ADVERTISEMENT

ಉತ್ತಮ ಮಳೆ: ಹೊಲಕ್ಕೆ ಇಳಿದ ಅನ್ನದಾತರು

ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜಗಳನ್ನು ಖರೀದಿಸುತ್ತಿರುವ ರೈತರು

ಸೂರ್ಯನಾರಾಯಣ ವಿ
Published 14 ಆಗಸ್ಟ್ 2019, 20:15 IST
Last Updated 14 ಆಗಸ್ಟ್ 2019, 20:15 IST
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ರೈತರು ಹಾಗೂ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ರೈತರು ಹಾಗೂ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು   

ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಉತ್ತಮ ಮಳೆ ರೈತರಲ್ಲಿ ಸಂತಸ ತಂದಿದ್ದು, ಬರದ ನಾಡಿನಲ್ಲಿ ಕೃಷಿ ಚಟುವಟಿಕೆ ಮತ್ತೆ ಗರಿಗೆದರಿದೆ.

ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರು ಅವಧಿಯ ಮೊದಲು ಎರಡು ತಿಂಗಳಲ್ಲಿ ನಿರೀಕ್ಷಿತ ಮಳೆ ಬೀಳದೆ ಇದ್ದುದರಿಂದ ಜಿಲ್ಲೆಯಾದ್ಯಂತ ಮಳೆಯಾಶ್ರಿತ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಹಾನಿ ಪ್ರಮಾಣವನ್ನು ಅಂದಾಜಿಸಲು ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆಯನ್ನೂ ಆರಂಭಿಸಿದ್ದವು.

ಆದರೆ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಕಳೆದ ವಾರ ಉತ್ತಮ ಮಳೆಯಾದ ಸಂದರ್ಭದಲ್ಲಿ ಜಿಲ್ಲೆಯಲ್ಲೂ ಸುಮಾರಾಗಿ ಮಳೆ ಬಿದ್ದಿದೆ. ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರು ಕಾವೇರಿಯಲ್ಲಿ ಹರಿಯುತ್ತಿರುವುದರಿಂದ ಜಿಲ್ಲೆಯ ಮೂರು ತಾಲ್ಲೂಕಿನ ಕಾಲುವೆಗಳಿಗೂ ನೀರು ಹರಿಸಲಾಗಿದೆ. ಇದು ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿವೆ.

ADVERTISEMENT

ಮಳೆಗಾಗಿ ಕಾದು ಕುಳಿತಿದ್ದ ರೈತರು ಈಗ ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದಾರೆ. ಬಿತ್ತನೆ ಬೀಜಗಳಿಗಾಗಿ ಜಿಲ್ಲೆಯ 16 ಹೋಬಳಿಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಭತ್ತ, ರಾಗಿ, ಜೋಳ ಬೀಜಗಳನ್ನು ಖರೀದಿಸುತ್ತಿದ್ದಾರೆ.

ಇತ್ತ ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲದ ಕಾಲುವೆಗಳಿಗೂ ನೀರು ಹರಿಸಲಾಗುತ್ತಿದ್ದು, ಈ ಭಾಗದ ರೈತರು ಭತ್ತ ನಾಟಿ ಮಾಡಲು ಆರಂಭಿಸಿದ್ದಾರೆ. ತೀವ್ರ ಮಳೆ ಕೊರತೆ ಎದುರಿಸುತ್ತಿದ್ದ ಹನೂರು ಭಾಗದ ರೈತರು ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

‘ಮಳೆ ಇಲ್ಲದೆ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸಿದ್ದರು. ಕಳೆದ ವಾರ ಉತ್ತಮ ಮಳೆಯಾಗಿರುವುದರಿಂದ ಅನುಕೂಲವಾಗಿದೆ. ಜಿಲ್ಲೆಯಾದ್ಯಂತ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಭತ್ತ, ರಾಗಿ, ಜೋಳ ಬಿತ್ತನೆ ಆರಂಭಿಸಿದ್ದಾರೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಾಡಿಕೆ ಮೀರಿದ ಮಳೆ

ಆಗಸ್ಟ್‌ ತಿಂಗಳ ಮೊದಲ ಹತ್ತು ದಿನಗಳಲ್ಲಿ ಜಿಲ್ಲೆಯಾದ್ಯಂತ ಸುರಿದ ದಾಖಲೆ ಮಳೆಯಿಂದಾಗಿ ಈ ಬಾರಿ ಜನವರಿ 1ರಿಂದ ಇಲ್ಲಿವರೆಗೆ ಸುರಿದ ಸರಾಸರಿ ಮಳೆಯ ಪ್ರಮಾಣವು ವಾಡಿಕೆ ಮಳೆಯನ್ನು ಮೀರಿದೆ.

ಏಳೂವರೆ ತಿಂಗಳ ಅವಧಿಯಲ್ಲಿ ಸಾಮಾನ್ಯವಾಗಿ 365 ಮಿ.ಮೀ ಮಳೆಯಾಗುತ್ತದೆ. ಈ ವರ್ಷ 381 ಮಿ.ಮೀ ಮಳೆಯಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ 4ರಷ್ಟು ಹೆಚ್ಚು ಮಳೆ ಬಿದ್ದಿದೆ.

ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಆಗಸ್ಟ್‌ 14ರ ವರೆಗಿನ ಸಮಯದಲ್ಲಿ ಬಿದ್ದ ಮಳೆಯ ಪ್ರಮಾಣ ಕೂಡ ವಾಡಿಕೆ ಮಳೆಗಿಂತ ಶೇ 38ರಷ್ಟು ಹೆಚ್ಚಿದೆ.

ಆಗಸ್ಟ್ ತಿಂಗಳ ಆರಂಭದ‌ವರೆಗೂ ಜಿಲ್ಲೆ ತೀವ್ರವಾದ ಮಳೆ ಕೊರತೆ ಎದುರಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.