ಸಂತೇಮರಹಳ್ಳಿ: ‘ಸರ್ಕಾರದಿಂದ ನೀಡುವ ಯೋಜನೆ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಲು ಫಲಾನುಭವಿಗಳು ಮುಂದಾಗಬೇಕು’ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಈಚೆಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು.
ಕೊಳ್ಳೇಗಾಲ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಕ್ಷೇತ್ರಕ್ಕೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ, ಶಿಕ್ಷಣ, ನೀರಾವರಿ ಯೋಜನೆಗಳಿಗೆ ₹500 ವೆಚ್ಚದಲ್ಲಿ ಕಾಮಗಾರಿ ಮಂಜೂರು ಮಾಡಲಾಗಿದ್ದು, ಈಗಾಗಲೇ ಯಳಂದೂರು ತಾಲ್ಲೂಕಿನ 100 ಬೆಡ್ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದ ವೇಳೆಯಲ್ಲಿ ಲೋಕಸಭಾ ವ್ಯಾಪ್ತಿಯಲ್ಲಿ 300 ಕೊಳವೆ ಬಾವಿ, ನೇರ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ ಸೇರಿದಂತೆ ಹಲವಾರು ಯೋಜನೆ ನೀಡಲಾಗಿತ್ತು. ನಿಗಮದಲ್ಲಿ ಸಾಲ ಪಡೆದುಕೊಂಡಿದ್ದ ಫಲಾನುಭವಿಗಳ ಕೋಟ್ಯಂತರ ಸಾಲ ಮನ್ನಾ ಮಾಡಲಾಯಿತು. 2022–23ನೇ ಸಾಲಿನಲ್ಲಿ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾಗಿರುವ 12 ಫಲಾನುಭವಿಗಳಿಗೆ ₹3.5 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಸೇರಿದಂತೆ ಮೋಟಾರ್, ಕೈಗಾರಿಕೆ ಇಲಾಖೆಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ 125 ಫಲಾನುಭವಿಗಳಿಗೆ ಹೋಲಿಗೆ ಯಂತ್ರ, ಮೀನುಗಾರಿಕೆ ಇಲಾಖೆಯಿಂದ 15 ಫಲಾನುಭವಿಗಳಿಗೆ ಸಲಕರಣೆ ಕಿಟ್, ಸಮಾಜ ಕಲ್ಯಾಣ ಇಲಾಖೆಯಿಂದ ಅರೆ ಅಲೆಮಾರಿ ಸಮುದಾಯದವರಿಗೆ 1 ವಾಹನ ನೀಡಲಾಗಿದೆ. ಫಲಾನುಭವಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಚಾಮೂಲ್ ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜು, ಯಳಂದೂರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಮೀನುಗಾರಿಕೆ ಇಲಾಖೆ ವಿವೇಕ್, ಕೈಗಾರಿಕೆ ಇಲಾಖೆ ಪುಷ್ಪಲತಾ, ಮುಖಂಡರಾದ ಸಂತೇಮರಹಳ್ಳಿ ಪಶಿ, ಉಮ್ಮತ್ತೂರು ಶಿವಣ್ಣ, ಗಣಗನೂರು ನಾಗಯ್ಯ, ಮಹದೇವ್, ಮಾದೇಶ್, ಮಲ್ಲೇಶ್, ಕಂದಹಳ್ಳಿ ನಂಜುಂಡಸ್ವಾಮಿ, ಕುದೇರು ಮಹೇವಯ್ಯ, ಎಸ್.ಮಹದೇವಯ್ಯ, ಅನುಶಂಕರ್, ಹೆಗ್ಗವಾಡಿ ರಾಜಣ್ಣ, ಬಾಗಳಿ ಶಿವಣ್ಣ, ಟೈಲರ್ ಶ್ರೀನಿವಾಸ್, ಬಸವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.