
ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದ ಯರಕನಗದ್ದೆ ಪೋಡಿನ ಜಾನಪದ ಕಲಾವಿದ ಹಾಗೂ ಗೊರುಕನ ಕಲಾವಿದ ಬಸವರಾಜ್ ಕರ್ನಾಟಕ ಜಾನಪದ ಅಕಾಡೆಮಿ 2025ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿವೇಕಾನಂದ ಗಿರಿಜನ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದಿರುವ ಅವರು, ಬಾಲ್ಯದಲ್ಲೇ ಜನಪದ ಹಾಡು, ಕುಣಿತ, ನೃತ್ಯ, ನಾಟಕಗಳತ್ತ ಆಸಕ್ತಿ ಬೆಳೆಸಿಕೊಂಡರು. ಸೋಲಿಗರು ತಲತಲಾಂತರಗಳಿಂದ ಹಾಡಿಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ರೊಟ್ಟಿ ಹಬ್ಬದಲ್ಲಿ ತಂದೆ ತಮ್ಮಡಿ ಜಡೇಗೌಡರ ಕುಣಿತ ನೋಡುತ್ತಲೇ ಗೋರು, ಗೋರುಕ, ಗೋರುಕನ ಕುಣಿತಕ್ಕೆ ಮನಸೋತು ಜನಪದ ಕಲಾವಿದರಾಗಿ ರೂಪಗೊಂಡರು.
1997ರಲ್ಲಿ ಜನಪದ ಕಲೆಗಳತ್ತ ಆಸಕ್ತಿ ಹೊಂದಿದ್ದ ಯುವಕರನ್ನು ಸೇರಿಸಿಕೊಂಡು ಸೋಲಿಗ ಪುಷ್ಪಮಾಲೆ ಕಲಾತಂಡ ಸ್ಥಾಪಿಸಿ ನಾಡಿನಾದ್ಯಂತ ಪ್ರದರ್ಶನಗಳನ್ನು ನೀಡುತ್ತಾ ಎರಡೂವರೆ ದಶಕಗಳಿಂದಲೂ ಸೋಲಿಗರ ಬುಡಕಟ್ಟು ಸಂಸ್ಕೃತಿ ಪರಿಚಯಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಸೋಲಿಗ ಸಮುದಾಯದ ಮುಖಂಡರಾದ ಡಾ.ಸಿ.ಮಾದೇಗೌಡ, ಜಯರಾಮ ಗೌಡರ ಮಾರ್ಗದರ್ಶನದಲ್ಲಿ ಕಟ್ಟಿದ ಕಲಾತಂಡದಲ್ಲಿ ಪ್ರಸ್ತುತ 21 ಮಂದಿ ಆದಿವಾಸಿ ಕಲಾವಿದರಿದ್ದಾರೆ.
ಬಿಳಿಗಿರಿ ರಂಗನಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರಕ್ಕೆ ರಾಷ್ಟ್ರಪತಿ ಅಬ್ದುಲ್ ಕಲಾಂ ಭೇಟಿನೀಡಿದ ಸಂದರ್ಭ ಗೋರುಕನ ನೃತ್ಯ ಪ್ರದರ್ಶಿಸಿ ಮೆಚ್ಚುಗೆ ಪಡೆದುಕೊಂಡಿದ್ದ ಸೋಲಿಗ ಪುಷ್ಪಮಾಲೆ ಕಲಾತಂಡ 30 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವುದು ವಿಶೇಷ.
2012ರಲ್ಲಿ ನಡೆದ ಮೈಸೂರು ದಸರಾದಲ್ಲಿ ಪ್ರದರ್ಶನ ನೀಡಿದ್ದ 150 ಕಲಾ ಪ್ರಕಾರಗಳ ಪೈಕಿ ಸೋಲಿಗ ಪುಷ್ಪಮಾಲೆ ತಂಡದ ಗೋರುಕನ ಕುಣಿತ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. 2008ರಲ್ಲಿ ರಾಹುಲ್ ಗಾಂಧಿ ಬಿಳಿಗಿರಿ ರಂಗನಬೆಟ್ಟಕ್ಕೆ ಭೇಟಿ ನೀಡಿದಾಗಲೂ ಬಸವರಾಜ್ ತಂಡ ಗೋರುಕನ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.