ADVERTISEMENT

ಚಾಮರಾಜನಗರ-ಹೋಟೆಲ್‌ ತಿಂಡಿ: ಶೇ 5ರಿಂದ ಶೇ 10ರಷ್ಟು ಏರಿಕೆ

ಹೋಟೆಲ್‌ ತಿಂಡಿ: ಶೇ 5ರಿಂದ ಶೇ 10ರಷ್ಟು ಏರಿಕೆ, ಹಲವು ಮಾಲೀಕರಿಂದ ಕಾದು ನೋಡುವ ತಂತ್ರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 4:23 IST
Last Updated 10 ನವೆಂಬರ್ 2021, 4:23 IST
ಚಾಮರಾಜನಗರದ ಹೋಟೆಲೊಂದರಲ್ಲಿ ಮಂಗಳವಾರ ಆಹಾರ ಸೇವಿಸುತ್ತಿದ್ದ ಗ್ರಾಹಕರು
ಚಾಮರಾಜನಗರದ ಹೋಟೆಲೊಂದರಲ್ಲಿ ಮಂಗಳವಾರ ಆಹಾರ ಸೇವಿಸುತ್ತಿದ್ದ ಗ್ರಾಹಕರು   

ಚಾಮರಾಜನಗರ: ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾರಣಕ್ಕೆ ಜಿಲ್ಲೆಯಲ್ಲೂ ಕೆಲವು ಹೋಟೆಲ್‌ಗಳಲ್ಲಿ ಮಂಗಳವಾರದಿಂದ ಕೆಲವು ಆಹಾರಗಳ ದರದಲ್ಲಿ ಏರಿಕೆಯಾಗಿದೆ.

ಹೋಟೆಲ್‌ ಸಂಘದ ವ್ಯಾಪ್ತಿಯಲ್ಲಿ ಬರುವ ಕೆಲವು ಮಾಲೀಕರು ಕೆಲವೇ ಕೆಲವು ಆಹಾರಗಳ ಬೆಲೆಯನ್ನು ₹5 ರಿಂದ ₹10 ರವರೆಗೆ ಹೆಚ್ಚಿಸಿದ್ದಾರೆ. ಇನ್ನೂ ಕೆಲವು ಮಾಲೀಕರು ತಕ್ಷಣಕ್ಕೆ ಬೆಲೆ ಏರಿಸಿಲ್ಲ. ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲು ಯೋಚಿಸುತ್ತಿದ್ದಾರೆ. ಸಣ್ಣ ಹೋಟೆಲ್‌, ಕ್ಯಾಂಟೀನ್‌ಗಳ ಆಹಾರಗಳ ದರಗಳಲ್ಲಿ ವ್ಯತ್ಯಾಸವಾಗಿಲ್ಲ.

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಐದಾರು ಹೋಟೆಲ್‌ಗಳಲ್ಲಿ ಬೆಲೆ ಹೆಚ್ಚಳವಾಗಿದೆ. ದೋಸೆ, ಊಟದಂತಹ ಕೆಲವೇ ಕೆಲವು ಆಹಾರಗಳ ದರವನ್ನು ಮಾಲೀಕರು ಹೆಚ್ಚಿಸಿದ್ದಾರೆ. ದೋಸೆಗೆ ₹ 5 ಹೆಚ್ಚಿಸಿದ್ದರೆ, ಪ್ಲೇಟ್‌ ಊಟದ ದರದಲ್ಲಿ ₹ 10 ಹೆಚ್ಚಳವಾಗಿದೆ.

ADVERTISEMENT

ಕೊಳ್ಳೇಗಾಲ, ಗುಂಡ್ಲುಪೇಟೆ ಸೇರಿದಂತೆ ಇತರ ತಾಲ್ಲೂಕು ಕೇಂದ್ರಗಳ ಹೋಟೆಲ್‌ ಮಾಲೀಕರು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳುತ್ತಿದ್ದರೂ, ಸದ್ಯಕ್ಕೆ ಈಗಿನ ದರದಲ್ಲೇ ತಿಂಡಿ ಒದಗಿಸುತ್ತಿರುವುದಾಗಿಹೇಳಿದ್ದಾರೆ. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಪ‍ದಾಧಿಕಾರಿಗಳು ಚರ್ಚೆ ನಡೆಸಿದ್ದಾರೆ. ರಾಜ್ಯ ಸಂಘದಿಂದ ಬಂದಿರುವ ಸೂಚನೆಯಂತೆ ಶೇ 5ರಿಂದ ಶೇ 10ರಷ್ಟು ಹೆಚ್ಚಿಸುವ ಬಗ್ಗೆಯೂ ನಿರ್ಧರಿಸಿದ್ದಾರೆ. ಅಂತಿಮವಾಗಿ ದರ ಏರಿಕೆ ನಿರ್ಧಾರ ಮಾಲೀಕರ ವಿವೇಚನೆಗೆ ಬಿಡಲಾಗಿದೆ.

ದರ ಏರಿಕೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷಹಾಗೂ ಶೃಂಗಾರ್‌ ಹೋಟೆಲ್‌ ಮಾಲೀಕ ನಂದ್ಯಪ್ಪ ಶೆಟ್ಟಿ ಅವರು, ‘ಗರಿಷ್ಠ ಶೇ 10ರ ಮಿತಿಗೆ ಒಳಪಟ್ಟು ದರ ಏರಿಕೆ ಮಾಡಲಾಗಿದೆ. ಕೆಲವೇ ಕೆಲವು ಆಹಾರಗಳ ದರದಲ್ಲಿ ಮಾತ್ರ ಹೆಚ್ಚಳ ಮಾಡಲಾಗಿದೆ. ನನ್ನ ಹೋಟೆಲ್‌ನಲ್ಲಿ ದೋಸೆಗೆ ₹ 5 ಹಾಗೂ ಊಟಕ್ಕೆ ₹ 10 ಜಾಸ್ತಿ ಮಾಡಲಾಗಿದೆ. ಇಡ್ಲಿ, ವಡೆ, ಟೀ –ಕಾಫಿ, ಉತ್ತರ ಭಾರತ ಶೈಲಿಯ ಆಹಾರಗಳ ಬೆಲೆಯನ್ನು ಹೆಚ್ಚಿಸಿಲ್ಲ’ ಎಂದರು.

‘ಮಾಲೀಕರ ಸಂಘದಲ್ಲಿ ದರ ಏರಿಕೆ ಬಗ್ಗೆ ಚರ್ಚೆ ನಡೆದಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ನಮಗೆ ಹೊರೆಯಾಗಿದೆ. ಆದರೆ, ನಮ್ಮ ಹೋಟೆಲ್‌ನಲ್ಲಿ ಇನ್ನೂ ದರ ಹೆಚ್ಚು ಮಾಡಿಲ್ಲ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ, ರೋಟಿ ಘರ್‌, ರಸೋಯಿ ಹೋಟೆಲ್‌ಗಳ ಮಾಲೀಕ ಪ್ರತಾಪ್‌ ಅವರು ತಿಳಿಸಿದರು.

ದರ ಏರಿಕೆ ಅನಿವಾರ್ಯ: ನಗರದ ಸಂಪಿಗೆ ರಸ್ತೆಯ ಭಾಗ್ಯಲಕ್ಷ್ಮಿ ಹೋಟೆಲ್‌ ಮಾಲೀಕ ಶಂಕರ್‌ ಅವರು ಪ್ರತಿಕ್ರಿಯಿಸಿ, ‘ಕೋವಿಡ್‌ ನಂತರ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಹೊರೆ ಜಾಸ್ತಿಯಾಗುತ್ತಿದೆ. ಎರಡು ವರ್ಷಗಳಿಂದ ದರ ಹೆಚ್ಚಿಸಿಲ್ಲ. ಈಗ ಏರಿಕೆ ಮಾಡವುದು ಅನಿವಾರ್ಯ. ಎಲ್ಲ ಆಹಾರಗಳ ಬೆಲೆ ಹೆಚ್ಚಿಸುವುದಿಲ್ಲ’ ಎಂದು ಹೇಳಿದರು.

ಹೋಟೆಲ್‌ ಮಾಲೀಕರ ಅಭಿಪ್ರಾಯ

ಕೋವಿಡ್‌ ಇರುವ ಕಾರಣದಿಂದ ಹೋಟೆಲ್‌ಗೆ ಜನರು ಹೆಚ್ಚು ಬರುತ್ತಿಲ್ಲ. ಕೆಲಸ ಮಾಡುವವರ ಕೂಲಿಯೂ ಜಾಸ್ತಿಯಾಗಿದೆ. ಈಗ ನಮಗೆ ಶೇ 25ರಷ್ಟು ಹೊರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚು ಮಾಡುತ್ತೇವೆ. ಮಾಡಲೇ ಬೇಕಾದ ಪರಿಸ್ಥಿತಿ ಬಂದಿದೆ.

– ಪ್ರದೀಪ್,ಉದ್ಯಮ್ ಭವನ ಹೋಟೆಲ್ ಮಾಲೀಕ, ಗುಂಡ್ಲುಪೇಟೆ

ಅಡುಗೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಾಗಾಗಿ, ತಿಂಡಿ ಮತ್ತು ಊಟದ ದರವನ್ನು ಹೆಚ್ಚಳ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ. ಮುಂದಿನ ವಾರದಿಂದ ಎಲ್ಲಾ ದರಗಳನ್ನು ಏರಿಸುತ್ತೇವೆ. ಅಡುಗೆ ಸಾಮಗ್ರಿಗಳ ಬೆಲೆ ಕಡಿಮೆಯಾದರೆ ದರ ಹೆಚ್ಚಿಸುವುದಿಲ್ಲ

–ನಟರಾಜಪ್ಪ,ಹರ್ಷ ಹೋಟೆಲ್‌ ಮಾಲೀಕ, ಕೊಳ್ಳೇಗಾಲ

ದಿನಸಿ, ತರಕಾರಿ ಬೆಲೆ ಎರಡು ಪಟ್ಟು ಏರಿಕೆಯಾಗಿದೆ. ನಾಲ್ಕು ತಿಂಗಳ ಹಿಂದೆ ₹1,200 ಇದ್ದ ಅನಿಲ ಸಿಲಿಂಡರ್ ಬೆಲೆ ಈಗ ₹ 2,080ರೂ ಆಗಿದೆ. ಇದರಿಂದಾಗಿ ತಿಂಡಿ, ಊಟದಲ್ಲಿ ಶೇ 5ರಿಂದ 10 ಏರಿಕೆ ಮಾಡುವಂತೆ ಹೋಟೆಲ್ ಮಾಲೀಕರ ಸಂಘದಿಂದ ಸೂಚನೆ ಬಂದಿದೆ. ಇದುವರೆಗೂ ನಮ್ಮ ಹೋಟೆಲ್‌ನಲ್ಲಿ ದರ ಏರಿಸಿಲ್ಲ. ಮುಂದೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಲಾಗುವುದು

–ನಿರಂಜನ್,ಅನ್ನಪೂರ್ಣೇಶ್ವರಿ ಹೋಟೆಲ್ ಮಾಲೀಕ, ಹನೂರು

ಬೆಲೆ ಏರಿಕೆಯ ಬಿಸಿ ನಮಗೆ ಹೆಚ್ಚಾಗಿಯೇ ತಟ್ಟಿದೆ. ಆಹಾರ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಹಾಗಿದ್ದರೂ ಊಟ ಮತ್ತು ತಿಂಡಿಯ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿಲ್ಲ. ಸಾಮಾನ್ಯ ದರದಲ್ಲೇ ಗ್ರಾಹಕರಿಗೆ ನೀಡಲಾಗುತ್ತಿದೆ.

–ಬಾಲು,ಫ್ರೆಂಡ್ಸ್ ಹೋಟೆಲ್ ಮಾಲೀಕ, ಯಳಂದೂರು ಪಟ್ಟಣ

ಬೆಲೆ ಏರಿಕೆಯಿಂದಾಗಿ ನಮ್ಮ ಮೇಲೆ ಹೆಚ್ಚುವರಿ ಹೊರೆ ಬಿದ್ದಿರುವುದು ನಿಜ. ನಗರದಲ್ಲಿ ಕೆಲವು ಹೋಟೆಲ್‌ಗಳಲ್ಲಿ ಆಹಾರಗಳ ದರ ಹೆಚ್ಚಳ ಮಾಡಿದ್ದಾರೆ. ಸಣ್ಣ ಹೋಟೆಲ್‌ಗಳಲ್ಲಿ ಯಥಾಸ್ಥಿತಿ ಮುಂದುವರೆದಿದೆ. ನಾವೂ ಕೂಡ ದರ ಹೆಚ್ಚಳ ಮಾಡಿಲ್ಲ. ಈಗಿನ ದರದಲ್ಲೇ ಕೊಡುತ್ತಿದ್ದೇವೆ

–ಗೋಪಿ,ಗೋಪಿ ಟಿಫಾನೀಸ್‌ ಮಾಲೀಕ, ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.