ಚಾಮರಾಜನಗರ: ಸಹಸ್ರಾರು ಭಕ್ತರ ಜಯಘೋಷಗಳೊಂದಿಗೆ ಶ್ರೀವಿದ್ಯಾಗಣಪತಿ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸಂಭ್ರಮಿಸಿದರು.
ಬೆಳಿಗ್ಗೆ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ನಗರಸಭೆ ಅಧ್ಯಕ್ಷ ಸುರೇಶ್, ಪೌರಾಯುಕ್ತ ಎಸ್.ಎ.ರಾಮದಾಸ್, ತಹಶೀಲ್ದಾರ್ ಗಿರಿಜಾ, ಎಎಸ್‌ಪಿ ಶಶಿಧರ್, ಡಿವೈಎಸ್‌ಪಿ ಸ್ನೇಹಾರಾಜ್, ಬಿಜೆಪಿ ಮುಖಂಡರಾದ ಎನ್.ಎಂ.ರಾಮಚಂದ್ರ, ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಗೆಬಗೆಯ ಹೂವುಗಳಿಂದ ಅಲಂಕೃತವಾಗಿದ್ದ ವೇದಿಕೆಯ ಮೇಲೆ ಗಣಪನನ್ನು ಪ್ರತಿಷ್ಠಾಪಿಸಿ ಗುರುನಂಜಶೆಟ್ಟರ ಛತ್ರದ ಮುಂಭಾಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ನಿಂತು ದರ್ಶನ ಪಡೆದರು.
ಮಂಗಳವಾದ್ಯ, ನಂದಿಕಂಬ, ಗೊರವರ ಕುಣಿತ, ಡೊಳ್ಳು ಕುಣಿತ, ಚೆಂಡೆ, ತಮಟೆ, ಕಂಸಾಳೆ, ವೀರಗಾಸೆ, ನಗಾರಿ, ಚಿಲಿಪಿಲಿ ಗೊಂಬೆಗಳು, ನಾಸಿಕ್ ಡೊಳ್ಳು ಸಹಿತ ಹಲವು ಜಾನಪದ ಕಲಾಪ್ರಕಾರಗಳು ಮೆರವಣಿಗೆಯ ಅಂದ ಹೆಚ್ಚಿಸಿದವು.
ಖಡಕ್‌ಪುರ ಮೊಹಲ್ಲಾ, ಅಂಬೇಡ್ಕರ್ ಬಡಾವಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟಿ ವೃತ್ತ, ದೊಡ್ಡ ಅಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಗಾಡಿಖಾನೆ ಮೊಹಲ್ಲಾ ಬೀದಿ, ಮೇಗಲ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಸಂತೇಮರಹಳ್ಳಿ ವೃತ್ತ, ಬಣಜಿಗರ ಬೀದಿ, ಭ್ರಮರಾಂಭ ಬಡಾವಣೆ 1ನೇ, 2ನೇ ಕ್ರಾಸ್, ಕುರುಬರ ಬೀದಿ, ಅಗ್ರಹಾರ ಬೀದಿ, ವೀರಭದ್ರಸ್ವಾಮಿ ದೇವಸ್ಥಾನ ಮಾರ್ಗವಾಗಿ ದೊಡ್ಡಅರಸನ ಕೊಳದ ಬಳಿ ತಲುಪಿ ವಿಸರ್ಜನೆ ಮಾಡಲಾಯಿತು.
ವಿದ್ಯಾ ಗಣಪತಿ ಮಂಡಳಿ ಅಧ್ಯಕ್ಷ ಶಿವಣ್ಣ, ಕಾರ್ಯಾಧ್ಯಕ್ಷ ಬುಲೆಟ್ ಚಂದ್ರು, ಉಪಾಧ್ಯಕ್ಷರಾದ ಶಿವು ವಿರಾಟ್, ರಾಮು, ಕೃಷ್ಣ, ಪ್ರಧಾನ ಕಾರ್ಯದರ್ಶಿ ಬಂಗಾರ ನಾಯಕ, ಮಹೇಶ್ ಸೇರಿದಂತೆ ಹಲವು ಕೋಮುಗಳ ಮುಖಂಡರು ಮೆರವಣಿಗೆಯಲ್ಲಿ
ಭಾಗವಹಿಸಿದ್ದರು.
ಮೆರವಣಿಗೆಗೆ ‘ಖಾಕಿ ಕಣ್ಗಾವಲು’
800ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಬ್ಲಾಕ್ ಕಮಾಂಡೊ ಪಡೆ ಸಶಸ್ತ್ರ ಮೀಸಲು ಪಡೆ ಹೋಂಗಾರ್ಡ್ಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮೆರವಣಿಗೆ ಸಾಗುವ ಹಾದಿಯ ಸಂಪೂರ್ಣ ವಿಡಿಯೋ ಚಿತ್ರೀಕರಣ ನಡೆಯಿತು. ಬಾನಿನಲ್ಲಿ ಡ್ರೋನ್ ಹದ್ದಿನ ಕಣ್ಣು ಇರಿಸಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಡಿವಿಯೇಷನ್ ರಸ್ತೆ ಚಿಕ್ಕ ಅಂಗಡಿ ದೊಡ್ಡ ಅಂಗಡಿ ಬೀದಿಗಳು ಸಂತೇಮರಹಳ್ಳಿ ವೃತ್ತ ಸೇರಿದಂತೆ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.