ADVERTISEMENT

ಪಟಾಕಿ ಸಿಡಿಸಿ ಜಾನುವಾರುಗಳಿಗೆ ಬೆದರಿಕೆ

ಮಲೆ ಮಹದೇಶ್ವರ ಚೆಕ್‌ಪೋಸ್ಟ್ ಬಳಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 7:48 IST
Last Updated 21 ಅಕ್ಟೋಬರ್ 2025, 7:48 IST
ಅರಣ್ಯ ಪ್ರದೇಶದಲ್ಲಿ ಮೇಯುವ ಸ್ಥ‌ಳೀಯ ರೈತರ ಜಾನುವಾರುಗಳನ್ನು ಪಟಾಕಿ ಸಿಡಿಸಿ ಓಡಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಸೋಮವಾರ ಮಹದೇಶ್ವರ ಬೆಟ್ಟದ ಚೆಕ್‌ಪೋಸ್ಟ್ ಬಳಿ ರೈತರು ಪ್ರತಿಭಟನೆ ನಡೆಸಿದರು
ಅರಣ್ಯ ಪ್ರದೇಶದಲ್ಲಿ ಮೇಯುವ ಸ್ಥ‌ಳೀಯ ರೈತರ ಜಾನುವಾರುಗಳನ್ನು ಪಟಾಕಿ ಸಿಡಿಸಿ ಓಡಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಸೋಮವಾರ ಮಹದೇಶ್ವರ ಬೆಟ್ಟದ ಚೆಕ್‌ಪೋಸ್ಟ್ ಬಳಿ ರೈತರು ಪ್ರತಿಭಟನೆ ನಡೆಸಿದರು   

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಸಹಿತ ಹಲವು ಗ್ರಾಮಗಳ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಮೇಯುವ ಸ್ಥ‌ಳೀಯ ರೈತರ ಜಾನುವಾರುಗಳನ್ನು ಪಟಾಕಿ ಸಿಡಿಸಿ ಓಡಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡನೀಯ ಎಂದು ಸೋಮವಾರ ಮಹದೇಶ್ವರ ಬೆಟ್ಟದ ಚೆಕ್‌ಪೋಸ್ಟ್ ಬಳಿ ರೈತರು ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ಗ್ರಾಮಗಳ ರೈತರು ಭಾಗವಹಿಸಿದ್ದರು. ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸವಾಗಿರುವ ರೈತರು ಹೈನುಗಾರಿಕೆ ನಂಬಿ ಜೀವನ ಸಾಗಿಸುತಿದ್ದು ಜಾನುವಾರುಗಳನ್ನು ಕಾಡಿನೊಳಗೆ ಮೇಯಿಸುವುದು ರೂಢಿ.

ಅರಣ್ಯದೊಳಗೆ ಜಾನುವಾರು ಮೇಯಿಸುವುದರಿಂದ ಅರಣ್ಯಕ್ಕೆ ತೊಂದರೆಯಾಗದಿದ್ದರೂ ಅಧಿಕಾರಿಗಳು ಪಟಾಕಿ ಸಿಡಿಸಿ ಜಾನುವಾರುಗಳನ್ನು ಬೆದರಿಸಿ ಕಾಡಿನಿಂದ ಹೊರದಬ್ಬುತ್ತಿದ್ದಾರೆ, 300 ರಿಂದ 400 ದನ ಕರುಗಳನ್ನು ಬೆದರಿಸಿ ಹೊರ ದಬ್ಬಲಾಗುತಿದ್ದು ಜಾನುವಾರು ಕಾಡಿಗೆ ಹೋಗಲು ಹಿಂಜರಿಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಟಾಕಿ ಸಿಡಿಸುವುದನ್ನು ಮುಂದುವರಿಸಿದರೆ ಅರಣ್ಯ ಇಲಾಖೆ ವಿರುದ್ದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದರು.

ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿದ ಎಸಿಎಫ್ ಮರಿಸ್ವಾಮಿ, ‘ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು. ಮೇಲಧಿಕಾರಿಗಳ ಜೊತೆ ಚರ್ಚಿಸಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದರು.

ಸಿರಿ ಧಾನ್ಯ ಪ್ರಸಾದಕ್ಕೆ ಹರ್ಷ: ‘ದೇವಾಲಯಕ್ಕೆ ಬರುವ ಭಕ್ತರಿಗೆ ಸಿರಿಧಾನ್ಯ ಬಳಸಿ ಉಪಾಹಾರ ಸಿದ್ಧಪಡಿಸುತ್ತಿರುವ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ರೈತ ಮುಖಂಡರು ಸಂತಸ ವ್ಯಕ್ತಪಡಿಸಿದರು. ದೇವಾಲಯಕ್ಕೆ ಬರುವ ಭಕ್ತರಿಗೆ ಸಿರಿಧಾನ್ಯ ಖಾದ್ಯಗಳ ಪ್ರಸಾದ ನೀಡಿದರೆ ಸಿರಿ ಧಾನ್ಯ ಬೆಳೆಯುವ ರೈತರ ಬದುಕು ಹಸನಾಗುತ್ತದೆ’ ಎಂದು ಹೊನ್ನೂರು ಪ್ರಕಾಶ್ ತಿಳಿಸಿದರು.

ಈ ಸಂದರ್ಭ ಮುಖಂಡರಾದ ಬೇರಾಂಬಾಡಿ ಶಶಿ, ಭೀಮನಭೀಡು ರಾಜು, ಮಾದಳ್ಳಿ ಮಾಧು, ಗುರು ಲೋಕೇಶ್, ಸ್ವಾಮಿ ಶಿವರುದ್ರ ಸ್ವಾಮಿ ಸೇರಿದಂತೆ ಹಲವರು ಇದ್ದರು.

Highlights - ‘ಜಾನುವಾರುಗಳನ್ನು ಕಾಡಿನೊಳಗೆ ಮೇಯಿಸುವುದೇ ರೂಢಿ’ ‘ಹೈನುಗಾರಿಕೆ ನಂಬಿ ಜೀವನ, ತೊಂದರೆ ನೀಡಬೇಡಿ’ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ: ಎಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.