ADVERTISEMENT

ಚಾಮರಾಜನಗರ: ಮೊದಲ ದಿನ‌ ಕಡಿಮೆ ವಿದ್ಯಾರ್ಥಿಗಳು

ಪದವಿ ಕಾಲೇಜು ಆರಂಭ: ಲಸಿಕೆ ಪಡೆದ ಪ್ರಮಾಣಪತ್ರ, ಪೋಷಕರ ಸಮ್ಮತಿ ಪತ್ರ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:37 IST
Last Updated 27 ಜುಲೈ 2021, 2:37 IST
ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್‌ ನೀಡಿ ನಂತರ ತರಗತಿಗಳಿಗೆ ಬಿಡಲಾಯಿತು
ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್‌ ನೀಡಿ ನಂತರ ತರಗತಿಗಳಿಗೆ ಬಿಡಲಾಯಿತು   

ಚಾಮರಾಜನಗರ: ಜಿಲ್ಲೆಯ ಪದವಿ ಕಾಲೇಜುಗಳು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಸೋಮವಾರದಿಂದ ಭೌತಿಕ ತರಗತಿಗಳು ಆರಂಭವಾಗಿವೆ.

ಜಿಲ್ಲೆಯಲ್ಲಿ 16 ಪದವಿ ಕಾಲೇಜುಗಳಿವೆ. ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವೂ ಇದೆ.

ಕಾಲೇಜುಗಳು ಆರಂಭಗೊಂಡ ಮೊದಲ ದಿನ ಕಡಿಮೆ ವಿದ್ಯಾರ್ಥಿಗಳು ಬಂದಿದ್ದರು. ಸರ್ಕಾರಿ ಕಾಲೇಜುಗಳಿಗೆ ಹೋಲಿಸಿದರೆ, ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ‌ ಹೆಚ್ಚಿತ್ತು. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆಯುವುದನ್ನು‌ ಕಡ್ಡಾಯಗೊಳಿಸಲಾಗಿತ್ತು. ಕೆಲವು ಕಾಲೇಜುಗಳು ಪೋಷಕರ ಸಮ್ಮತಿ ಪತ್ರವನ್ನೂ ತರುವಂತೆ ಸೂಚಿಸಿದ್ದವು.

ADVERTISEMENT

ನಗರದ ಹೊರ ವಲಯದ ಬೇಡರಪುರದಲ್ಲಿರುವ ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಮೊದಲ ದಿನ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದರು.ಕೇಂದ್ರದಲ್ಲಿ 450 ವಿದ್ಯಾರ್ಥಿಗಳಿದ್ದು, 40ರಷ್ಟು ವಿದ್ಯಾರ್ಥಿಗಳು ಮಾತ್ರ ಬಂದಿದ್ದರು.

'ಬೋಧಕರು‌ ಹಾಗೂ ಬೋಧಕತೇತರ ಸಿಬ್ಬಂದಿ ಎಲ್ಲರೂ ಹಾಜರಿದ್ದರು. ಬಂದ ವಿದ್ಯಾರ್ಥಿಗಳಿಗೆ ತರಗತಿಗಳನ್ನು‌ ನಡೆಸಲಾಯಿತು' ಎಂದು ಅತಿಥಿ ಉಪನ್ಯಾಸಕರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

'ನಮ್ಮ ಕೇಂದ್ರಕ್ಕೆ‌ ಕೆಎಸ್‌ಆರ್‌ಟಿಸಿಯ ಮೂರು ಬಸ್‌ಗಳು‌ ಬರುತ್ತವೆ. ಸೋಮವಾರ ಬಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ‌ ಬರುವುದಕ್ಕೆ‌ ತೊಂದರೆಯಾಗಿರಬಹುದು. ಮಂಗಳವಾರದಿಂದ ಬಸ್ಗ‌ಳು ಬರಲಿವೆ. ಕೇಂದ್ರದಲ್ಲಿ ಎಲ್ಲ ಕೋವಿಡ್ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಒಂದೆರಡು ದಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ' ಎಂದು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ಅವರು ಮಾಹಿತಿ‌ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಸ್ನಾತಕೋತ್ತರ ಕೋರ್ಸ್ ನವರೂ ಸೇರಿ) 780 ವಿದ್ಯಾರ್ಥಿಗಳಿದ್ದಾರೆ. ಮೊದಲ ದಿನ 195 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ.

'ಹಾಜರಾದ ವಿದ್ಯಾರ್ಥಿಗಳೆಲ್ಲರೂ ಲಸಿಕೆ ಪಡೆದಿದ್ದಾರೆ. ಲಸಿಕೆ‌ ಪಡೆದಿರುವ ಪ್ರಮಾಣಪತ್ರ ಹಾಗೂ ಪೋಷಕರ ಸಮ್ಮತಿ ಪತ್ರವನ್ನು ಪರಿಶೀಲಿಸಿದ ನಂತರವೇ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಬಿಡಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ‌ ಸಂಖ್ಯೆ ಹೆಚ್ಚಲಿದೆ' ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ‌ ಚಂದ್ರಮ್ಮ ಅವರು ಹೇಳಿದರು.

ನಗರದಲ್ಲೇ ಇರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 450 ವಿದ್ಯಾರ್ಥಿನಿಯರಿದ್ದು, 300 ಮಂದಿ ಹಾಜರಾಗಿದ್ದಾರೆ.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಪದವಿ ವಿಭಾಗದಲ್ಲಿ 1,088 ವಿದ್ಯಾರ್ಥಿಗಳಿದ್ದು, ಮೊದಲ ದಿನ ಶೇ 80ರಷ್ಟು ಮಂದಿ ಹಾಜರಾಗಿದ್ದಾರೆ.

'ಕೋವಿಡ್ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸಲಾಗಿದೆ. ಲಸಿಕೆ ಪಡೆದಿರುವ‌ ಪ್ರಮಾಣಪತ್ರ ತೋರಿಸಿದ ವಿದ್ಯಾರ್ಥಿಗಳನ್ನು ಮಾತ್ರ ತರಗತಿಗೆ ಬಿಟ್ಟಿದ್ದೇವೆ. ಸುರಕ್ಷಿತ ಅಂತರ, ಸ್ಯಾನಿಟೈಸರ್ ಪೂರೈಸಲು ಕ್ರಮ ಕೈಗೊಂಡಿದ್ದೇವೆ' ಜೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ಮರಿಸ್ವಾಮಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಲಸಿಕೆ‌ ನೀಡಿಕೆ ಬಹುತೇಕ ಪೂರ್ಣ: ಡಿಎಚ್ಒ‌
'ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ‌ ಜಿಲ್ಲೆಯಲ್ಲಿ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗಿದೆ. ವಿಶೇಷ ಅಭಿಯಾನವನ್ನೂ ನಡೆಸಲಾಗಿದೆ‌. ಶೇ 98 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಕಿಸಿಕೊಳ್ಳದವರು ಇದ್ದರೆ, ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಲಸಿಕಾ ಕೇಂದ್ರಗಳಲ್ಲಿ ಕಾಲೇಜಿನ ಗುರುತಿನ ಚೀಟಿ ತೋರಿಸಿದರೆ ಸಾಕು' ಎಂದು‌ ಜಿಲ್ಲಾ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.