ADVERTISEMENT

ಫಲಪುಷ್ಪ ಪ್ರದರ್ಶನಕ್ಕೆ ಜನ ಸಾಗರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 16:33 IST
Last Updated 29 ಸೆಪ್ಟೆಂಬರ್ 2022, 16:33 IST
ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಗುರುವಾರ ರಾತ್ರಿ ಸೇರಿದ್ದ ಜನಸ್ತೋಮ
ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಗುರುವಾರ ರಾತ್ರಿ ಸೇರಿದ್ದ ಜನಸ್ತೋಮ   

ಚಾಮರಾಜನಗರ: ಜಿಲ್ಲಾ ದಸರಾ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಗುರುವಾರ ರಾತ್ರಿ ಜನಸಾಗರವೇ ನೆರೆದಿತ್ತು.

ಮೊದಲ ದಿನವಾದ ಬುಧವಾರ ಸಂಜೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಎರಡನೇ ದಿನ ಗುರುವಾರ ಹಗಲು ಹೊತ್ತಿನಲ್ಲಿ ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದವರ ಸಂಖ್ಯೆ ಕಡಿಮೆ ಇತ್ತು.

ಸಂಜೆಯಾಗುತ್ತಿದ್ದಂತೆಯೇ ಜಿಲ್ಲಾಡಳಿತ ಭವನಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು. ಪ್ರದರ್ಶನ ನಡೆಯುತ್ತಿದ್ದ ಪ್ರದೇಶದಲ್ಲಿ ಒಂದಷ್ಟು ಹೊತ್ತು ನಿಂತುಕೊಂಡು ಮಾತನಾಡುವಷ್ಟೂ ಸ್ಥಳವಿರಲಿಲ್ಲ. ಜನರೆಲ್ಲ ಸರತಿ ಸಾಲಿನಲ್ಲಿ ಒತ್ತೊತ್ತಾಗಿ ನಿಂತು ಫಲಪುಷ್ಪಗಳನ್ನು ವೀಕ್ಷಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಾಕಲಾಗಿರುವ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ಬಂದವರು ಕೂಡ ಜಿಲ್ಲಾಡಳಿತ ಭವನಕ್ಕೆ ಮಾಡಿರುವ ವಿದ್ಯುತ್‌ ಅಲಂಕಾರ ಹಾಗೂ ಫಲಪುಷ್ಪ ಪ್ರದರ್ಶನ ನೋಡಲು ಬಂದಿದ್ದರು.

‘ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಫಲಪುಷ್ಪ ಪ್ರದರ್ಶನಕ್ಕೆ ಇಷ್ಟು ಜನರು ಸೇರಿರುವುದನ್ನು ನಾವು ನೋಡಿಲ್ಲ’ ಎಂದು ಬಂದಿದ್ದ ಹಲವರು ಮಾತನಾಡುತ್ತಿದ್ದರು.

ಬಿ.ರಾಚಯ್ಯ ಜೋಡಿ ರಸ್ತೆಯಿಂದ ಜಿಲ್ಲಾಡಳಿತ ಭವನಕ್ಕೆ ಹೋಗುವ ರಸ್ತೆಯಲ್ಲಿ ವಾಹನ ಹಾಗೂ ಜನರ ದಟ್ಟಣೆಯೂ ಕಂಡು ಬಂತು.

ವಿಸ್ತರಿಸಲು ಒತ್ತಾಯ: ಈ ಮಧ್ಯೆ, ಫಲಪುಷ್ಪ ಪ್ರದರ್ಶನವನ್ನು ಇನ್ನೆೆರಡು ದಿನಗಳ ಕಾಲ ವಿಸ್ತರಿಸಬೇಕು ಎಂಬ ಕೂಗು ಜನರಿಂದ ಕೇಳಿ ಬಂದಿದೆ.

ಜಿಲ್ಲಾಡಳಿತದ ವೇಳಾಪಟ್ಟಿ ಪ್ರಕಾರ ಶುಕ್ರವಾರ ಪ್ರದರ್ಶನ ಕೊನೆಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಶನಿವಾರ ಮತ್ತು ಭಾನುವಾರವೂ ಪ್ರದರ್ಶನ ಮುಂದುವರಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.