ADVERTISEMENT

ಹನೂರು: ‘ಜನ–ವನ’ ನಡುವೆ ಸಾರಿಗೆ ಇಂದಿನಿಂದ

ಕಾಡಂಚಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ನಡುವಿನ ಬಾಂಧವ್ಯ ವೃದ್ಧಿಗೆ ಕ್ರಮ

ಬಿ.ಬಸವರಾಜು
Published 9 ಡಿಸೆಂಬರ್ 2025, 2:31 IST
Last Updated 9 ಡಿಸೆಂಬರ್ 2025, 2:31 IST
ಪಚ್ಚೆದೊಡ್ಡಿ ಗ್ರಾಮದಿಂದ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯಲು ಬಳಸಲಾಗುವ ಸಫಾರಿ ವಾಹನ
ಪಚ್ಚೆದೊಡ್ಡಿ ಗ್ರಾಮದಿಂದ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯಲು ಬಳಸಲಾಗುವ ಸಫಾರಿ ವಾಹನ   

ಹನೂರು: ಹುಲಿಗಳ ಸರಣಿ ಸಾವು, ರೈತರ ಬೆಳೆ ನಾಶ, ಪರಿಹಾರ ವಿಳಂಬ, ಹೆಚ್ಚಾದ ಮಾನವ ಪ್ರಾಣಿ ಸಂಘರ್ಷದಂತಹ ಪ್ರಕರಣಗಳಿಂದ ಕಾಡಂಚಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಹೆಚ್ಚಾಗಿದ್ದ ಅಂತರವನ್ನು ತಗ್ಗಿಸಲು, ಅರಣ್ಯ ಇಲಾಖೆಯು ‘ಜನವನ ಸೇತುವೆ’ ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿದೆ.

ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಒಳಗಿರುವ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಗ್ರಾಮದಿಂದ ಶಾಲೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ವಿದ್ಯಾರ್ಥಿಗಳನ್ನು ವಾಹನದಲ್ಲಿ ಶಾಲೆಗೆ ಕರೆದೊಯ್ಯಲಾಗುವುದು ಹಾಗೂ ಮರಳಿ ಗ್ರಾಮಕ್ಕೆ ಕರೆತರಲಾಗುವುದು. ಈ ವಿಭಿನ್ನ ಕಾರ್ಯಕ್ರಮಕ್ಕೆ ನ.9ರಂದು ಅಧಿಕೃತ ಚಾಲನೆ ದೊರೆಯಲಿದೆ.

ವನ್ಯದಾಮದಲ್ಲಿ ಹುಲಿಗಳ ಸರಣಿ ಸಾವಿನ ಬಳಿಕ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಬಂಧ ಪೂರಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾದ ಅಧಿಕಾರಿಗಳು ಗ್ರಾಮಗಳಲ್ಲಿ ನಿರಂತರ ಸಭೆಗಳನ್ನು ನಡೆಸಿದ್ದರು.

ADVERTISEMENT

‘ಗ್ರಾಮಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು, ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಹಾಗೂ ಜನ ವನ ಸೇತುವೆ ಸಾರಿಗೆ ಪುನರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಅದರಂತೆ ಮೊದಲ ಹೆಜ್ಜೆಯಾಗಿ ಪಚ್ಚೆ ದೊಡ್ಡಿ ಗ್ರಾಮಕ್ಕೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

‘ಗ್ರಾಮದಿಂದ ಅಜ್ಜೀಪುರ ಶಾಲೆಗೆ ತೆರಳುತ್ತಿರುವ 13 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಾಹನದ ಸೇವೆ ದೊರೆಯಲಿದೆ’ ಎನ್ನುತ್ತಾರೆ ಅಧಿಕಾರಿಗಳು.

ಎಲ್ಲರಿಗೂ ಸೌಲಭ್ಯ ಸಿಗಲಿ:

2020-21ರಲ್ಲಿ ಜನ-ವನ ಸೇತುವೆ ಸಾರಿಗೆ ಕಾರ್ಯಕ್ರಮ ಅನುಷ್ಠಾನಗೊಂಡಿತ್ತು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಕಾಡಂಚಿನ ಜನರಿಗೂ ವಾಹನದ ಸೌಲಭ್ಯ ದೊರೆಯುತ್ತಿತ್ತು. ವೃದ್ಧರು, ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗಳಿಗೆ ತೆರಳು, ಪಟ್ಟಣಗಳಿಂದ ದಿನನಿತ್ಯದ ಆಹಾರ ಪದಾರ್ಥ ಹಾಗೂ ಮನೆಯ ಸಾಮಾಗ್ರಿಗಳನ್ನು ತರಲು ಜನ-ವನ ಸಾರಿಗೆ ಉಪಯುಕ್ತವಾಗಿತ್ತು.

‘ಗ್ರಾಮ ಹಾಗೂ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಸ್ಥರ ಅನುಕೂಲಕ್ಕಾಗಿ ಬಿಡಲಾಗಿದ್ದ 3 ವಾಹನಗಳಿಂದ ಸ್ಥಳೀಯರಿಗೆ ಅನುಕೂಲವಾಗಿತ್ತು. ಆದರೆ, ನಂತರ ನಿರ್ವಹಣೆ ಕೊರತೆಯಿಂದಾಗಿ ಸೇವೆ ಸ್ಥಗಿತವಾಗಿತ್ತು. ವಿವಿಧ ಇಲಾಖೆಗಳಿಗೆ ನಿಯೋಜಿಸಿದ್ದ ವಾಹನಗಳನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆದು ಕಾಡಂಚಿನ ಜನರ ಬಳಕೆಗೆ ಬಿಡಬೇಕು’ ಎಂದು ಒತ್ತಾಯಿಸುತ್ತಾರೆ ಕಾಂಚಳ್ಳಿ ಗ್ರಾಮದ ಜಡೇಸ್ವಾಮಿ ಮತ್ತು ಪಚ್ಚೆದೊಡ್ಡಿ ಗ್ರಾಮದ ನಾರಾಯಣಗೌಡ.

ಸಫಾರಿ ವಾಹನ ಬಳಕೆ:

‘ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆ ಜೊತೆಗೆ ಅರಣ್ಯವಾಸಿಗಳ ರಕ್ಷಣೆಯೂ ಆದ್ಯತೆಯ ವಿಚಾರ. ಸಫಾರಿಗೆ ಬಳಸುತ್ತಿದ್ದ ವಾಹನಗಳನ್ನು ಮಕ್ಕಳಿಗಾಗಿ ಬಳಸಲು ತೀರ್ಮಾನಿಸಿದ್ದೇವೆ’ ಎನ್ನುತ್ತಾರೆ ಹನೂರು ಬಫರ್ ವಲಯದ ವಲಯ ಅರಣ್ಯಾಧಿಕಾರಿ ಕೆ.ಎಂ.ನಾಗರಾಜು.

‘ತಾತ್ಕಾಲಿಕವಾಗಿ ಸಫಾರಿ ವಾಹನ’ ಜನ-ವನ ಸೇತುವೆ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದ ವಾಹನಗಳು ಬೇರೆ ಬೇರೆ ಇಲಾಖೆಯಲ್ಲಿ ಇರುವುದರಿಂದ ಅವುಗಳನ್ನು ಇಲಾಖೆಯ ವಶಕ್ಕೆ ಪಡೆಯಲು ಕಾಲಾವಕಾಶ ಬೇಕು. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಸಫಾರಿ ವಾಹನವನ್ನೇ ಬಳಸುತ್ತೇವೆ.
–ಭಾಸ್ಕರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ

ವರದಿ ಪರಿಣಾಮ

ವನ್ಯಜೀವಿಗಳ ಸರಣಿ ಸಾವು ಮಾನವ ಪ್ರಾಣಿ ಸಂಘರ್ಷದಿಂದ ಅರಣ್ಯ ಇಲಾಖೆ ಹಾಗೂ ಕಾಡಂಚಿನ ನಿವಾಸಿಗಳ ನಡುವೆ ಕಂದಕ ಸೃಷ್ಟಿಯಾಗಿರುವ ಹಾಗೂ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಎದುರಾಗಿರುವ ಕುರಿತು ಅ.10 ರಂದು ‘ಮರು ಆರಂಭವಾಗಲಿ ಜನ-ವನ ಸೇತುವೆ’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಗಮನ ಸಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.