
ಚಾಮರಾಜನಗರ: ‘ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನಪದ ಸಂಸ್ಕೃತಿಯನ್ನು ತುಳಿದು ವೈದಿಕ ಸಂಸ್ಕೃತಿಯನ್ನು ಹುಟ್ಟುಹಾಕಲು ಮೌಢ್ಯ ಹಾಗೂ ಕಂದಾಚಾರಗಳನ್ನು ಜನಪದದ ತಲೆಗೆ ಕಟ್ಟಿದರು’ ಎಂದು ರಂಗಕರ್ಮಿ ಎಚ್.ಜನಾರ್ದನ್ ಬೇಸರ ವ್ಯಕ್ತಪಡಿಸಿದರು.
ರಂಗದೀವಿಗೆ ಸಂಸ್ಥೆಯ ವತಿಯಿಂದ ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕೆಲವರು ಸ್ವಾರ್ಥ ಸಾಧನೆಗಾಗಿ ಸಮಾಜದಲ್ಲಿ ಮೌಢ್ಯವನ್ನು ಹರಡುತ್ತಾ ಜನಪದವನ್ನು ನಾಶಮಾಡುವ ಸಂಚು ನಡೆಸುತ್ತಿದ್ದು ಇದರ ಬಗ್ಗೆ ಎಚ್ಚರವಾಗಿರಬೇಕು’ ಎಂದರು.
‘ಜ್ಞಾನ ಹಂಚುವ ಕೇಂದ್ರಗಳಾದ ಶಾಲೆಗಳು ಮುಚ್ಚುತ್ತಿವೆ. ಬದಲಿಗೆ ಮೌಢ್ಯ ಹಂಚುವ ದೇವಸ್ಥಾನಗಳು ತಲೆ ಎತ್ತುತ್ತಿವೆ. ಧರ್ಮ, ಜಾತಿಗಳ ಮಧ್ಯೆ ದ್ವೇಷ ಹುಟ್ಟುಹಾಕುವ, ಸೌಹಾರ್ದ ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ವಿಘಟನೆಗಳಿಗೆಲ್ಲ ಜನಪದ ಸಂಸ್ಕೃತಿ ಮದ್ದಾಗಬಲ್ಲದು. ಸಹಾರ್ದತೆ, ಸಂಬಂಧ, ಸಮಾನತೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಆಶಯವನ್ನು ಜನಪದ ಹೊಂದಿದೆ’ ಎಂದು ಹೇಳಿದರು.
‘ನಾಡಿನಲ್ಲಿ ಜನಪದ ನೆಲೆಯೂರದಿದ್ದರೆ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿತ್ತು. ಆರ್ಥಿಕ ಸಂಕಷ್ಟ, ಸವಾಲುಗಳ ನಡುವೆಯೂ ಜಿಲ್ಲೆಯಲ್ಲಿ ಜನಪದ ಜೀವಂತವಾಗಿ ಉಳಿದಿರುವುದು ಸಂತಸದ ವಿಚಾರ. ಆದರೆ, ಈ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿರುವ ಜನಪದ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಲೆಮಹದೇಶ್ವರ, ಮಂಟೇಸ್ವಾಮಿ ಅವರಂತಹ ಜನಪದ ಸಂಸ್ಕೃತಿಯ ನಾಯಕರು ನೆಲೆಸಿರುವ ಪುಣ್ಯ ನೆಲದಲ್ಲಿ ಜನಪದ ಮತ್ತಷ್ಟು ಸಮೃದ್ಧವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಸಮಾಜದ ಜನಪದ ಕಲೆಗಳನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಬೇಕು’ ಎಂದು ಆಶಿಸಿದರು.
‘ಕಾಡಾ’ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಕುರಿತು ರಚಿತವಾಗಿರುವ ಅರ್ಥಗರ್ಭಿತ ಜಾನಪದ ಸಾಹಿತ್ಯದ ಸಾರವನ್ನು ಸಮಾಜ ಅರಿಯಬೇಕು. ಸೋಬಾನೆ, ಕಂಸಾಳೆ, ತತ್ವಪದಗಳು ಸೇರಿದಂತೆ ಹಲವು ಕಲಾಪ್ರಕಾರಗಳು ನಶಿಸುವ ಹಂತ ತಲುಪಿದ್ದು ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದರು.
ದೊಡ್ಡಗವಿ ಬಸಪ್ಪ, ಹೊನ್ನಮ್ಮ, ಶಾಂತರಾಜು, ಜಾನಪದ ಮಹೇಶ್, ಚಿನ್ನಪ್ಪ ಅವರಿಗೆ ‘ಜನಪದ ಸೇವಾ ರತ್ನ ಪ್ರಶಸ್ತಿ’, ಶ್ರೀನಿದಿ ಕುದರ್ ಅವರಿಗೆ ‘ಕಲಾ ಪೋಷಕ ರತ್ನ’, ಸುರೇಶ್ ಗೌಡ ಹಾಗೂ ಶಿವಣ್ಣ ಅವರಿಗೆ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಂಗದೀವಿಗೆ ಸಂಸ್ಥೆಯ ಅಧ್ಯಕ್ಷ ಕಲೆ ನಟರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಚುಡಾ’ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ, ಸಾಹಿತಿ ಸೋಮಶೇಖರ ಬಿಸಲವಾಡಿ, ಸುರೇಶ್ ನಾಗ್ ಸೇರಿದಂತೆ ಹಲವು ಕಲಾವಿದರು ಇದ್ದರು.
‘ಜನಪದ ಸಾಹಿತ್ಯ ದಾಖಲೀಕರಣವಾಗಲಿ’
ಬಾಯಿಂದ ಬಾಯಿಗೆ ತಲುಪುತ್ತಿರುವ ಜನಪದ ಸಾಹಿತ್ಯವು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಬರವಣಿಗೆಯ ರೂಪದಲ್ಲಿ ದಾಖಲಾಗಬೇಕು. ಇಲ್ಲವಾದರೆ ಜಾನಪದ ಕಲಾವಿದರೊಳಗಿರುವ ಕಲಾ ಪ್ರತಿಭೆ ಅವರೊಂದಿಗೆ ಮಣ್ಣಾಗುವ ಆತಂಕ ಎದುರಾಗಲಿದೆ. ಯುವಪೀಳಿಗೆಗೆ ಜನಪದ ಕಲೆಯನ್ನು ಕಲಿಸುವ ಕೆಲಸವಾಗಬೇಕು. ಚಲನಚಿತ್ರ ಧಾರಾವಾಹಿ ರಿಯಾಲಿಟಿ ಶೋಗಳ ಅಬ್ಬರದಲ್ಲಿ ಜಾನಪದ ಕಲೆಗಳು ನಶಿಸಿಹೋಗದಂತೆ ಎಚ್ಚರವಹಿಸಬೇಕು ಎಂದು ‘ಕಾಡಾ’ ಅಧ್ಯಕ್ಷ ಪಿ.ಮರಿಸ್ವಾಮಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.