ADVERTISEMENT

ಇಆರ್‌ಎಸ್‌ಎಸ್‌–‘112’ಕ್ಕೆ ಕರೆಗಳ ಮಹಾಪೂರ: ಐದು ಪ್ರಾಣಗಳ ರಕ್ಷಣೆ

ಪೊಲೀಸರಿಂದ ತುರ್ತು ಸ್ಪಂದನೆ, ಬಗೆಹರಿದ ನೂರಾರು ಸಮಸ್ಯೆಗಳು

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:18 IST
Last Updated 10 ಜೂನ್ 2021, 17:18 IST
ಇಆರ್‌ಎಸ್ಎಸ್‌–112 ಯೋಜನೆಗೆ ಸಂಬಂಧಿಸಿದ ಫಲಕ
ಇಆರ್‌ಎಸ್ಎಸ್‌–112 ಯೋಜನೆಗೆ ಸಂಬಂಧಿಸಿದ ಫಲಕ   

ಚಾಮರಾಜನಗರ: ತುರ್ತು ಸಹಾಯವಾಣಿಗಳಾದ 100 (ಪೊಲೀಸ್), 101 (ಅಗ್ನಿಶಾಮಕ ಮತ್ತು ರಕ್ಷಣೆ) ಹಾಗೂ ಇತರೆ ತುರ್ತು ಸಹಾಯವಾಣಿಗಳನ್ನು 112 ರಲ್ಲಿ ಏಕೀಕೃತಗೊಳಿಸಲಾಗಿರುವ ತುರ್ತು ಸ್ಪಂದನ ಸಹಾಯ ಯೋಜನೆಗೆ (ಇಆರ್‌ಎಸ್‌ಎಸ್‌) ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 40 ದಿನಗಳ ಅವಧಿಯಲ್ಲಿ 545 ಕರೆಗಳು ಬಂದಿವೆ.

ದೂರು ಬಂದ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿ ಸಮಸ್ಯೆ ಇತ್ಯರ್ಥ ಪಡಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಐವರ ಪ್ರಾಣ ರಕ್ಷಣೆ ಮಾಡಲಾಗಿದೆ ಎಂದು‌ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾದ ಇಆರ್‌ಎಸ್‌ಎಸ್‌–112ಕ್ಕೆ ಜಿಲ್ಲೆಯಲ್ಲಿ ಮೇ 1ರಂದು ಚಾಲನೆ ನೀಡಲಾಗಿತ್ತು. ಈ ಉದ್ದೇಶಕ್ಕೆ 10 ವಾಹನಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.

ADVERTISEMENT

ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಸರಗಳ್ಳತನ, ಅಕ್ರಮ ಮರಳು ಸಾಗಾಣಿಕೆ, ಜಗಳ, ಅಕ್ರಮ ಮದ್ಯ ಮಾರಾಟ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ರಕ್ಷಣೆ, ಕೋವಿಡ್-19 ಬಗ್ಗೆ ಅರಿವು ಹಾಗೂ ಇನ್ನಿತರೆ ಸಂಧರ್ಭಗಳಲ್ಲಿ ತುರ್ತು ಸೇವೆಗಳು ಬೇಕಾದಲ್ಲಿ 122 ಕ್ಕೆ ಸಾರ್ವಜನಿಕರು ಕರೆ ಮಾಡಬಹುದು. ದೂರುದಾರರು ಇಚ್ಛಿಸಿದಲ್ಲಿ ಅವರ ವಿವರಗಳನ್ನು ಗೋಪ್ಯವಾಗಿ ಇಡಲಾಗುತ್ತದೆ.

ಅರ್ಧ ಗಂಟೆಯೊಳಗೆ ಸ್ಥಳಕ್ಕೆ
ತುರ್ತು ಕರೆಗಳನ್ನು ಸ್ವೀಕರಿಸಿದ 30 ನಿಮಿಷಗಳ ಒಳಗಾಗಿ ತುರ್ತು ಸ್ಪಂದನ ವಾಹನದ ಮೂಲಕ ಪೊಲೀಸರು ಸ್ಥಳಕ್ಕೆ ಹೋಗಿ ತುರ್ತು ಸೇವೆ ನೀಡಲಾಗುತ್ತದೆ.

‘ಅಕ್ರಮ ಚಟುವಟಿಕೆ ಹಾಗೂ ಸಾರ್ವಜನಿಕ ತೊಂದರೆಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಸ್ವೀಕೃತವಾಗಿದ್ದು, ಇವುಗಳಿಗೆ ಶೀಘ್ರದಲ್ಲಿ ತುರ್ತಾಗಿ ಸ್ಥಳದಲ್ಲಿಯೇ ಸ್ಪಂದಿಸುತ್ತಿರುವುದರಿಂದ ದೂರುದಾರರು ಪೊಲೀಸ್ ಠಾಣೆಗೆ ಬರುವ ಅವಶ್ಯಕತೆ ಇರುವುದಿಲ್ಲ.ಸಾರ್ವಜನಿಕರು ತುರ್ತು ಸ್ಪಂದನ ಸಹಾಯ ವ್ಯವಸ್ಥೆ ’112’ ನ್ನು ತುರ್ತು ಸಂದರ್ಭಗಳಲ್ಲಿ ಬಳಸಿಕೊಂಡು ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ದಿವ್ಯಾ ಸಾರಾ ಥಾಮಸ್ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.