ADVERTISEMENT

ಜಿಲ್ಲಾ ಕ್ರೀಡಾಂಗಣ ಕೆಸರುಗದ್ದೆ, ನಾಟಿ ಮಾಡಿ ಪ್ರತಿಭಟನೆ

ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜಮೀನುಗಳಲ್ಲಿ ನಿಂತ ನೀರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:31 IST
Last Updated 1 ಆಗಸ್ಟ್ 2022, 16:31 IST
ಮಳೆಯಿಂದಾಗಿ ಕೆಸರುಮಯವಾದ ಚಾಮರಾಜನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಹುಲ್ಲು ನೆಡುವುದರಲ್ಲಿ ನಿರತರಾಗಿದ್ದ ಮಕ್ಕಳು
ಮಳೆಯಿಂದಾಗಿ ಕೆಸರುಮಯವಾದ ಚಾಮರಾಜನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಹುಲ್ಲು ನೆಡುವುದರಲ್ಲಿ ನಿರತರಾಗಿದ್ದ ಮಕ್ಕಳು   

ಚಾಮರಾಜನಗರ: ಮೂರು ದಿನಗಳಿಂದ ರಾತ್ರಿ ಹೊತ್ತಿನಲ್ಲಿ ಜಿಲ್ಲೆಯಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಭಾನುವಾರ ರಾತ್ರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ವರ್ಷಧಾರೆಯಾಗಿದೆ.

ಸೋಮವಾರ ಸಂಜೆ ನಗರದಲ್ಲಿ ಉತ್ತಮವಾಗಿ ಮಳೆ ಬಿದ್ದಿದೆ. ಪ್ರತಿ ದಿನ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯಲು ಆರಂಭವಾಗಿದ್ದು, ಕೆಲವು ಕೆರೆಗಳು ಮತ್ತೆ ಕೋಡಿ ಬೀಳುವುದಕ್ಕೆ ಆರಂಭಿಸಿವೆ.

ನಗರದ ಐತಿಹಾಸಿಕ ದೊಡ್ಡರಸನ ಕೊಳ ಭಾನುವಾರ ರಾತ್ರಿ ಸುರಿದ ಮಳೆಗೆ ಮತ್ತೊಮ್ಮೆ ಭರ್ತಿಯಾಗಿದೆ. ತಾಲ್ಲೂಕಿನ ಹೊಂಡರಬಾಳು ಕೆರೆ ಮತ್ತೊಮ್ಮೆ ತುಂಬಿ ಹರಿಯಲು ಆರಂಭಿಸಿದೆ.

ADVERTISEMENT

ಭಾನುವಾರ ರಾತ್ರಿಯಿಂದ ಸೋಮವಾರದವರೆಗೆ ಚಾಮರಾಜನಗರ ತಾಲ್ಲೂಕಿನಲ್ಲಿ 6.31 ಸೆಂ.ಮೀ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 4.46 ಸೆಂ.ಮೀ,. ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯಲ್ಲಿ 4.4 ಸೆಂ.ಮೀ, ಹನೂರು ತಾಲ್ಲೂಕಿನಲ್ಲಿ 5.32 ಸೆಂ.ಮೀ ಹಾಗೂ ಯಳಂದೂರು ತಾಲ್ಲೂಕಿನಲ್ಲಿ 3.79 ಸೆಂ.ಮೀ ಮಳೆಯಾಗಿದೆ.

ಕ್ರೀಡಾಂಗಣ ಕೆಸರುಮಯ: ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಕೆಸರು ಗದ್ದೆಯಂತಾಗಿತ್ತು. ಪ್ರಧಾನ ಕ್ರೀಡಾಂಗಣಕ್ಕೆ ಹೋಗುವ ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಕ್ರೀಡಾ ಪಟುಗಳಿಗೆ, ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡುವುದಕ್ಕೆ ತೀವ್ರ ತೊಂದರೆಯಾಯಿತು.

ಪ್ರತಿ ದಿನ ಬೆಳಿಗ್ಗೆ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುವ ಮಕ್ಕಳು, ಕ್ರೀಡಾ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಕೆಸರು ಮಯವಾಗಿದ್ದ ಕ್ರೀಡಾಂಗಣದಲ್ಲಿ ಪೈರು ನಾಟಿ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತರಬೇತುದಾರ ಶಿವು, ‘ಒಂದು ದೊಡ್ಡ ಮಳೆ ಬಂದರೆ ಸಾಕು ಜಿಲ್ಲಾ ಕ್ರೀಡಾಂಗಣ ಕೆಸರು ಮಯವಾಗುತ್ತದೆ. ನೀರು ಬಸಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಬೆಳಿಗ್ಗೆ 4.45ಕ್ಕೆ 30ಕ್ಕೂ ಹೆಚ್ಚು ಮಕ್ಕಳು ಅಭ್ಯಾಸಕ್ಕೆಂದು ಕ್ರೀಡಾಂಗಣಕ್ಕೆ ಬರುತ್ತಾರೆ. ಮಳೆ ಬಂದರೆ ಇಲ್ಲಿ ಅಭ್ಯಾಸ ಮಾಡುವುದಕ್ಕೆ ಆಗುವುದಿಲ್ಲ. ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ ಎಲ್ಲ ಮಕ್ಕಳು ಹಾಗೂ ಪೋಷಕರು ಕೆಸರಿನಲ್ಲಿ ಪೈರು ನೆಟ್ಟು ಅಸಮಾಧಾನ ಹೊರಹಾಕಿದರು’ ಎಂದು ಹೇಳಿದರು.

ರಸ್ತೆಯಲ್ಲಿ ನೀರು: ಸೋಮವಾರ ಸಂಜೆ ಚಾಮರಾಜನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಯಿತು. ಈ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲೇ ನೀರು ನಿಂತು ಸವಾರರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.