ADVERTISEMENT

ಭಾನುವಾರದ ವಿಶೇಷ ಲಾಕ್‌ಡೌನ್‌: ಜಿಲ್ಲೆ ಸ್ತಬ್ಧ

ಅಗತ್ಯಸೇವೆಗಳು ಬಿಟ್ಟು ಎಲ್ಲವೂ ಬಂದ್‌, ಅನಗತ್ಯ ಓಡಾಡಿದವರ ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಮೇ 2020, 15:38 IST
Last Updated 24 ಮೇ 2020, 15:38 IST
ಚಾಮರಾಜನಗರದ ದೊಡ್ಡ ಅಂಗಡಿ ಬೀದಿ ಭಾನುವಾರ ಖಾಲಿ ಖಾಲಿಯಾಗಿತ್ತು
ಚಾಮರಾಜನಗರದ ದೊಡ್ಡ ಅಂಗಡಿ ಬೀದಿ ಭಾನುವಾರ ಖಾಲಿ ಖಾಲಿಯಾಗಿತ್ತು   

ಚಾಮರಾಜನಗರ: ರಾಜ್ಯದಾದ್ಯಂತ ಭಾನುವಾರ ಹೇರಲಾಗಿದ್ದ ವಿಶೇಷ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಗರ, ಪಟ್ಟಣ ಹಾಗೂ ಹೋಬಳಿಗಳು ಬಹುತೇಕ ಸ್ತಬ್ಧವಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಚಟುವಟಿಕೆ ಎಂದಿನಂತೆ ಇತ್ತು.

ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ಕಡೆಯೂ ಆಸ್ಪತ್ರೆಗಳು, ಔಷಧ ಅಂಗಡಿಗಳು, ಹಾಲು ಮಾರಾಟ ಕೇಂದ್ರ, ಹಣ್ಣು, ತರಕಾರಿ, ಮಾಂಸದ ಅಂಗಡಿ, ಪೆಟ್ರೋಲ್‌ ಬಂಕ್‌ಗಳು ಸೇರಿ ಅಗತ್ಯವಸ್ತುಗಳ ಸೇವೆ ಮಾತ್ರ ಲಭ್ಯ ಇತ್ತು. ಹೋಟೆಲ್‌, ದಿನಸಿ ಅಂಗಡಿಗಳು ಸೇರಿದಂತೆ ಉಳಿದ ಎಲ್ಲ ಅಂಗಡಿಗಳು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳೂ ಸಂಚರಿಸಲಿಲ್ಲ.

ಜನ ಹಾಗೂ ವಾಹನಗಳ ಸಂಚಾರ ವಿರಳವಾಗಿತ್ತು. ಶನಿವಾರ ರಾತ್ರಿ 7ರಿಂದ ಸೋಮವಾರ ಬೆಳಿಗ್ಗೆ 7ಗಂಟೆಯವರೆಗೆ ಕರ್ಫ್ಯೂ ಮಾದರಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಗಸ್ತು ತಿರುಗುತ್ತಾ, ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಂಡರು. ಅನಗತ್ಯವಾಗಿ ತಿರುಗಾಡಿದ ಕೆಲಸವರಿಗೆ ಲಾಠಿಯ ರುಚಿಯನ್ನೂ ತೋರಿಸಿದರು. ವಾಹನಗಳನ್ನೂ ಜಪ್ತಿ ಮಾಡಿದರು. ಚಾಮರಾಜನಗರದಲ್ಲಿ 35 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದರು.

ADVERTISEMENT

ಮಾಂಸದ ಅಂಗಡಿಗಳಲ್ಲಿ ಜನ‌: ಮಾಂಸದ ಅಂಗಡಿಗಳಲ್ಲಿ ಹೆಚ್ಚು ಜನರು ಕಂಡು ಬಂದರು. ಮುಸ್ಲಿಮರು ಸೋಮವಾರ ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಿಸುತ್ತಿರುವುದರಿಂದ ಹೆಚ್ಚು ಮಂದಿ ಚಿಕನ್‌, ಮಟನ್‌, ಮೀನು ಖರೀದಿಸುತ್ತಿದ್ದುದು ಕಂಡು ಬಂತು.

ಉಳಿದಂತೆ ಅಂಗಡಿ ಬೀದಿಗಳು, ಬಡಾವಣೆ ರಸ್ತೆಗಳು ಬಿಕೊ ಎನ್ನುತ್ತಿದ್ದವು. ಅಲ್ಲಲ್ಲಿ ಪೊಲೀಸರು ನಿಂತುಕೊಂಡು ಓಡಾಡುತ್ತಿದ್ದವರನ್ನೆಲ್ಲ ತಡೆದು, ವಿಚಾರಣೆ ಮಾಡುತ್ತಿದ್ದರು.

ಗ್ರಾಮೀಣ ಭಾಗಗಳಲ್ಲಿ ಜನರ ಚಟುವಟಿಕೆಯ ಮೇಲೆ ಲಾಕ್‌ಡೌನ್‌ ಪ್ರಭಾವ ಬೀರಲಿಲ್ಲ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ನಗರ, ಪಟ್ಟಣಗಳಿಗೆ ಹೊರಡುವ ದುಸ್ಸಾಹಸವನ್ನು ಯಾರೂ ಮಾಡಲಿಲ್ಲ. ಕೆಲವು ಕಡೆಗಳಲ್ಲಿ ಸ್ನೇಹಿತರೆಲ್ಲ ತೋಟದಲ್ಲಿ ಸೇರಿ ಅಲ್ಲೇ ಅಡುಗೆ ಸಿದ್ಧಪಡಿಸಿ, ಮಧ್ಯಾಹ್ನದ ಭೋಜನ ಸವಿದರು.

ಕೊಳ್ಳೇಗಾಲ ವರದಿ:ನಗರ ಸಂಪೂರ್ಣ ಬಂದ್ ಆಗಿತ್ತು. ಬೆಳಗ್ಗೆ 5 ಗಂಟೆಗೆ ರಸ್ತೆಗಿಳಿದ ಜನರು, ಮನೆಗೆ ಬೇಕಾದ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮಟನ್, ದಿನಸಿ ಸೇರಿದಂತೆ ವಸ್ತುಗಳನ್ನು ಖರೀದಿಸಿದರು.

ಕೃಷಿ ಮಾರುಕಟ್ಟೆ, ಬಟ್ಟೆ ಅಂಗಡಿ, ಚಿಲ್ಲರೆ ಅಂಗಡಿಗಳು ಮುಚ್ಚಿದ್ದವು. ಮಟನ್, ಚಿಕನ್, ಪೆಟ್ರೋಲ್, ಮೆಡಿಕಲ್ ಅಂಗಡಿಗಳು ತೆರೆದಿದ್ದವು. ಮಧ್ಯಾಹ್ನವಾಗುತ್ತಿದ್ದಂತೆ ಜನರ ಸಂಖ್ಯೆ ಮತ್ತಷ್ಟು ಕಡಿಮೆ ಆಯಿತು.

ಹರಟೆ, ಮೋಜು: ತಾಲ್ಲೂಕಿನ ಸತ್ತೇಗಾಲ, ಧನಗೆರೆ, ನರೀಪುರ, ಪಾಳ್ಯ, ಕೆಂಪನ ಪಾಳ್ಯ, ಹೊಂಡರಬಾಳು, ಮಧುವನಹಳ್ಳಿ, ಕುಣಗಳ್ಳಿ, ಕುಂತೂರು ಸೇರಿದಂತೆ ಅನೇಕ ಗ್ರಾಮದ ಜಗಲಿ ಕಟ್ಟೆಗಳ, ಕೆರೆ ಕಟ್ಟೆ, ಸಮುದಾಯ ಭವನಗಳಲ್ಲಿ ಜನರು ಸೇರಿ ಹರಟೆಯಲ್ಲಿ ತೊಡಗಿದ್ದರು.

ಗುಂಡ್ಲುಪೇಟೆ ವರದಿ: ಕರ್ಫ್ಯೂ ಮಾದರಿಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಪಟ್ಟಣವಿಡೀ ಖಾಲಿ ಖಾಲಿಯಾಗಿತ್ತು. ಗ್ರಾಮೀಣ ಭಾಗದಿಂದ ಹೆಚ್ಚು ಜನರು ಪಟ್ಟಣಕ್ಕೆ ಬರಲಿಲ್ಲ. ಹೋಬಳಿ ಕೇಂದ್ರಗಳಾದ ಹಂಗಳ, ತೆರಕಣಾಂಬಿ ಹಾಗೂ ಬೇಗೂರು ಗ್ರಾಮದಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಗ್ರಾಮೀಣ ಭಾಗದಲ್ಲಿ ಯುವಕರು ಕ್ರಿಕೆಟ್ ಆಡುತ್ತ ಕಾಲ ಕಳೆದರು.

ಗ್ರಾಮೀಣ ಭಾಗಗಳಲ್ಲಿ ಚಟುವಟಿಕೆ

ಯಳಂದೂರು: ಪಟ್ಟಣದಲ್ಲಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆವ್ಯಕ್ತವಾಯಿತು.ಗ್ರಾಮ, ಜಿಲ್ಲೆ, ತಾಲ್ಲೂಕುಗಳಿಂದ ಪಟ್ಟಣ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಿಕೋ ಎನ್ನುತ್ತಿದ್ದವು. ಜನ ಸಂಚಾರ ಸಂಪೂರ್ಣಸ್ತಬ್ಧವಾಗಿತ್ತು.

ಪೊಲೀಸರು ಮುಂಜಾನೆಯಿಂದಲೇ ಬೀದಿ ಬದಿಯ ಓಡಾಟಕ್ಕೆ ಅಂಕುಶ ಹಾಕಿದ್ದರು. ಇದರಿಂದ ಔಷಧ ಕೊಳ್ಳುವವರು ಮತ್ತು ಆಸ್ಪತ್ರೆಗೆ ಹೋಗುವ ಮಂದಿ ಪರಿತಪಿಸಬೇಕಾಯಿತು.

ಭಾನುವಾರದ ಸಂತೆಗೂ ನಿಷೇಧ ಹೇರಲಾಗಿತ್ತು. ಹಾಗಾಗಿ,ವ್ಯಾಪಾರಿಗಳು ಮತ್ತು ಗ್ರಾಹಕರು ಇತ್ತ ಸುಳಿಯಲಿಲ್ಲ.

ಗ್ರಾಮೀಣ ಭಾಗಗಳಲ್ಲಿ ಜನರ ಓಡಾಟ ಎಂದಿನಂತೆ ಇತ್ತು. ಕೃಷಿ ಚಟುವಟಿಕೆಗಳಲ್ಲಿ ಮತ್ತು ಜಾನುವಾರು ಪೋಷಣೆಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂದಿತು. ಶ್ರಮಿಕರು ಹೊಲ,ಗದ್ದೆಗಳಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದರು. ಬಿಳಿಗಿರಿರಂಗನಬೆಟ್ಟದಲ್ಲಿ ಜನ ಸಂಚಾರಕಂಡುಬರಲಿಲ್ಲ. ಜನರು ಮನೆಯಲ್ಲಿ ಇದ್ದು ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಪರಿಶೀಲನೆ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳೊಂದಿಗೆ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲಗಳಿಗೆ ಭೇಟಿ ನೀಡಿ ಲಾಕ್‌ಡೌನ್‌ ಪಾಲನೆಯ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಇದೊಂದು ವಿಶೇಷ ಲಾಕ್‌ಡೌನ್‌. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಜನರು ಕೂಡ ಉತ್ತಮವಾಗಿ ಪಾಲನೆ ಮಾಡಿದ್ದಾರೆ. ಅನಗತ್ಯವಾಗಿ ಯಾರೂ ಓಡಾಡಬಾರದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ವಾಹನಗಳ ಜಪ್ತಿ, ದಂಡ ವಿಧಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಅವರು ಕೈಗೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.