ADVERTISEMENT

ಕೊಳ್ಳೇಗಾಲ: ‘ಜಾನಪದ ಪರಂಪರೆ ವೇದಗಳಿಗಿಂತಲೂ ಪ್ರಾಚೀನ’

ಜಾನಪದ ಪರಂಪರೆ ವಿಚಾರಗೋಷ್ಠಿಯಲ್ಲಿ ಸಾಹಿತಿ ಎಸ್‌.ಶಿವರಾಜಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:19 IST
Last Updated 9 ಫೆಬ್ರುವರಿ 2023, 6:19 IST
ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಯೊಂದರಲ್ಲಿ ಕಂಡು ಬಂದ ಸಾಹಿತ್ಯಾಸಕ್ತರು
ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಯೊಂದರಲ್ಲಿ ಕಂಡು ಬಂದ ಸಾಹಿತ್ಯಾಸಕ್ತರು   

ಕೊಳ್ಳೇಗಾಲ: ಜಾನಪದ ಪರಂಪರೆ ವೇದಗಳ ಕಾಲಕ್ಕಿಂತಲೂ ಪ್ರಾಚೀನವಾದುದು. ಹಾಗಾಗಿ, ಈ ಪರಂಪರೆಯನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ’ ಎಂದು ಸಾಹಿತಿ ಡಾ.ಎಸ್‌.ಶಿವರಾಜಪ್ಪ ಬುಧವಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ನಡೆದ ‘ಜಾನಪದ ಪರಂಪರೆ’ ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾನಪದ ಪರಂಪರೆಗೆ ತನ್ನದೇ ಆದ ಇತಿಹಾಸವಿದ್ದು, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂದಿನ ಕಾಲ
ದಲ್ಲಿ ಜಾನಪದ ಕಂಸಾಳೆ ಗಾಯಕರಿಗೆ ಗೌರವ ಸಿಗುತ್ತಿಲ್ಲ. ಆದರೆ ಚಲನಚಿತ್ರದ ಗಾಯಕರಿಗೆ ಗೌರವ ಸಿಗುತ್ತಿದೆ ಇದು ಬೇಸರದ ಸಂಗತಿ’ ಎಂದರು.

ರಾಜಕೀಯ ವ್ಯಕ್ತಿಗಳು ಚಾಮರಾಜನಗರ ಜಿಲ್ಲೆಯನ್ನು ಶಾಪಗ್ರಸ್ತ ಜಿಲ್ಲೆ ಎಂದು ಹೇಳುತ್ತಾರೆ ಅವರಿಗೆ ಎಷ್ಟು ಧೈರ್ಯ? ಇದು ಜನಪದ ಕಲೆಗಳ ತವರೂರು. ಸಿದ್ಧರು, ಸಾಧು, ಸಂತರು, ಸೂಫಿಗಳು, ಓಡಾಡಿದ ನೆಲೆಬೀಡು. ರಾಜ್ಯದ 31 ಜಿಲ್ಲೆಗಳಲ್ಲಿ ಅತ್ಯಂತ ಮಹತ್ವ ಜಿಲ್ಲೆಯೆಂದರೆ ಅದು ಚಾಮರಾಜನಗರ. ಜಾನಪದ ಜಗತ್ತು ವಿಸ್ಮಯಗಳ ಆಗರ. ಭಾರತದ ಜಾನಪದ ಕಲೆಯನ್ನು ಮೊದಲು ಅಧ್ಯಯನ ಮಾಡಿದ್ದು ವಿದೇಶಿಯರು. ಆ ನಂತರ ಅದರಲ್ಲಿ ಅಡಗಿರುವ ಅಮೂಲ್ಯ ರತ್ನಗಳು ನಮಗೆ ಗೋಚರಿಸಿತು’ ಎಂದರು.

ADVERTISEMENT

ಮಹದೇಶ್ವರ ಕಾವ್ಯದ ಬಗ್ಗೆ ವಿಚಾರ ಮಂಡಿಸಿದ ಲೇಖಕ ಮದ್ದೂರು ದೊರೆಸ್ವಾಮಿ, ‘ಮಹದೇಶ್ವರರು ಪವಾಡ ಪುರುಷ. ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಜಾನಪದ ಕಾವ್ಯವಿದ್ದರೆ ಅದು ಮಲೆ ಮಹದೇಶ್ವರರ ಕಾವ್ಯ. ಕತ್ತಲ ರಾಜ್ಯವನ್ನು ಬೆಳಕಿಗೆ ತಂದ ಮಹಾನ್ ಪುರುಷ ಮಹದೇಶ್ವರ’ ಎಂದು ಬಣ್ಣಿಸಿದರು.

ಮಂಟೇಸ್ವಾಮಿ ಕಾವ್ಯದ ಬಗ್ಗೆ ಮಾತನಾಡಿದ ಸಾಹಿತಿ ಮಹೇಶ್ ಹರವೆ, ‘ಮಂಟೇಸ್ವಾಮಿ ಪರಂಪರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಜಾತಿ, ಧರ್ಮ, ನುಡಿ ಭಕ್ತಿ, ಭಾವ, ಪ್ರತಿಯೊಂದು ಅಂಶಗಳು ಇಲ್ಲಿವೆ. ಪವಾಡ ಪುರುಷರು ಓಡಾಡಿದ ಸ್ಥಳ ಎಂದರೆ ಅದು ಚಾಮರಾಜನಗರ ಜಿಲ್ಲೆ. ಈ ಜಗತ್ತಿನಲ್ಲಿ ಪರಂಪರೆ ಇದ್ದರೆ ಅದು ಮಂಟೇಸ್ವಾಮಿ ಪರಂಪರೆ ಮಾತ್ರ. ಈ ಪರಂಪರೆಯಲ್ಲಿ ಇಂದಿಗೂ ಜೀವಂತವಾದ ಅನೇಕ ಸಾಕ್ಷಿಗಳು ನಮಗೆ ಸಿಗುತ್ತವೆ’ ಎಂದರು.

ಲೇಖಕ ಡಾ.ಕೇಶವ ಪ್ರಸಾದ್ ಬಿಳಿಗಿರಿ ರಂಗಸ್ವಾಮಿ ಕಾವ್ಯದ ಬಗ್ಗೆ ವಿಚಾರ ಮಂಡಿಸುತ್ತಾ, ‘ಪೌರಾಣಿಕ ಚಾರಿತ್ರಿಕ ಹಿನ್ನೆಲೆಯನ್ನು ನೋಡಿದರೆ ಬಿಳಿಗಿರಂಗನ ಸ್ವಾಮಿ ಪರಂಪರೆಯು ಬಹಳ ದೊಡ್ಡದು. ಬಿಳಿಗಿರಿ ರಂಗನಾಥನ ಸ್ವಾಮಿಯ ಅನೇಕ ಜನಪದ ಪರಂಪರೆಗಳನ್ನು ಒಳಗೊಂಡಿದೆ’ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಮಹಾದೇವ ಶಂಕನಪುರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಸಮಾಜ ಸೇವಕ ಜಗದೀಶ ಶಂಕನಪುರ ಇತರರು ಇದ್ದರು.

ಜನರ ಕೊರತೆ: ವಿಚಾರಗೋಷ್ಠಿಯ ಸಂದರ್ಭದಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಕಡಿಮೆ ಇತ್ತು. ಖಾಲಿ ಕುರ್ಚಿಗಳು ಎದ್ದು ಕಾಣಿಸುತ್ತಿತ್ತು.

ಪುಸ್ತಕ ಮಳಿಗೆಗಳು: ಸಮ್ಮೇಳನದಲ್ಲಿ 10ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಜನರನ್ನು ಸೆಳೆದವು. ಸರ್ಕಾರದ ವಿವಿಧ ಇಲಾಖೆಗಳು ತಮ್ಮಲ್ಲಿರುವ ಸೌಲಭ್ಯಗಳನ್ನು ವಿವರಿಸುವ, ಪ್ರದರ್ಶಿಸುವ ಮಳಿಗೆಗಳನ್ನು ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.