ADVERTISEMENT

ಚಾಮರಾಜನಗರ: ಗಣೇಶ ವಿಸರ್ಜನೆಗೆ ಅದ್ಧೂರಿ ಮೆರವಣಿಗೆಯ ಮೆರುಗು

ವಸತಿ ಸಚಿವ ವಿ.ಸೋಮಣ್ಣ ಚಾಲನೆ, ದಿನಪೂರ್ತಿ ನಡೆದ ಮೆರವಣಿಗೆ, ಕಲಾತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 16:06 IST
Last Updated 1 ನವೆಂಬರ್ 2021, 16:06 IST
ಭೂಮಂಡಲ ರಕ್ಷ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು
ಭೂಮಂಡಲ ರಕ್ಷ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು   

ಚಾಮರಾಜನಗರ: ಶ್ರೀವಿದ್ಯಾಗಣಪತಿ ಮಂಡಳಿಯು ನಗರದರಥ ಬೀದಿಯ ಗುರುನಂಜಶೆಟ್ಟರ ಛತ್ರದ ಮುಂಭಾಗ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದ್ದ ಭೂಮಂಡಲ ರಕ್ಷ ಗಣಪತಿಯ ವಿಸರ್ಜನಾ ಮೆರವಣಿಗೆ ಸೋಮವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ನ ನಡುವೆ ಶಾಂತಿಯುತ ಮತ್ತು ಅದ್ಧೂರಿಯಾಗಿ ನಡೆಯಿತು.

ಮಂಗಳವಾದ್ಯಗಳ ನಿನಾದ, ಚೆಂಡೆ, ಡೊಳ್ಳು, ಬ್ಯಾಂಡ್‌ ವಾದ್ಯಗಳ ಝೇಂಕಾರದ ನಡುವೆ ಜಾನಪದ ಕಲಾ ತಂಡಗಳ ನೃತ್ಯಗಳು ಮೆರವಣಿಗೆಗೆ ಮೆರುಗು ತಂದವು.

ಸೆ.20ರಂದು ಗಣಪತಿ ವಿಸರ್ಜನೆ ನಡೆಯಬೇಕಾಗಿತ್ತು. ಕೋವಿಡ್‌ ಕಾರಣಕ್ಕೆ ಜಿಲ್ಲಾಡಳಿತ ಮೆರವಣಿಗೆಗೆ ಅವಕಾಶ ನೀಡದೇ ಇದ್ದುದರಿಂದ ವಿದ್ಯಾಗಣಪತಿ ಮಂಡಳಿಯು ಮೆರವಣಿಗೆಯನ್ನು ಅನಿರ್ದಿಷ್ಟಾವಧಿ ಮುಂದೂಡಿತ್ತು.

ADVERTISEMENT

ಸಚಿವ ಸೋಮಣ್ಣ ಚಾಲನೆ: ಸೋಮವಾರ ಬೆಳಿಗ್ಗೆ 10 ಗಂಟೆಗೆ ಹೂ‌ವುಗಳಿಂದ ಅಲಂಕರಿಸಲಾಗಿದ್ದ ಟ್ರ್ಯಾಕ್ಟರ್‌ನಲ್ಲಿ ಗಣೇಶ ಮೂರ್ತಿಯನ್ನು ಕೂರಿಸಲಾಯಿತು.

ವಸತಿ ಸಚಿವ ವಿ.ಸೋಮಣ್ಣ ಅವರು ಬೆಳಿಗ್ಗೆ 10.30ಕ್ಕೆ ಗಣಪತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರೂ ಇದ್ದರು.

ಯುವಕರ ಕುಣಿತ, ಉದ್ಘೋಷಗಳು, ಕೇಸರಿ ಧ್ವಜಗಳ ಹಾರಾಟದ ನಡುವೆ ಆರಂಭವಾದ ಗಣಪತಿ ವಿಸರ್ಜನಾ ಮೆರವಣಿಗೆ ಮೆರವಣಿಗೆಯು ಖಡಕ್‌ಪುರ ಮೊಹಲ್ಲಾ, ಡಾ.ಬಿ.ಆರ್‌.ಅಂಬೇಡ್ಕರ್‌ ಬೀದಿ, ಡೀವಿಯೇಷನ್‌ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲನಾಯಕರ ಬೀದಿ, ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ವೀರಮದಕರಿನಾಯಕರ ಬೀದಿ, ಶ್ರೀ ಭಗೀರಥ ಉಪ್ಪಾರ ಬಡಾವಣೆ, ಶ್ರೀ ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಭ 2ನೇ ಕ್ರಾಸ್‌, 1ನೇ ಕ್ರಾಸ್‌, ಕುರುಬರ ಬೀದಿಗಳ ಮೂಲಕ ಸಾಗಿತು. ರಾತ್ರಿ 9 ಗಂಟೆಯಾದರೂ ಮೆರವಣಿಗೆ ಮುಂದುವರೆದಿತ್ತು.

ಖಡಕ್‌ಪುರ ಮೊಹಲ್ಲಾದ ಬೀದಿಯಲ್ಲಿ ಮೆರವಣಿಗೆ ಸಾಗುವಾಗ, ಮಸೀದಿ ಬಳಿ ಮುಸ್ಲಿಂ ಮುಖಂಡರು ಮೆರವಣಿಗೆಯನ್ನು ಸ್ವಾಗತಿಸಿ, ಮುಖಂಡರಿಗೆ ಶುಭಾಶಯ ಕೋರಿದರು.

ಸಾಂಸ್ಕೃತಿಕಕಲಾ ತಂಡಗಳ ಮೆರುಗು: ಮೆರವಣಿಗೆಯ ಉದ್ದಕ್ಕೂ ಸಾಂಸ್ಕೃತಿಕ ಕಲಾ ತಂಡಗಳು ಗಮನ ಸೆಳೆದವು. ನಂದಿ ಧ್ವಜ, ಗೊರವರ ಕುಣಿತ, ವೀರಗಾಸೆ, ಮಹಿಳಾ ವೀರಗಾಸೆ, ಚಟ್ಟಿ ಮೇಳ, ಡೊಳ್ಳು ಕುಣಿತ ಮಂಗಳ ವಾದ್ಯ, ಬ್ಯಾಂಡ್‌ ಸೆಟ್, ಕಂಸಾಳೆ, ಚೆಂಡೆ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.

ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಆಶಾ ಉಪಾಧ್ಯಕ್ಷೆ ಸುಧಾ, ವಿದ್ಯಾಗಣಪತಿ ಮಂಡಳಿಯ ಅಧ್ಯಕ್ಷ ಚಿಕ್ಕರಾಜು, ಮುಖಂಡರಾದ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ನಿಜಗುಣರಾಜು, ಎಸ್.ಬಾಲಸುಬ್ರಮಣ್ಯ, ನಾಗಶ್ರೀ, ಗಣೇಶ್‌ದಿಕ್ಷೀತ್, ಸುರೇಶ್ ನಾಯಕ, ಮಹದೇವನಾಯಕ, ನಗರಸಭಾ ಸದಸ್ಯರಾದ ಸುಧರ್ಶನಗೌಡ, ಶಿವನಾಯಕ್, ರಾಘವೇಂದ್ರ, ಶಿವರಾಜು, ಮಮತಾ, ಲೋಕೇಶ್ವರಿ, ಮಂಜುನಾಥ್, ಗಾಯಿತ್ರಿ, ವನಾಜಾಕ್ಷಿ, ಗಣಪತಿ ಮಂಡಳಿಯ ಸದಸ್ಯರು, ಭಕ್ತರು ಇದ್ದರು.

ಬಿಗಿ ಪೊಲೀಸ್‌ ಬಂದೋಬಸ್ತ್‌

ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಮೆರವಣಿಗೆ ಆರಂಭದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ಸ್ವತಃ ಮೆರವಣಿಗೆಯಲ್ಲಿ ಸಾಗಿ ಬಂದೋಬಸ್ತ್‌ನ ಉಸ್ತುವಾರಿ ಕೈಗೊಂಡರು.

ಬಂದೋಬಸ್ತ್‌ಗಾಗಿ ಹೊರ ಜಿಲ್ಲೆಗಳಿಂದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರೆಸಲಾಗಿತ್ತು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್, ಡಿವೈಎಸ್‌ಪಿಗಳಾದ ಪ್ರಿಯದರ್ಶಿನಿ ಸಾಣೆಕೊಪ್ಪ, ನಾಗರಾಜು, ಹಿಂದೆ ಇಲ್ಲಿ ಡಿವೈಎಸ್‌ಪಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಜಯಕುಮಾರ್‌, ನವೀನ್‌ ಕುಮಾರ್‌ ಸೇರಿದಂತೆ ಹಲವು ಸ್ಥಳೀಯ ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.