ADVERTISEMENT

ಗಣಪ ವಿಗ್ರಹ ಮಾರಾಟ ಶುರು: ಗ್ರಾಹಕರ ನಿರೀಕ್ಷೆ

ಗಣೇಶೋತ್ಸವಕ್ಕೆ ಅನುಮತಿ; ಜಿಲ್ಲಾಡಳಿತದಿಂದ ಹಲವು ಷರತ್ತುಗಳು, ಐದು ದಿನಗಳಷ್ಟೇ ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 4:18 IST
Last Updated 8 ಸೆಪ್ಟೆಂಬರ್ 2021, 4:18 IST
ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ ಮುಂಭಾಗ ಹಾಕಲಾಗಿರುವ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿರುವ ಗಣಪತಿ ಮೂರ್ತಿಗಳು
ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ ಮುಂಭಾಗ ಹಾಕಲಾಗಿರುವ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿರುವ ಗಣಪತಿ ಮೂರ್ತಿಗಳು   

ಚಾಮರಾಜನಗರ: ಗೌರಿ–ಗಣೇಶ ಹಬ್ಬದ ಅಂಗವಾಗಿ ಐದು ದಿನ ಸಾರ್ವಜನಿಕ ಗಣೇಶೋತ್ಸವ ನಡೆಸಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿರುವುದರ ಬೆನ್ನಲ್ಲೇ; ಜಿಲ್ಲೆಯಲ್ಲಿ ಗಣೇಶ ವಿಗ್ರಹ ತಯಾರಕರು ಹಾಗೂ ವ್ಯಾಪಾರಿಗಳು ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ.

ನಗರದಲ್ಲಿ ಎಂಟು ಅಂಗಡಿಗಳನ್ನು ಹಾಕಲಾಗಿದೆ. ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಬಾರಿ ಕೋವಿಡ್‌ನಿಂದಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ವಿಗ್ರಹ ತಯಾರಕರು ಹಾಗೂ ವ್ಯಾಪಾರಿಗಳು ನಷ್ಟ ಅನುಭವಿಸಿದ್ದರು. ಈ ಬಾರಿಯೂ ಗಣೇಶನ ಹಬ್ಬದ ಮೇಲೆ ಕೋವಿಡ್‌ ಕರಿಛಾಯೆ ಆವರಿಸಿತ್ತು. ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡದಿದ್ದರೆ ಈ ವರ್ಷವೂ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕದಲ್ಲಿ ವಿಗ್ರಹ ತಯಾರಿಕರಿದ್ದರು.

ADVERTISEMENT

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ, ರಾಜ್ಯ ಸರ್ಕಾರ ಹಲವು ಷರತ್ತುಗಳೊಂದಿಗೆ ಗಣೇಶೋತ್ಸವ ಆಯೋಜಿಸಲು ಒಪ್ಪಿಗೆ ನೀಡಿರುವುದು ಮೂರ್ತಿ ತಯಾರಕರು ಹಾಗೂ ವ್ಯಾಪಾರಿಗಳಲ್ಲಿ ಮಂದಹಾಸ ಮೂಡಿಸಿದೆ.

ಸರ್ಕಾರದ ಆದೇಶದ ಅನ್ವಯ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಲವು ಷರತ್ತುಗಳನ್ನು ಹಾಕಿ, ಕೋವಿಡ್‌ ನಿಯಮಗಳಿಗೆ ಒಳಪಟ್ಟು ಸರಳ ಸಾಂಪ್ರದಾಯಿಕ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿದ್ದಾರೆ.

‘ಸರ್ಕಾರ ಹಾಗೂ ಜಿಲ್ಲಾಡಳಿತ ಗಣೇಶೋತ್ಸವಕ್ಕೆ ಅನುಮತಿ ನೀಡಿರುವು ದರಿಂದ ಮಳಿಗೆಗಳನ್ನು ಹಾಕಿದ್ದೇವೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಬುಧವಾರದಿಂದ ನೋಡಬೇಕು’ ಎಂದು ವ್ಯಾಪಾರಿ ಚಾಮರಾಜನಗರದ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಐದು ಅಡಿಗಳಿಂದ ಹೆಚ್ಚು ಎತ್ತರದ ವಿಗ್ರಹವನ್ನು ಪ್ರತಿಷ್ಠಾಪಿಸಬಾರದು ಎಂಬ ನಿಯಮ ಇರುವುದರಿಂದ ನಾಲ್ಕು ಅಡಿಗಳಿಗಿಂತ ಕಡಿಮೆ ಎತ್ತರದ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ. ಚಿಕ್ಕ ಗಾತ್ರದಿಂದ ಮಧ್ಯಮ ಗಾತ್ರದವರೆಗಿನ ವಿಗ್ರಹಗಳಿವೆ’ ಎಂದು ಅವರು ಹೇಳಿದರು.

ಕಡಿಮೆ ದರಕ್ಕೆ ಒತ್ತಾಯ: ಈ ಮಧ್ಯೆ, ಗಣಪತಿ ಮೂರ್ತಿಗಳ ಖರೀದಿಗೆ ಬರುತ್ತಿರುವವರು ನಿಗದಿ ಪಡಿಸಿರುವ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಮೂರ್ತಿಗಳನ್ನು ಕೇಳುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದರು.

‘ಕೋವಿಡ್ ಕಾರಣದಿಂದ ಮೂರ್ತಿಗಳ ಬೆಲೆ ಹೆಚ್ಚಳ ಮಾಡಿಲ್ಲ. ₹ 50ರಿಂದ ಹಿಡಿದು ₹ 5000 ಬೆಲೆಯ ವಿಗ್ರಹಗಳನ್ನಿಟ್ಟಿದ್ದೇವೆ. ನಾವು ಹೇಳಿದ ದರಕ್ಕಿಂತಲೂ ಕಡಿಮೆ ಬೆಲೆಗೆ ಜನರು ಕೇಳುತ್ತಿದ್ದಾರೆ’ ಎಂದು ಮಂಜುನಾಥ್‌ ಮಾಹಿತಿ ನೀಡಿದರು.

‘ಸರ್ಕಾರ ಷರತ್ತುಬದ್ಧವಾಗಿಯಾದರೂ ಗಣೇಶೋತ್ಸವಕ್ಕೆ ಅವಕಾಶ ನೀಡಿರುವುದರಿಂದ ಸ್ವಲ್ಪ ಸಮಾಧಾನವಾಗಿದೆ. ಕೆಲವು ವಿಗ್ರಹಗಳಾದರೂ ಮಾರಾಟವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಅವರು ಹೇಳಿದರು.

ಜಿಲ್ಲಾಡಳಿತ ಹಾಕಿರುವ ಷರತ್ತುಗಳು

* ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ ನಾಲ್ಕು ಅಡಿ, ಮನೆಗಳಲ್ಲಿ ಗರಿಷ್ಠ 2 ಅಡಿ ಎತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ

* ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಂದು ವಾರ್ಡ್‌ಗೆ ಒಂದೇ ಗಣೇಶೋತ್ಸವ

* ಒಮ್ಮೆಗೆ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ

*ಆಯೋಜಕರು ಕೋವಿಡ್-19ರ ನೆಗೆಟಿವ್ ವರದಿ ಮತ್ತು ಲಸಿಕೆ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ

* ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರೂ ಮಾಸ್ಕ್‌ ಧರಿಸುವುದು ಕಡ್ಡಾಯ

* ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಡಿ.ಜೆ ಸಂಗೀತ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ

* ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ದಿನ ನಿತ್ಯವೂ ಸ್ಯಾನಿಟೈಸ್‌ ಮಾಡಬೇಕು

* ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು

* ಗಣೇಶ ವಿಗ್ರಹಗಳನ್ನು ತರುವಾಗ ಮತ್ತು ವಿಸರ್ಜನೆ ವೇಳೆ ಮೆರವಣಿಗೆ ನಡೆಸುವಂತಿಲ್ಲ

* ಮನೆಗಳಲ್ಲಿ ಪ್ರತಿಷ್ಠಾಪಿಸಿದ ವಿಗ್ರಹ, ಮೂರ್ತಿಗಳನ್ನು ಮನೆಗಳಲ್ಲೇ ವಿಸರ್ಜಿಸಬೇಕು

* ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ವಿಗ್ರಹಗಳನ್ನು ಹೊಂಡ, ‘ಮೊಬೈಲ್‌ ಟ್ಯಾಂಕ್‌’ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು

* ಶಾಂತಿ ಮತ್ತು ಸೌಹಾರ್ದಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಉಂಟು ಮಾಡಬಾರದು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.