
ಯಳಂದೂರು: ‘ಜಾನುವಾರುಗಳಿಗೆ ಕಾಣಿಸಿಕೊಳ್ಳುವ ಕಾಲು-ಬಾಯಿ ರೋಗಕ್ಕೆ ಇದೇ ನ.3 ರಿಂದ ಡಿ.2 ತನಕ ಲಸಿಕೆ ನೀಡುತ್ತಿದ್ದು, ರೈತರು ಲಸಿಕಾ ಸಿಬ್ಬಂದಿಗಳೊಡನೆ ಸಹಕರಿಸಬೇಕು’ ಎಂದು ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಎಸ್.ಶಿವರಾಜು ಹೇಳಿದರು.
ತಾಲ್ಲೂಕಿನ ಹೊನ್ನೂರು, ಕಟ್ನವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 10,885 ದನಗಳು, ಹಸು, ಎಮ್ಮೆಗಳಿವೆ. 4 ತಿಂಗಳು ತುಂಬಿದ ಎಲ್ಲ ಸಾಕು ಪ್ರಾಣಿಗಳಿಗೂ ಲಸಿಕೆ ಹಾಕಲಾಗುತ್ತದೆ. ಪೊಲಿಯೊ ಲಸಿಕೆ ಮಾದರಿಯಲ್ಲಿ ಪ್ರತಿ ರೈತರ ಮನೆಗೆ ತೆರಳಿ ಮುಂಜಾನೆ 6 ರಿಂದ ಬೆಳಿಗ್ಗೆ 10ರ ತನಕ ಲಸಿಕೆ ನೀಡಲಾಗುತ್ತದೆ ಎಂದರು.
ಎನ್ಎಡಿಸಿಪಿ ಯೋಜನೆಯಡಿ 8ನೇ ಸುತ್ತಿನ ಲಸಿಕೆ ನೀಡುತ್ತಿದ್ದು, ತಾಲ್ಲೂಕಿನ 12 ಪಂಚಾಯಿತಿ ವ್ಯಾಪ್ತಿಯಲ್ಲಿ 58 ಬ್ಲಾಕ್ಗಳನ್ನು ರಚಿಸಿ, ಪ್ರತಿ ದಿನ 5 ತಂಡಗಳು ಪ್ರತಿ ಬ್ಲಾಕಿನ 90 ರಿಂದ 100 ಪ್ರಾಣಿಗಳಿಗೆ ಚುಚ್ಚುಮದ್ದು ನೀಡಲು ಯೋಜನೆ ರೂಪಿಸಲಾಗಿದೆ. ಲಸಿಕೆ ಹಾಕಿದ ನಂತರ ಪ್ರತಿ ಪ್ರಾಣಿಯ ಕಿವಿಗೆ ಆಧಾರ್ ನಂಬರ್ ಮಾದರಿಯಲ್ಲಿ ಸಂಖ್ಯೆ ಟ್ಯಾಗ್ ಮಾಡಲಾಗುತ್ತದೆ. ಇದನ್ನು ಭಾರತ್ ಪಶುಧನ್ ಆ್ಯಪ್ನಲ್ಲಿ ದಾಖಲಿಸಲಾಗುತ್ತದೆ. ಲಸಿಕೆ ಹಾಕಿದ ರಾಸುಗಳನ್ನು ಆ್ಯಪ್ ಮೂಲಕ ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ರಾಸುಗಳಿಗೆ ತೀವ್ರಜ್ವರ, ಬಾಯಲ್ಲಿ ಜೊಲ್ಲು, ನಾಲಿಗೆಯಲ್ಲಿ ಹುಣ್ಣು, ಗೊರಸಿನಲ್ಲಿ ಗಾಯಗಳು ಕಾಲುಬಾಯಿ ಲಕ್ಷಣಗಳಾಗಿವೆ. ಇದರಿಂದ ಜಾನುವಾರುಗಳು ಮೇವು ತಿನ್ನುವುದನ್ನು ಕಡಿಮೆ ಮಾಡುತ್ತವೆ. ಸುಸ್ತು ಕಾಣಿಸಿಕೊಳ್ಳುತ್ತದೆ ಎಂದು ಜಾಗೃತಿ ಮೂಡಿಸಲಾಯಿತು.
ಇಲಾಖೆಯ ಅಪರ ನಿರ್ದೇಶಕ ಪ್ರಸಾದ್ ಮೂರ್ತಿ, ಉಪ ನಿರ್ದೇಶಕ ಬಿ.ಮಂಜುನಾಥ್ ಮತ್ತು ಲಸಿಕೆದಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.