ADVERTISEMENT

ಅರಣ್ಯ ಒತ್ತುವರಿ | ಆನೆ ಸಹಜ ಜೀವನಕ್ಕೆ ತೊಡಕು: ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:42 IST
Last Updated 13 ಆಗಸ್ಟ್ 2025, 2:42 IST
ಗುಂಡ್ಲುಪೇಟೆ ತಾಲ್ಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿದರು
ಗುಂಡ್ಲುಪೇಟೆ ತಾಲ್ಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿದರು   

ಗುಂಡ್ಲುಪೇಟೆ: ‘ಅರಣ್ಯ ಒತ್ತುವರಿ ಹಾಗೂ ಕಾಡಿನ ನಾಶ ಆನೆಗಳ ಸಹಜ ಜೀವನಕ್ಕೆ ತೊಡಕಾಗಿದೆ’ ಎಂದು ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಹೇಳಿದರು. 

ತಾಲ್ಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಡಿನಲ್ಲಿ ಆನೆಗಳಿಗೆ ಹೇರಳವಾಗಿ ದೊರೆಯುತ್ತಿದ್ದ ಹುಲ್ಲು, ಬಿದಿರು, ಮರಗಳ ತೊಗಟೆ, ರೆಂಬೆ ಕಡಿಮೆಯಾಗಿ ಬದಲಿಗೆ ಲಂಟಾನ, ಪಾರ್ಥೇನಿಯಂ, ಕ್ಯಾಸಿಯ ಮುಂತಾದ ಕಳೆ ಸಸ್ಯಗಳು ಕಂಟಕವಾಗಿ ಪರಿಣಮಿಸಿವೆ. ಹಾಗಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ರೈತರು ಬೆಳೆದಿರುವ ಭತ್ತ, ಕಬ್ಬು, ಬಾಳೆ, ತೆಂಗು ಇತ್ಯಾದಿ ಬೆಳೆಗಳನ್ನು ನಾಶ ಮಾಡುತ್ತವೆ. ಜೊತೆಗೆ ಮನುಷ್ಯನ ಮೇಲೂ ದಾಳಿ ಮಾಡುತ್ತವೆ’ ಎಂದು ತಿಳಿಸಿದರು.

ADVERTISEMENT

‘ಮನುಷ್ಯನ ದುರಾಸೆಯಿಂದ ಉಂಟಾಗಿರುವ ಸಮಸ್ಯೆಯನ್ನು ಮಾನವ ಸರಿಪಡಿಸಬೇಕೇ ಹೊರತು ಪ್ರಾಣಿಗಳಲ್ಲ ಎಂಬ ಸತ್ಯ ನಮಗೆ ಅರಿವಾಗಬೇಕು. ಆಕಸ್ಮಿಕವಾಗಿ ಯಾವುದಾದರೂ ಕಾಡು ಪ್ರಾಣಿಗಳು ಆಹಾರ ಅರಸಿ ಜಮೀನು ಅಥವಾ ಊರಿಗೆ ಬಂದರೆ ತೊಂದರೆ ಕೊಡದೆ ಅರಣ್ಯ ಇಲಾಖೆಗೆ ತಿಳಿಸಿ ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ವನ್ಯ ಜೀವಿಗಳ ಸಂರಕ್ಷಣೆ ಮಾಡೋಣ. ಇದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ’ ಎಂದರು.

‘ಆನೆಗಳು ಅವಿಭಕ್ತ ಕುಟುಂಬದಂತೆ ಗುಂಪಾಗಿ ವಾಸಿಸುತ್ತವೆ. ಗುಂಪಿನಲ್ಲಿರುವ ಹಿರಿಯ ಹೆಣ್ಣಾನೆ ಹಿಂಡನ್ನು ಮುನ್ನಡೆಸುತ್ತದೆ. ದೈತ್ಯ ಪ್ರಾಣಿ ಆನೆಯ ತೂಕ ಸುಮಾರು 4,500 ಕೆಜಿ ಯಿಂದ 5,700 ಕೆಜಿ ಇರುತ್ತದೆ. ಆನೆಗಳು ದಿನವೊಂದಕ್ಕೆ ಸುಮಾರು 200 ಕೆಜಿ ಆಹಾರ ಮತ್ತು 150 ಲೀಟರ್ ನೀರು ಸೇವಿಸುತ್ತವೆ. ಇವು ಒಂದೇ ಕಡೆ ನೆಲೆ ನಿಲ್ಲದೆ ಆಹಾರ ಸೇವಿಸುತ್ತಾ ದಿನಕ್ಕೆ ಸುಮಾರು 20 ಕಿ.ಮೀವರೆಗೂ ನಡೆದಾಡುತ್ತವೆ’ ಎಂದು ತಿಳಿಸಿದರು.

ನೈಸರ್ಗಿಕ ಕಾಡು ಬೆಳೆಸುವುದರಲ್ಲಿ ಆನೆಗಳ ಪಾತ್ರ ಮಹತ್ತರವಾದುದು. ಆನೆ ಒಂದು ದಿನಕ್ಕೆ ಹಾಕುವ ಲದ್ದಿಯಲ್ಲಿ ಸುಮಾರು 10ರಿಂದ 15 ಕೆಜಿ ವಿವಿಧ ರೀತಿಯ ಬೀಜಗಳು ಇರುತ್ತವೆ. ನಂತರ ಈ ಬೀಜಗಳು ಮಳೆ, ಗಾಳಿ ಹಾಗೂ ನೀರಿನ ಮೂಲಕ ಕಾಡಿನಲ್ಲೆಲ್ಲ ಪ್ರಸರಣವಾಗಿ ಲಕ್ಷಾಂತರ ಗಿಡಗಳು ಬೆಳೆದು ಸಸ್ಯ ಸಂಪತ್ತನ್ನು ಹೆಚ್ಚಿಸುತ್ತವೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ‘ರಾಜ್ಯದಲ್ಲಿ ಹೆಚ್ಚು ಆನೆಗಳಿರುವುದು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಇದು ತಾಲ್ಲೂಕಿಗೆ ಹೆಮ್ಮೆಯ ವಿಷಯ’ ಎಂದರು.

ಆನೆಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಉಪನ್ಯಾಸ ನೀಡಿದರು.

ಶಿಕ್ಷಕರಾದ ನಂದಿನಿ, ವಿನೋದಾ, ಕವಿತಾ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.