ADVERTISEMENT

ಕಾವೇರಿ ವನ್ಯಧಾಮದಲ್ಲಿ ಬೆಂಕಿ; ನೂರಾರು ಎಕರೆ ಭಸ್ಮ

ಕೊತ್ತನೂರು ವಲಯದಲ್ಲಿ ಎರಡು ದಿನಗಳಿಂದ ಉರಿಯುತ್ತಿದೆ ಕಾಡು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 15:39 IST
Last Updated 4 ಏಪ್ರಿಲ್ 2020, 15:39 IST
ಕಾವೇರಿ ವನ್ಯಧಾಮದಲ್ಲಿ ಕಂಡು ಬಂದಿರುವ ಬೆಂಕಿ
ಕಾವೇರಿ ವನ್ಯಧಾಮದಲ್ಲಿ ಕಂಡು ಬಂದಿರುವ ಬೆಂಕಿ   

ಹನೂರು: ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದಲ್ಲಿ ಎರಡು ದಿನಗಳಿಂದ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟುಹೋಗಿದೆ.

ಚಪ್ಪರದಟ್ಟಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ಬಳಿಕ ಇಡೀ ಅರಣ್ಯ ಪ್ರದೇಶಕ್ಕೆ ಆವರಿಸಿ ಇಡೀ ದಿನ ಹೊತ್ತಿ ಉರಿದಿದೆ. ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದಾಗಲೇ ಬಹುತೇಕ ಅರಣ್ಯ ಬೆಂಕಿಗಾಹುತಿಯಾಗಿತ್ತು.

ಶುಕ್ರವಾರ ಬೆಂಕಿ ನಂದಿಸಿ ಸಿಬ್ಬಂದಿ ಕ್ಯಾಂಪ್‍ಗೆ ತೆರಳುತ್ತಿದ್ದಂತೆ ಶನಿವಾರ ಮುಂಜಾನೆ ಚಿಕ್ಕಲ್ಲೂರು ಬೀಟ್ ಸಮೀಪದ ದೊಡ್ಡಮರಳು ಹೆಗ್ಗು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ತೆರಳಿದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರಾದರೂ, ಬೆಂಕಿ ವೇಗವಾಗಿ ಹರಡುತ್ತಿದ್ದುದರಿಂದ ಹೆಣಗಾಡಬೇಕಾಯಿತು. ಸುಂಡ್ರಳ್ಳಿ ಅರಣ್ಯ ಪ್ರದೇಶದಲ್ಲೂ ಹತ್ತಾರು ಎಕರೆ ಕಾಡು ಬೆಂಕಿಗಾಹುತಿಯಾಗಿದೆ.

ADVERTISEMENT

ಕೊತ್ತನೂರು ವನ್ಯಜೀವಿ ವಲಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ಇದೆ. ವಾರದ ಹಿಂದೆ ಬೆಂಕಿ ಬಿದ್ದು ಎರಡು ಬೆಟ್ಟಗಳು ಸುಟ್ಟಿದ್ದವು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌, ‘ಕೊತ್ತನೂರು ವಲಯದಲ್ಲಿ ಎರಡು ಬೆಟ್ಟಗಳಿಗೆ ಜನರು ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿದ್ದಾರೆ. ಅದನ್ನು ನಂದಿಸಿ ಸಿಬ್ಬಂದಿ ಮರಳುತ್ತಿದ್ದಂತೆಯೇ ಮತ್ತೊಂದು ಬೆಟ್ಟಕ್ಕೆ ಹಾಕಿದ್ದಾರೆ. ಎಲ್ಲ ಸಿಬ್ಬಂದಿ ಅಲ್ಲಿ ಬೀಡುಬಿಟ್ಟಿದ್ದು, ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.

‘ಅಧಿಕಾರಿಗಳು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾಳ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸಿದ್ದರು. ಈಗ ದಿಗ್ಬಂಧನ ಹೇರಿದ ಸಂದರ್ಭದಲ್ಲಿ ಬೇರೆ ಊರುಗಳಿಂದ ಊರಿಗೆ ವಾಪಸ್ಸಾದ ಜನರು ಮಾಡಿರುವ ಕೃತ್ಯವಿರಬೇಕು ಎಂಬ ಶಂಕೆ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.