
ಯಳಂದೂರು: ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಭಿನ್ನ ಮಾರ್ಗಗಳ ಮೂಲಕ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ್ದರು. ಬ್ರಿಟಿಷರು ತಯಾರಿಸಿದ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಗುಡಿ ಕೈಗಾರಿಕೆಗಳ ಆರಂಭಕ್ಕೆ ಮುನ್ನಡಿ ಬರೆದರು.
ಕರಕುಶಲತೆ, ಕೈಮಗ್ಗ, ರಾಟೆಗಳ ಬಳಕೆಯ ಮಹತ್ವವನ್ನು ಭಾರತೀಯರಿಗೆ ಪರಿಚಯಿಸಿದ ಫಲವೇ ದೇಶವಾಸಿಗಳಲ್ಲಿ ಚರಕ ಜೀವನಾಡಿಯಾಯಿತು. ಇಂತಹ ಚಿಂತನೆಗಳ ಫಲವಾಗಿ ಬಿಳಿಗಿರಿಬೆಟ್ಟದ ವಿಜಿಕೆಕೆ ಕೇಂದ್ರದಲ್ಲಿ ಕೈಮಗ್ಗದ ಸದ್ದು ಇಂದಿಗೂ ಅನುರಣಿಸುತ್ತಿದೆ. ಸ್ವದೇಶಿ ಚಿಂತನೆಗಳನ್ನು ಮಹಾತ್ಮಾ ಗಾಂಧೀಜಿ ದೈಹಿಕವಾಗಿ ಇಲ್ಲವಾದರೂ ಅವರ ಆತ್ಮ ಇಂದಿಗೂ ಕೈಮಗ್ಗದ ರೂಪದಲ್ಲಿ ಸದ್ದು ಮಾಡುತ್ತಿದೆ.
ತಾಲ್ಲೂಕಿನ ಬಿಳಿಗಿರಿಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ) ಶಿಕ್ಷಣದ ಜೊತೆಗೆ ಬುಡಕಟ್ಟು ಜನರಿಗೆ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಟ್ಟಿದೆ. ಸಂಸ್ಥೆಯು ಸ್ಥಳಿಯ ಗಿರಿವಾಸಿ ಸ್ತ್ರೀಯರಿಗೆ ನೂಲು ಬಿಚ್ಚುವ ಕಲೆಯನ್ನು, ಪುರುಷರಿಗೆ ನೂಲು ಹೆಣೆಯುವ ಕಲೆಯನ್ನು ಕಲಿಸಿಕೊಟ್ಟಿದ್ದು ಬದುಕಿನ ಜೀವನಾಡಿಯಾಗಿದ್ದು ಆದಾಯ, ಆಸರೆ, ಅಕ್ಷರ ಕಲಿಸಿದೆ.
ಕೈಮಗ್ಗಕ್ಕೆ ಬಳಸುವ ಕಚ್ಛಾ ವಸ್ತುಗಳ ಬೆಲೆ ಏರಿಕೆಯಾಗಿದ್ದು ರೇಷ್ಮೆ ಮತ್ತು ಹತ್ತಿಯ ಕೊರತೆ ಎದುರಾಗಿದ್ದರೂ ಬಾಪು ಬಿತ್ತಿದ ಆದರ್ಶ ಹಾಗೂ ಮೌಲ್ಯಗಳು ಇನ್ನೂ ಜೀವಿಸುತ್ತಿವೆ.
‘70ದಶಕದಲ್ಲಿ ಮಹಾತ್ಮರ ಚಿಂತನೆಯ ಸ್ಪೂರ್ತಿಯಿಂದ ಡಾ.ಸುದರ್ಶನ್ ವಿಜಿಕೆಕೆ ಕೇಂದ್ರವನ್ನು ಆರಂಭಿಸಿದರು. ಸೋಲಿಗರಲ್ಲಿ ಆತ್ಮ ವಿಶ್ವಾಸ ತುಂಬುವ ಹಾಗೂ ಶಿಕ್ಷಣ ನೀಡುವುದರ ಜೊತೆಗೆ ಆರೋಗ್ಯ, ಉದ್ಯೋಗ ಒದಗಿಸುವ ಭಾಗವಾಗಿ ಕೈಮಗ್ಗಗಳನ್ನು ಆರಂಭಿಸಲು ವೇದಿಕೆ ಕಟ್ಟಿಕೊಟ್ಟರು.
ಅಂದು ಮೂಲಭೂತ ಸಮಸ್ಯೆಗಳ ಹೊರತಾಗಿಯೂ ರೇಷ್ಮೆ ಸೀರೆ, ಖಾದಿ ವಸ್ತ್ರ ಉತ್ಪಾದಿಸಿ ಮಾರಾಟಕ್ಕೂ ಅನುವು ಮಾಡಿಕೊಟ್ಟರು. ಈಗಲೂ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದವರು ಕೈಮಗ್ಗದ ಬಟ್ಟೆಗಳನ್ನು ಕೊಂಡು ಗಾಂಧಿ ನೆನಪಿನಲ್ಲಿ ತೆರಳುತ್ತಾರೆ’ ಎನ್ನುತ್ತಾರೆ ಮಗ್ಗದ ನಿರ್ವಾಹಕ ಕೊಳ್ಳೇಗಾಲ ವೆಂಕಟೇಶ್.
ಪ್ರಸ್ತುತ ಮಗ್ಗ ಮಾತ್ರ ಉಳಿದಿದ್ದು ರೇಷ್ಮೆ ಬಿಚ್ಚಾಣಿಕೆ ನಡೆದಿದೆ. ನೂರಾರು ಜನರಿಗೆ ಕೆಲಸ ನೀಡುತ್ತಿದ್ದ ಮಗ್ಗದಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಕೈಮಗ್ಗದಲ್ಲಿ ನೇಯುವ ರೇಷ್ಮೆ ಸೀರೆಗಳಿಗೆ ₹ 9,000 ಬೆಲೆ ಇದ್ದು ಸಾದಾ ಸೀರೆಗಳಿಗೆ ₹ 4,500 ರೂಪಾಯಿ ಬೆಲೆ ಇದೆ. ಕೈಮಗ್ಗಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ನೂರಾರು ಶ್ರಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎನ್ನುತ್ತಾರೆ ಸಂಸ್ಥೆಯಲ್ಲಿ ಕೆಲಸ ಮಾಡುವ ಜಡೆ ರಂಗಮ್ಮ.
50 ವರ್ಷಗಳ ಹಿಂದೆ ಹೆಚ್ಚು ಕೆಲಸ ಇರಲಿಲ್ಲ. ವಿಜಿಕೆಕೆ ಕಾರ್ಯದರ್ಶಿಯಾಗಿದ್ದ ಸುದರ್ಶನ್ ಗಾಂಧಿ ಸಿದ್ಧಾಂತಗಳ ತಳಹದಿಯಲ್ಲಿ ಗಿರಿಜನರನ್ನು ಒಗ್ಗೂಡಿಸಿ ಈ ಭಾಗದಲ್ಲಿ ಶಾಲೆ, ಆಸ್ಪತ್ರೆ ತೆರೆದು ಸೇವೆ ಮಾಡಿದರು. ನಂತರ ಸೋಲಿಗರ ಮಕ್ಕಳನ್ನು ಸಂಸ್ಥೆಯ ನಿರ್ವಹಣೆಗೆ ಹಚ್ಚಿದರು. ಚರಕ ಬಳಸಿ ನೂಲು ತೆಗೆದು ಬಟ್ಟೆ ತಯಾರಿಸುವ ಕಾಯಕ ಕಲಿಸಿಕೊಟ್ಟರು ಎಂದು ಬುಕಡಟ್ಟು ಜಿಲ್ಲಾ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಸ್ಮರಿಸುತ್ತಾರೆ.
ಗಾಂಧಿವಾದಿ ಅಗರಂ ರಂಗಯ್ಯ ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿವಾದಿಯಾಗಿದ್ದ ಅಗರಂ ರಂಗಯ್ಯ ಮಹಾತ್ಮಾ ಗಾಂಧೀಜಿ ಅವರ ಆದರ್ಶ ಪಾಲಿಸಿಕೊಂಡು ಅವರ ಹಾದಿಯಲ್ಲಿ ಸಾಗಿದರು. ಮೈಸೂರಿನಲ್ಲಿ ತಾತಯ್ಯ ಮತ್ತು ಟಿ.ಎಸ್.ಸುಬ್ಬಣ್ಣನವರ ಪ್ರಭಾವದಿಂದ ಗಾಂಧಿ ತತ್ವಗಳನ್ನು ಪ್ರಚುರಪಡಿಸಿದರು. ಮಹಾತ್ಮ ಗಾಂಧೀಜಿ ಬದನವಾಳು ಗ್ರಾಮಕ್ಕೆ ಬಂದ ನಂತರ ಜನರಲ್ಲಿ ಗಾಂಧಿ ಪ್ರಭಾವ ಹೆಚ್ಚಾಯಿತು. ಜ.30ರಂದು ಬಾಪು ಹುತಾತ್ಮರಾದ ಬಳಿಕ ಅಗರಂ ರಂಗಯ್ಯ ಅವರು ಗಾಂಧಿ ಸಮಾಧಿಯಿಂದ ತಂದ ಹೂಗಳನ್ನು ಹೆಲಿಕಾಪ್ಟರ್ ಮೂಲಕ ಮೈಸೂರು ನಗರದ ತುಂಬೆಲ್ಲ ಚೆಲ್ಲಿದರು ಎಂಬುದು ಇತಿಹಾಸದ ಪುಟಗಳನ್ನು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.