ನು ಬಾಡಿಗೆ ನೀಡಲಾಗಿದ್ದು ಈ ಅವಧಿಯಲ್ಲಿ 12 ಮಳಿಗೆಗಳಿಗೆ ಪಡೆದ ಬಾಡಿಗೆ ₹ 35 ಲಕ್ಷವನ್ನು ಸಂಘದ ಲೆಕ್ಕಕ್ಕೆ ಸೇರಿಸಿಲ್ಲ, ಲೆಕ್ಕ ಪರಿಶೋಧನಾ ವರದಿಯಲ್ಲೂ ಇಲ್ಲ. ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ಗೆ ಸಂಬಂಧಿಸಿದಂತೆ 2008ರಿಂದ 2021ರವರೆಗೆ ಪ್ರತಿ ತಿಂಗಳು ₹49,214 ರಂತೆ ₹74.31 ಲಕ್ಷವನ್ನು ಸಂಘಕ್ಕೆ ಪಾವತಿದ್ದು ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಜಮೆಯಾಗಿರುವುದಿಲ್ಲ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದಿರುವ 2021 ರಿಂದ 2023ರವರೆಗಿನ ಬಾಡಿಗೆ ಹಣ ₹8.75 ಲಕ್ಷವನ್ನು ಸಂಘದ ಲೆಕ್ಕಕ್ಕೆ ಜಮೆ ಮಾಡಿಲ್ಲ. ಜೈಭೀಮ್ ಬಿಸಿನೆಸ್ ಸೌಹಾರ್ದ ಸಹಕಾರಿ ಪಾವತಿಸಿರುವ ಕಟ್ಟಡ ಮುಂಗಡ ₹20ಲಕ್ಷವನ್ನು ಹಲವು ವ್ಯಕ್ತಿಗಳ ಹೆಸರಿನಲ್ಲಿ ಹಿಂಪಡೆಯಲಾಗಿದ್ದು ವೋಚರ್‌ಗಳನ್ನು ಹಾಜರುಪಡಿಸಿಲ್ಲ.
ಜ್ಯೋತಿಗೌಡನಪುರದಲ್ಲಿರುವ ಜಮೀನನ್ನು 10 ವರ್ಷಗಳ ಗುತ್ತಿಗೆ ನೀಡಿರುವ ₹28.95 ಲಕ್ಷ ಲೆಕ್ಕಕ್ಕೆ ಜಮೆ ಮಾಡಿಲ್ಲ, ಬೂದಿತಿಟ್ಟು ಗ್ರಾಮದ ಜಮೀನಿನ ಆದಾಯದ ವಿವರ ನಮೂದಿಸಿಲ್ಲ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಸಾರ್ವಜನಿಕ ವಿದ್ಯಾರ್ಥಿ ನಿಯಲಯಕ್ಕೆ ಮಂಜೂರಾದ ಅನುದಾನ ₹14.92 ಲಕ್ಷ ನಗದು ಪುಸ್ತಕಕ್ಕೆ ಜಮೆ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಸಂಘಕ್ಕೆ ಪಾವತಿಯಾಗಿರುವ ₹10.61 ಲಕ್ಷ ನಗದು ಪುಸ್ತಕದಲ್ಲಿ ಜಮೆಯಾಗಿದ್ದರೂ ಲೆಕ್ಕ ಪರಿಶೋಧನಾ ವರದಿಯಲ್ಲಿ ಕೈಬಿಡಲಾಗಿದೆ ಎಂಬ ಆರೋಪಗಳು ವಿಚಾರಣಾ ಸಮಿತಿಯ ವರದಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.