ಚಾಮರಾಜನಗರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಜ.21 ಮತ್ತು 22 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ಡಾ.ಸಿ.ಎನ್.ರೇಣಕಾದೇವಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಉದ್ಘಾಟಿಸಲಿದ್ದಾರೆ ಎಂದರು.
ಸಂಸದ ಸುನೀಲ್ ಬೋಸ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರದ ಕಾಯಂ ನೌಕರರು ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಪೊಲೀಸ್ ಹಾಗೂ ಕ್ರೀಡಾ ಮಿಸಲಾತಿ ಅಡಿ ಆಯ್ಕೆಯಾದ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ. ಅಗ್ನಿಶಾಮಕ ಹಾಗೂ ದೈಹಿಕ ಶಿಕ್ಷಕರಿಗೆ ಭಾಗವಹಿಸಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಅಥ್ಲೆಟಿಕ್ಸ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಥ್ರೋ, ಜಾವಲಿನ್, ರಿಲೇ, ಹರ್ಡಲ್ಸ್, ಹ್ಯಾಮರ್ ಥ್ರೋ, ವಾಲಿಬಾಲ್, ಫುಟ್ ಬಾಲ್, ಕಬ್ಬಡಿ, ಕ್ರಿಕೆಟ್, ಬಾಲ್ ಬ್ಯಾಡ್ಮಿಂಟನ್, ಚೆಸ್, ಟೇಬಲ್ ಟೆನ್ನಿಸ್, ಕೊಕ್ಕೊ, ಕೇರಂ, ಬಾಸ್ಕೆಟ್‌ಬಾಲ್, ಷಟಲ್ ಬ್ಯಾಡ್ಮಿಂಟನ್ ಸೇರಿದಂತೆ ಇತರೆ ಕ್ರೀಡೆಗಳು ನಡೆಯಲಿವೆ.
ಪುರುಷರ ವಿಭಾಗದಲ್ಲಿ 40 ವರ್ಷದೊಳಗಿನವರ, 40 ರಿಂದ 50 ವರ್ಷದೊಳಗಿನವರ ಹಾಗೂ 50 ರಿಂದ 60 ವರ್ಷದೊಳಗಿನವರ ವಿಭಾಗದಲ್ಲಿ ಹಾಗೂ ಮಹಿಳೆಯರ ವಿಭಾಗದಲ್ಲಿ 35 ವರ್ಷದೊಳಗಿನವರ, 35 ರಿಂದ 45 ವರ್ಷ ಒಳಗಿನವರ, 45 ರಿಂದ 60 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಸರ್ಕಾರಿ ನೌಕರರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಬಹುದು. ಎರಡು ದಿನಗಳ ಒಒಡಿ ಪ್ರಮಾಣಪತ್ರ ನೀಡಲಾಗುವುದು. ಕ್ರೀಡಾಂಗಣದಲ್ಲಿ ಲಭ್ಯವಿರುವ ಕ್ರೀಡೆ ಮಾತ್ರ ನಡೆಸಲಾಗುವುದು. ಸೌಲಭ್ಯಗಳಿಲ್ಲದ ಕ್ರೀಡೆಗಳನ್ನು ಮೈಸೂರಿನಲ್ಲಿ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಭರತ್ ಭೂಷಣ್, ಕಾರ್ಯಾಧ್ಯಕ್ಷ ಮಹದೇವ ಸ್ವಾಮಿ, ಖಜಾಂಚಿ ಶಿವಕುಮಾರಯ್ಯ, ರಾಜ್ಯ ಪರಿಷತ್ ಸದಸ್ಯ ನಟರಾಜು, ಗೌರವಾಧ್ಯಕ್ಷ ಎಸ್.ಮಹದೇವಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.