ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಜ.26 ರಿಂದ 28ರವರೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ಭಾಗಗಳ ಕುಶಲಕರ್ಮಿಗಳು ತಯಾರಿಸಿರುವ ಹಸ್ತಶಿಲ್ಪ ಮತ್ತು ಪರಂಪರೆಯ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗುವುದು.
ಗ್ರಾಮೀಣ ಕುಶಲಕರ್ಮಿಗಳಿಗೆ ಮಾರುಕಟ್ಟೆ ಕಲ್ಪಿಸುವುದು ಹಾಗೂ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡವುದು, ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಮಾಹಿತಿ, ವೈವಿದ್ಯತೆ, ಪ್ರಕೃತಿ ಸೌಂದರ್ಯ, ಕಲೆ ಹಾಗೂ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಹೂವಿನಿಂದ ಅಲಂಕೃತಗೊಂಡಿರುವ ಇಂಡಿಯಾ ಗೇಟ್ ಹಾಗೂ ಆನೆಗಳ ಮಾದರಿ, ಸಿರಿಧಾನ್ಯಗಳಿಂದ ತಯಾರಿಸುವ ಕಲಾಕೃತಿ, ಸೆಲ್ಫಿ ಪಾಯಿಂಟ್, ಸಾಲುಮರದ ತಿಮ್ಮಕ್ಕ ಅವರ ಮರಳು ಕಲಾಕೃತಿ, ತರಕಾರಿಗಳಿಂದ ತಯಾರಿಸಿದ ಕಲಾಕೃತಿ, ವರ್ಟಿಕಲ್ ಗಾರ್ಡನ್ ನಿರ್ಮಾಣ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.
ರೈತರು ಬೆಳೆದ ಹಣ್ಣು, ತರಕಾರಿ, ಹೂವುಗಳಿಂದ 5,000 ಹೂವಿನ ಕುಂಡಗಳನ್ನು ಸಿದ್ಧಪಡಿಸಲಾಗಿದೆ. ಮಾರಿಗೋಲ್ಡ್, ಕೆಲೊಸಿಯಾ, ಜಿನ್ನಿಯ, ಸಲವಿಯ, ಪೆಟುನಿಯ, ಫೊಲೊಕ್ಸ್, ವಿಂಕ ರೋಸಿಯಾ, ಬ್ಲಾಸಂ ಸಹಿತ ವಿವಿಧ ಜಾತಿಯ ಗಿಡಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು ತಾಂತ್ರಿಕ ಮಾಹಿತಿಯನ್ನು ಪ್ರದರ್ಶನ ಮಾಡಲಾಗಿದೆ.
ತೋಟಗಾರಿಕೆ, ಕೃಷಿ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ, ಅರಣ್ಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಮಳಿಗೆಗಳನ್ನು ತೆರೆಯಲಾಗಿದೆ. ಸಾರ್ವಜನಿಕರಿಗೆ ವೈಜ್ಞಾನಿಕ ಬೇಸಾಯದ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ, ತಾಂತ್ರಿಕ ಸಲಹಾ ಕೇಂದ್ರ, ಮಾರಾಟ ಕೇಂದ್ರಗಳು, ನರ್ಸರಿ ಕೇಂದ್ರ, ಕೃಷಿ, ತೋಟಗಾರಿಕೆ ಇಲಾಖೆಯ ಯಂತ್ರೋಪಕರಣ, ಬ್ಯಾಂಕ್, ಕೃಷಿ ವಿಜ್ಞಾನ ಕೇಂದ್ರ, ಉತ್ಕೃಷ್ಟ ಕೇಂದ್ರಗಳು ರೈತರಿಗೆ ಉಪಯುಕ್ತ ಮಾಹಿತಿ ನೀಡಲಿವೆ.
ಅಣಬೆ ಬೇಸಾಯ, ಜೇನುಕೃಷಿ, ಸಮಗ್ರ, ಸಾವಯವ ಬೇಸಾಯ ಪದ್ಧತಿ-ಪರಿಕರ, ಹಣ್ಣು ಹಾಗೂ ಅಲಂಕಾರಿಕ ಗಿಡಗಳ ಮಾರಾಟ ಮಳಿಗೆ ಇರಲಿದೆ. ಸರ್ಕಾರದ ವಿವಿಧ ಯೋಜನೆಗಳು ಹಾಗೂ ತಾಂತ್ರಿಕತೆ ಬಿಂಬಿಸುವ 25 ಮಳಿಗೆಗಳು, ಕೃಷಿ, ಮೀನುಗಾರಿಕೆ, ಪಶುಪಾಲನೆ, ರೇಷ್ಮೆ, ಎನ್.ಎಲ್.ಆರ್.ಎಂ, ನರೇಗಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೌಶಲಾಭಿವೃದ್ಧಿ, ಸಮಾಜ ಕಲ್ಯಾಣ, ಆಯುಷ್, ಅರಣ್ಯ, ಶಿಕ್ಷಣ, ಖಾದಿ ಗ್ರಾಮೋದ್ಯೋಗ, ಕೆ.ವಿ.ಕೆ ಹರದನಹಳ್ಳಿ, ಕೃಷಿ ಮಹಾವಿದ್ಯಾಲಯ, ಆರೋಗ್ಯ ಇಲಾಖೆಗಳ ಮಳಿಗೆಗಳು ಫಲಪುಷ್ಪ ಪ್ರದರ್ಶನದಲ್ಲಿ ಇರಲಿವೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.