ADVERTISEMENT

ಮಡಿದ ಸಿಬ್ಬಂದಿ, ಅಧಿಕಾರಿಗಳ ಸ್ಮರಣೆ ಕರ್ತವ್ಯ: ನ್ಯಾಯಾಧೀಶ

ಅರಣ್ಯ ಹುತಾತ್ಮರ ದಿನಾಚರಣೆ: ಸ್ಮಾರಕಕ್ಕೆ ಗಣ್ಯರಿಂದ ಪುಷ್ಪನಮನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 8:17 IST
Last Updated 11 ಸೆಪ್ಟೆಂಬರ್ 2020, 8:17 IST
ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್‌ ಅವರು ನಮನ ಸಲ್ಲಿಸಿದರು
ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್‌ ಅವರು ನಮನ ಸಲ್ಲಿಸಿದರು   

ಚಾಮರಾಜನಗರ: ರಾಷ್ಟ್ರೀಯ ಅರ‌ಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ನಗರದ ಸಸ್ಯ ಕ್ಷೇತ್ರದಲ್ಲಿರುವ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸ‌ಲಾಯಿತು.

ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್‌ ಹರ್ಷಲ್‌ ನಾರಾಯಣರಾವ್‌, ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ ಕುಮಾರ್‌, ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಸೇರಿದಂತೆ ವಿವಿಧ ಗಣ್ಯರು ಸ್ಮಾರಕ್ಕೆ ಪುಷ್ಪಗುಚ್ಛ ಇಟ್ಟು ನಮನ ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶ ಡಿ.ವಿನಯ್ ಅವರು, ‘ಗಡಿಯಲ್ಲಿ ದೇಶ ಕಾಯುವ ಸೈನಿಕರ ರೀತಿಯಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅರಣ್ಯದಲ್ಲಿ ಎಂತಹ ವಾತಾವರಣ ಹಾಗೂ ಪರಿಸ್ಥಿತಿ ಇರುತ್ತದೆ ಎಂಬುದನ್ನು ನಾನು ಬಲ್ಲೆ. ಅಲ್ಲಿ ಯಾವುದೇ ಸೌಲಭ್ಯಗಳಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಗಲು ರಾತ್ರಿ ಎನ್ನದೇ, ಜೀವವನ್ನು ಪಣಕ್ಕಿಟ್ಟು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿರುತ್ತಾರೆ’ ಎಂದು ಹೇಳಿದರು.

ADVERTISEMENT

‘ಅರಣ್ಯ ಸಂರಕ್ಷಣೆಗಾಗಿ ಪ್ರಾಣವನ್ನು ತ್ಯಾಗ ಮಾಡಿದ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿಯನ್ನು ನಾವು ನೆನೆಯಲೇ ಬೇಕು. ಅವರ ಕುಟುಂಬಕ್ಕೂ ನಾವು ಗೌರವ ಕೊಡಲೇ ಬೇಕು. ಆ ನಿಟ್ಟಿನಲ್ಲಿ ಹುತಾತ್ಮರ ದಿನಾಚರಣೆ ಆಯೋಜಿಸುತ್ತಿರುವುದು ಸಂತಸದ ವಿಚಾರ’ ಎಂದು ಅವರು ಹೇಳಿದರು.

‘ಮೊದಲಿಗೆ ಹೋಲಿಸಿದರೆ, ಈಗ ಪರಿಸ್ಥಿತಿ ಸುಧಾರಿಸಿದೆ. ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆಹಾರ ವಸ್ತುಗಳು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಇಲಾಖೆ ಒದಗಿಸುತ್ತಿದೆ’ ಎಂದರು.

ಆನೆ ದಾಳಿಯಲ್ಲಿ ಮೃತಪಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್‌ ಅವರ ಉದಾಹರಣೆ ನೀಡಿದ ನ್ಯಾಯಾಧೀಶರು, ‘ಅರಣ್ಯ ಇಲಾಖೆಯಲ್ಲಿ ಮೇಲಿನ ಹಂತದಿಂದ ಕೆಳಹಂತದವರೆಗೂ ಎಲ್ಲರೂ ಅಪಾಯದ ಸ್ಥಿತಿಯಲ್ಲೇ ಕೆಲಸ ಮಾಡುತ್ತಾರೆ. ಅಪಾಯ ಭತ್ಯೆ ನೀಡುವ ವ್ಯವಸ್ಥೆಯೂ ಇದೆ’ ಎಂದು ಹೇಳಿದರು.

ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್ ಅವರು ಕರ್ತವ್ಯದ ಸಂದರ್ಭದಲ್ಲಿ ಮಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹೆಸರು ಓದಿದರು.

ಹುತಾತ್ಮರ ಗೌರವಾರ್ಥ ಮೂರು ಸುತ್ತು ಗುಂಡು ಹಾರಿಸಲಾಯಿತು. ಎರಡು ನಿಮಿಷಗಳ ಮೌನಾಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.