ADVERTISEMENT

18 ನಿಮಿಷದಲ್ಲಿ ಪೊಲೀಸ್‌ ತುರ್ತು ಸೇವೆ!

ಇಆರ್‌ಎಸ್‌ಎಸ್‌–112ಗೆ ಉತ್ತಮ ಸ್ಪಂದನೆ, ಮೂರು ತಿಂಗಳಲ್ಲಿ 1,936 ಕರೆ, ಶೀಘ್ರ ಸ್ಪಂದನೆಯಲ್ಲಿ ರಾಜ್ಯಕ್ಕೆ ಪ್ರಥಮ

ಸೂರ್ಯನಾರಾಯಣ ವಿ
Published 28 ಮೇ 2022, 19:31 IST
Last Updated 28 ಮೇ 2022, 19:31 IST
ತುರ್ತು ಸಹಾಯವಾಣಿ 112 ಬಗ್ಗೆ ಪೊಲೀಸ್‌ ಸಿಬ್ಬಂದಿ ಶಾಲೆಯೊಂದರ ಮಕ್ಕಳಿಗೆ ಜಾಗೃತಿ ಮೂಡಿಸಿದರು
ತುರ್ತು ಸಹಾಯವಾಣಿ 112 ಬಗ್ಗೆ ಪೊಲೀಸ್‌ ಸಿಬ್ಬಂದಿ ಶಾಲೆಯೊಂದರ ಮಕ್ಕಳಿಗೆ ಜಾಗೃತಿ ಮೂಡಿಸಿದರು   

ಚಾಮರಾಜನಗರ: ತುರ್ತು ಸಹಾಯವಾಣಿಗಳಾದ 100 (ಪೊಲೀಸ್), 101 (ಅಗ್ನಿಶಾಮಕ ಮತ್ತು ರಕ್ಷಣೆ) ಹಾಗೂ ಇತರೆ ಸಹಾಯವಾಣಿಗಳನ್ನು ಏಕೀಕೃತಗೊಳಿಸಿ ‘ತುರ್ತು ಸ್ಪಂದನ ಸಹಾಯ ಯೋಜನೆ–112 (ಇಆರ್‌ಎಸ್‌ಎಸ್‌–112)’ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪೊಲೀಸರು ಕ್ಷಿಪ್ರ ಅವಧಿಯಲ್ಲಿ ಜನರ ರಕ್ಷಣೆಗೆ ಧಾವಿಸುತ್ತಿದ್ದಾರೆ.

ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಈ ವರ್ಷದ ಜನವರಿಯಿಂದ ಮಾರ್ಚ್‌ವರೆಗಿನ ಅಂಕಿ ಅಂಶದ ಪ್ರಕಾರ, ಜಿಲ್ಲೆಯಲ್ಲಿ ಜನರು ಸಹಾಯವಾಣಿಗೆ ಕರೆ ಮಾಡಿದ ನಂತರ ಸರಾಸರಿ 18.20 ನಿಮಿಷಗಳ ಅವಧಿಯಲ್ಲಿ ಪೊಲೀಸರು ಘಟನಾ ಸ್ಥಳ ತ‌ಲುಪುತ್ತಿದ್ದಾರೆ. ಅತ್ಯಂತ ಕಡಿಮೆ ತುರ್ತು ಸ್ಪಂದನಾ ಅವಧಿ ಹೊಂದಿರುವ ಜಿಲ್ಲೆಗಳ ಪೈಕಿ ಚಾಮರಾಜನಗರ ಮೊದಲ ಸ್ಥಾನದಲ್ಲಿದೆ. ರಾಯಚೂರು ಜಿಲ್ಲೆ (18.27ನಿಮಿಷಗಳು) ಎರಡನೇ ಸ್ಥಾನದಲ್ಲಿದೆ.

ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಮೈಸೂರು ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಸರಾಸರಿ ಸ್ಪಂದನೆಯ ಅವಧಿ 10.40 ನಿಮಿಷ ಆಗಿದ್ದರೆ, ಮೈಸೂರಿನಲ್ಲಿ 11.46 ನಿಮಿಷಗಳು.

ADVERTISEMENT

ಕಾರ್ಯನಿರ್ವಹಣೆ ಹೇಗೆ?:2021ರ ಮೇ 1ರಂದು ಏಕೀಕೃತ ತುರ್ತು ಸಹಾಯವಾಣಿ 112ಕ್ಕೆ ದೇಶದಾದ್ಯಂತ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಈ ಉದ್ದೇಶಕ್ಕಾಗಿ ಪೊಲೀಸ್‌ ಇಲಾಖೆಗೆ 10 ವಾಹನಗಳನ್ನು ಪೂರೈಸಲಾಗಿದೆ.

ತುರ್ತು ಸಂದರ್ಭದಲ್ಲಿ ಜನರು 112ಕ್ಕೆ ಕರೆ ಮಾಡಿದರೆ, ಬೆಂಗಳೂರಿನಲ್ಲಿರುವ ತುರ್ತು ಪ್ರತಿಕ್ರಿಯೆ ಕೇಂದ್ರಕ್ಕೆ ತಲುಪುತ್ತದೆ. ಅಲ್ಲಿಂದ ಜಿಲ್ಲಾ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂಗೆ ತಲುಪುತ್ತದೆ. ಯಾವ ಭಾಗದಿಂದ ಕರೆ ಬಂದಿದೆ ಎಂಬುದನ್ನು ತಿಳಿದುಕೊಂಡು ತಕ್ಷಣವೇ ಸ್ಥಳಕ್ಕೆ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ (ಇಆರ್‌ಎಸ್‌ಎಸ್‌) ವಾಹನಗಳು ತೆರಳುತ್ತವೆ.

ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಸರಗಳ್ಳತನ, ಅಕ್ರಮ ಮರಳು ಸಾಗಾಣಿಕೆ, ಜಗಳ, ಅಕ್ರಮ ಮದ್ಯ ಮಾರಾಟ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ರಕ್ಷಣೆ, ಕೋವಿಡ್-19 ಬಗ್ಗೆ ಅರಿವು ಹಾಗೂ ಇನ್ನಿತರೆ ಸಂದರ್ಭಗಳಲ್ಲಿ ತುರ್ತು ಸೇವೆಗಳು ಬೇಕಾದಲ್ಲಿ 112ಕ್ಕೆ ಕರೆ ಮಾಡಬಹುದು. ದೂರುದಾರರು ಇಚ್ಛಿಸಿದಲ್ಲಿ ಅವರ ವಿವರಗಳನ್ನು ಗೋಪ್ಯವಾಗಿ ಇಡಲಾಗುತ್ತದೆ.

ಜನವರಿಯಿಂದ ಮಾರ್ಚ್‌ವರೆಗೆ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ 1,936 ಕರೆಗಳು ಬಂದಿವೆ. ಈ ಪೈಕಿ 1,473 ಕರೆಗಳು ಸಾರ್ವಜನಿಕ ಸ್ಥಳಗಳಲ್ಲಿ ಗದ್ದಲ, ಜಗಳಕ್ಕೆ ಸಂಬಂಧಿಸಿದ್ದಾಗಿವೆ. ಅಪಘಾತಕ್ಕೆ ಸಂಬಂಧಿಸಿದಂತೆ 159, ಅಕ್ರಮ ಚಟುವಟಿಕೆಗಳದ್ದು 106, ಕಳ್ಳತನಕ್ಕೆ ಸಂಬಂಧಿಸಿದಂತೆ 40 ಕರೆಗಳು ಬಂದಿವೆ. ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 9 ಕರೆಗಳು ದಾಖಲಾಗಿವೆ. 112ಗೆ ಬಂದ ಕರೆಯ ಆಧಾರದಲ್ಲಿ ನಾಲ್ವರನ್ನು ಪೊಲೀಸರು ರಕ್ಷಿಸಿದ್ದಾರೆ.

ಕರೆ ಬಂದ ತಕ್ಷಣ ಸ್ಥಳಕ್ಕೆ ತೆರಳುವ ಪೊಲೀಸ್‌ ಸಿಬ್ಬಂದಿ ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತಾರೆ. ಗಂಭೀರ ಪ್ರಕರಣಗಳಾಗಿದ್ದರೆ ಸಂಬಂಧಿಸಿದ ಠಾಣೆಯ ಗಮನಕ್ಕೆ ತರುತ್ತಾರೆ. ಅಪಘಾತದ ಸಂದರ್ಭದಲ್ಲಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸುತ್ತಾರೆ.

ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ

ಇಆರ್‌ಎಸ್‌ಎಸ್‌–112ರ ಬಗ್ಗೆ ಪೊಲೀಸ್‌ ಇಲಾಖೆ ಜಿಲ್ಲೆಯಾದ್ಯಂತ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.

ಪೊಲೀಸ್‌ ಸಿಬ್ಬಂದಿ ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳು, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಕಡೆಗಳಿಗೆ ತೆರಳಿ ಈ ಸಹಾಯವಾಣಿ ಸೌಲಭ್ಯಗಳು ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಮಕ್ಕಳು ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಅವರು, ‘ಈ ವರ್ಷದ ಮೊದಲ ಮೂರು ತಿಂಗಳಲ್ಲಿ, ತುರ್ತು ಸ್ಪಂದನೆಯಲ್ಲಿ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುರ್ತು ಸಹಾಯವಾಣಿಯ ಬಗ್ಗೆ ಜನರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನಷ್ಟು ಉತ್ತಮ ಸೇವೆ ನೀಡಲು ಪ್ರಯತ್ನ ನಡೆಸುತ್ತಿದ್ದೇವೆ. ಜನರು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಇಆರ್‌ಎಸ್‌ಎಸ್‌–112 ಸಹಾಯವಾಣಿಯಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ತುರ್ತು ಸೇವೆ ನೀಡುವ ಪ್ರಯತ್ನ ಮುಂದುವರಿದಿದೆ
- ಟಿ.ಪಿ.ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.