ADVERTISEMENT

ದಸರಾ ಹಬ್ಬದ ಬಳಿಕ ತಗ್ಗಿದ ಹೂವಿನ ಧಾರಣೆ ಅಬ್ಬರ

ದಸರಾ ಹಬ್ಬದ ಬಳಿಕ ತಗ್ಗಿದ ಹೂವಿನ ಧಾರಣೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 16:10 IST
Last Updated 18 ಅಕ್ಟೋಬರ್ 2021, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಆಯುಧಪೂಜೆ, ವಿಜಯದಶಮಿ ಬಳಿಕ ಹೂವಿನ ಮಾರುಕಟ್ಟೆಯಲ್ಲಿ ಧಾರಣೆಯ ಅಬ್ಬರ ಇಳಿಮುಖವಾಗಿದ್ದು, ಬೇಡಿಕೆ ಸಂಪೂರ್ಣವಾಗಿ ಕುಸಿದಿದೆ.

ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್‌ ಬೆಲೆ ಇಳಿದಿದ್ದು, ಈರುಳ್ಳಿ ಬೆಲೆ ಹೆಚ್ಚಾಗಿದೆ. ಹಣ್ಣುಗಳು, ಮಾಂಸದ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯಲ್ಲಿರುವ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರ ಕೆಜಿಗೆ ₹400, ಕಾಕಡಕ್ಕೆ ₹50–₹60 ಇತ್ತು. ಹಬ್ಬದ ಸಮಯದಲ್ಲಿ 200ರವರೆಗೂ ಇದ್ದ ಸೇವಂತಿಗೆಗೆ ಈಗ ₹50–₹60ವರೆಗೆ ಇದೆ. ಸುಗಂಧರಾಜ ಹೂವಿಗೆ ಬೇಡಿಕೆ ಸಂಪೂರ್ಣ ಕುಸಿದಿದ್ದು, ₹10ರಿಂದ ₹20ಗೆ ಮಾರಾಟವಾಗುತ್ತಿದೆ. ಹಬ್ಬದ ಬಳಿಕವೂ ಕೊಂಚ ಬೇಡಿಕೆ ಉಳಿಸಿಕೊಂಡಿರುವ ಚೆಂಡು ಹೂವಿಗೆ ₹40 ಬೆಲೆ ಇದೆ.

ADVERTISEMENT

‘ಆಯುಧಪೂಜೆಯ ಸಮಯದಲ್ಲಿ ಎಲ್ಲ ಹೂವುಗಳ ಬೆಲೆ ಹೆಚ್ಚಾಗಿದ್ದವು. ವಿಜಯ ದಶಮಿ ಕಳೆದ ಮಾರನೇ ದಿನಕ್ಕೆ ಬೆಲೆ ಇಳಿಕೆಯಾಗಿದೆ. ದೀಪಾವಳಿವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈರುಳ್ಳಿ ದರ ಏರುಮುಖ: ತರಕಾರಿ ಮಾರುಕಟ್ಟೆಯಲ್ಲಿ ಹಲವು ತಿಂಗಳ ನಂತರ ಈರುಳ್ಳಿ ಬೆಲೆ ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಹಲವು ವಾರಗಳಿಂದ 25ರಿಂದ ₹30ರ ಆಸುಪಾಸಿನಲ್ಲಿದ್ದ ಕೆಜಿ ಈರುಳ್ಳಿಯ ಬೆಲೆ ಈ ವಾರ ₹40ಕ್ಕೆ ಏರಿದೆ. ಹೊರಗಡೆ ₹50ರಿಂದ ₹60ರವರೆಗೂ ಬೆಲೆ ಇದೆ.

ಮಾರುಕಟ್ಟೆಗೆ ಈರುಳ್ಳಿ ಬರುವ ಪ್ರಮಾಣ ವಾರದಿಂದ ಕಡಿಮೆ ಇದೆ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ತಿಳಿಸಿದರು.

ಎರಡು ಮೂರು ವಾರಗಳಿಂದ ಕೆಜಿಗೆ ₹60ರಷ್ಟಿದ್ದ ಬೀನ್ಸ್‌ ಬೆಲೆ ₹40ಕ್ಕೆ ಕುಸಿದಿದೆ. ಟೊಮೆಟೊ (₹30), ಕ್ಯಾರೆಟ್‌ (₹40) ಮೂಲಂಗಿ (₹20) ಸೇರಿದಂತೆ ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರೆದಿದೆ.

ತರಕಾರಿಗಳ ಪೈಕಿ ನುಗ್ಗೆಕಾಯಿ ಅತಿ ದುಬಾರಿ ತರಕಾರಿ. ಕೆಜಿಗೆ ₹120 ಇದೆ. ಈಗ ನುಗ್ಗೆಕಾಯಿ ಆಗುವ ಸಮಯ ಅಲ್ಲದಿರುವುದರಿಂದ ಬೆಲೆ ಹೆಚ್ಚಿದೆ ಎಂದು ಮಧು ಹೇಳಿದರು.

ಹಣ್ಣುಗಳ ಧಾರಣೆ ಯಥಾಸ್ಥಿತಿ ಮುಂದುವರೆದಿದೆ. ನಾಗಪುರ ಕಿತ್ತಳೆ ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಎಲ್ಲೆಡೆಯೂ ಮಾರಾಟ ಭರಾಟೆ ಹೆಚ್ಚಿದೆ.

ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.