ADVERTISEMENT

ಚಾಮರಾಜನಗರ: ಕೋವಿಡ್‌ 3ನೇ ಅಲೆಯಲ್ಲಿ ಮೊದಲ ಸಾವು

ಕೋವಿಡ್‌: 195 ಪ್ರಕರಣಗಳು ದೃಢ, 64 ಮಂದಿ ಗುಣಮುಖ, 893 ಸಕ್ರಿಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 16:42 IST
Last Updated 18 ಜನವರಿ 2022, 16:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ತಾಲ್ಲೂಕಿನ ಗಣಗನೂರು ಗ್ರಾಮದ ವ್ಯಕ್ತಿಯೊಬ್ಬರು ‌ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಇದು ಕೋವಿಡ್‌ ಮೂರನೇ ಅಲೆಯಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಸಾವು.

50 ವರ್ಷ ವ್ಯಕ್ತಿಯು ಕೋವಿಡ್‌ ದೃಢಪಟ್ಟು 16ರಂದು (ಭಾನುವಾರ) ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸೋಮವಾರ (ಜ.17) ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತವು ಮಂಗಳವಾರ ಕೋವಿಡ್‌ ವರದಿಯಲ್ಲಿ ತಿಳಿಸಿದೆ.

’ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರು. ಎರಡೂ ಕಾಲುಗಳಲ್ಲಿ ನರ ದೌರ್ಬಲ್ಯ ಹೊಂದಿದ್ದರು. ಆ ಕಾರಣಕ್ಕೆ ಕೋವಿಡ್‌ ಲಸಿಕೆ ಪಡೆದಿರಲಿಲ್ಲ. ಅವರ ಮನೆಯವರೆಲ್ಲರೂ ಲಸಿಕೆ ಪಡೆದಿದ್ದರು. ಭಾನುವಾರ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಅವರು ಸ್ಪಂದಿಸಲಿಲ್ಲ‘ ಎಂದು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ’ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

ಈ ಮಧ್ಯೆ, ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 195 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 191 ಪ್ರಕರಣಗಳು ಮೈಸೂರಿನಲ್ಲಿ ದೃಢಪಟ್ಟರೆ, ನಾಲ್ಕು ಪ್ರಕರಣಗಳು ಮೈಸೂರಿನಲ್ಲಿ ವರದಿಯಾಗಿವೆ. 64 ಮಂದಿ ಗುಣಮುಖರಾಗಿದ್ದಾರೆ.

ಮಂಗಳವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 893ಕ್ಕೆ ಏರಿದೆ. ಈ ಪೈಕಿ 393 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದಾರೆ. ಐಸಿಯುನಲ್ಲಿ ಯಾರೊಬ್ಬರೂ ಇಲ್ಲ.

ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 33,784ಕ್ಕೆ ಏರಿವೆ. 32,349 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಹಾಗೂ ಕೋವಿಡ್‌ಯೇತರ ಕಾರಣಗಳಿಂದ 583 ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರ 1,932 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,744 ಮಂದಿಯ ವರದಿ ನೆಗೆಟಿವ್‌ ಬಂದಿವೆ. 191ಗೆ ಸೋಂಕು ತಗುಲಿದೆ. ಮೈಸೂರಿನಲ್ಲಿ ನಾಲ್ವರಿಗೆ ಕೋವಿಡ್‌ ದೃಢಪಟ್ಟಿದೆ.

195 ಸೋಂಕಿತರಲ್ಲಿ 13 ಮಂದಿ ಮಕ್ಕಳಿದ್ದಾರೆ. 37 ಸೋಂಕಿತರನ್ನು ಬಿಟ್ಟು ಉಳಿದವರೆಲ್ಲರೂ ಗ್ರಾಮೀಣ ಪ್ರದೇಶದವರು.

ಚಾಮರಾಜನಗರ ತಾಲ್ಲೂಕಿನಲ್ಲಿ 62, ಗುಂಡ್ಲುಪೇಟೆಯಲ್ಲಿ 44, ಕೊಳ್ಳೇಗಾಲದಲ್ಲಿ 41, ಹನೂರಿನಲ್ಲಿ 36 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 12 ಪ್ರಕರಣಗಳು ವರದಿಯಾಗಿವೆ.

ಈ ಮಧ್ಯೆ, ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ, ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಕೆ.ಸುರೇಶ್‌ ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ.

ಕೊಳ್ಳೇಗಾಲ: 14 ಮಕ್ಕಳಿಗೆ ಸೋಂಕು

ಕೊಳ್ಳೇಗಾಲ: ಇಲ್ಲಿನ ಆದರ್ಶ ವಿದ್ಯಾಲಯ ಶಾಲೆಯ 14 ಮಕ್ಕಳಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ಭಾನುವಾರ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್‌ ದೃಢಪಟ್ಟಿದ್ದರಿಂದ ಶಾಲೆಯ ಎಲ್ಲ 142 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆಗ 14 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ವಿದ್ಯಾರ್ಥಿಗಳನ್ನು ಕ್ವಾರೈಟನ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್, ಸಿಪಿಐ ಶಿವರಾಜ್ ಆರ್.ಮುಧೋಳ್ ಅವರಿಗೂ ಕೋವಿಡ್‌ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.