
ಚಾಮರಾಜನಗರ: ‘ಜಗತ್ತಿಗೆ ಅನ್ನ ನೀಡುವ ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದು, ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಮತ್ತು ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರಿಗೆ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಬದ್ದವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಅರಿವಿದ್ದು ರೈತಪರ ಯೋಜನೆಗಳ ಜಾರಿಗೆ ಒತ್ತು ನೀಡಲಾಗಿದೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದೆ ಎಂದರು.
ಸಿರಿಧಾನ್ಯ ಬದುಕಿಗೆ ಬಹುಮುಖ್ಯವಾಗಿದ್ದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಬಳಕೆ ಮಾಡಬೇಕು. ಈಚೆಗೆ ಸಿರಿಧಾನ್ಯಗಳ ಜನರ ಒಲವು ಹೆಚ್ಚಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಸಿರಿಧಾನ್ಯ ಬೆಳೆಯಲು ಹಾಗೂ ಬಳಸಲು ಪ್ರೋತ್ಸಾಹ ನೀಡುತ್ತಿದೆ. ರೈತ ಸಮುದಾಯದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಮಳೆಯಾಶ್ರಿತ ಪ್ರದೇಶಗಳಲ್ಲಿ ಹಿಂದೆ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣಲದಲ್ಲಿ ಬೆಳೆಯಲಾಗುತ್ತಿತ್ತು. ನೀರಾವರಿ ಸೌಲಭ್ಯಗಳ ಲಭ್ಯತೆ ಹೆಚ್ಚಾದ ಬಳಿಕ ಸಿರಿಧಾನ್ಯಗಳ ಕ್ಷೇತ್ರ ವ್ಯಾಪ್ತಿ ಕುಸಿಯುತ್ತಾ ಹೋಗಿ ಇತರೆ ಬೆಳೆಗಳನ್ನು ಬೆಳೆಯುವತ್ತ ರೈತರು ಚಿತ್ತ ಹರಿಸಿದರು. ಇದೀಗ ಸಿರಿಧಾನ್ಯ ಮತ್ತೆ ಮುನ್ನಲೆಗೆ ಬಂದಿದ್ದು ಬೆಳೆಯಲು ಒತ್ತು ನೀಡಲಾಗಿದೆ. ಸರ್ಕಾರ ಕೃಷಿಯ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆಯಂತಹ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದೆ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಹಲವು ಕೃಷಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟರು. ಅವರ ಜನ್ಮದಿನದ ಅಂಗವಾಗಿ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ರೈತ ಚಳವಳಿಗಳ ಹೋರಾಟಗಾರರಾಗಿದ್ದ ಪ್ರೊ.ನಂಜುಂಡಸ್ವಾಮಿ ಅವರನ್ನು ರೈತದಿನದಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಅಣಗಳ್ಳಿ ಬಸವರಾಜು ಮಾತನಾಡಿ ರೈತರಿಗೆ ಸರ್ಕಾರದಿಂದ ಹೆಚ್ಚು ಸೌಲಭ್ಯಗಳು ತಲುಪಬೇಕು. ರೈತರ ಸಂಕಷ್ಟಗಳಿಗೆ ಸರ್ಕಾರಗಳು ತುರ್ತು ಸ್ಪಂದಿಸಬೇಕು. ಈಚೆಗೆ ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದ್ದು ರೈತರ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿದೆ. ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು ಜೀವನ ನಡೆಸುವುದು ದುರಸ್ತವಾಗಿದೆ. ಸರ್ಕಾರ ವನ್ಯ ಜೀವಿಗಳ ಉಪಟಳ ತಡೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಹಾರ್ವೇಸ್ಟ್ ಹಬ್ ಯೋಜನೆಯಡಿ ಸಹಾಯಧನ ಪಡೆದ ಫಲಾನುಭವಿಗಳಿಗೆ ಚೆಕ್ ಹಾಗೂ ಅನುಮೋದನ ಪತ್ರ ವಿತರಿಸಲಾಯಿತು. ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡ 10 ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಚಿಕ್ಕಸ್ವಾಮಿ, ರೈತ ಮುಖಂಡರಾದ ಗೌಡಹಳ್ಳಿ ಸೋಮಶೇಖರ್, ಸಿ.ನಾಗರಾಜಪ್ಪ, ಹೊನ್ನೂರು ಬಸವಣ್ಣ, ಹೆಬ್ಬಸೂರು ಬಸವಣ್ಣ, ಎಸ್.ಮಾದಪ್ಪ, ಚಂಗಡಿ ಕರಿಯಪ್ಪ, ಸೋಮಣ್ಣ, ಪ್ರಕಾಶ್, ಮಾಡ್ರಳ್ಳಿ ಪಾಪಣ್ಣ, ಮಹದೇವಪ್ಪ, ಚಿಕ್ಕಣ್ಣ, ಷಣ್ಮುಖಪ್ಪ, ಕೃಷಿಕ ಸಮಾಜದ ಶಾಂತಪ್ಪ, ಸಿದ್ದಪ್ಪ, ರವಿ, ರಾಘವೇಂದ್ರ, ರಾಜೇಂದ್ರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಷ್ಮಾ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಬಳಿ ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಲಾಯಿತು.
- ‘ನೆಲೆ ಜಲ ಉಳಿಸಿ’
ನೈಸರ್ಗಿಕ ಸಾವಯವ ಕೃಷಿಗೆ ಸಬ್ಸಿಡಿ ನೀಡುವ ಮೂಲಕ ನೆಲ ಜಲವನ್ನು ಉಳಿಸಬೇಕಿದೆ. ಇತರೆ ಬೆಳೆಗಳ ನಡುವೆ ಸಿರಿಧಾನ್ಯವನ್ನು ಹೆಚ್ಚಾಗಿ ರೈತರು ಬೆಳೆಯಬೇಕು. ಜೀವನಕ್ಕೆ ಬೇಕಾದ ಎಲ್ಲ ಬಗೆಯ ಬೆಳೆಗಳನ್ನು ತಾವೇ ಬೆಳೆದುಕೊಳ್ಳಬೇಕು. ಮೌಲ್ಯವರ್ಧನೆಗೂ ಒತ್ತು ನೀಡಿದಾಗ ಹೆಚ್ಚು ಲಾಭ ಪಡೆಯಲು ಸಾಧ್ಯವಿದೆ ಎಂದು ರೈತ ಮುಖಂಡ ಹೊನ್ನೂರ್ ಪ್ರಕಾಶ್ ಸಲಹೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.