ADVERTISEMENT

ಬೇಡಿಕೆ ಈಡೇರಿಕೆಗೆ ಗ್ರಾ.ಪಂ. ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 15:51 IST
Last Updated 15 ಜುಲೈ 2021, 15:51 IST
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌/ಗುಮಾಸ್ತ ಹುದ್ದೆಯಿಂದ ಗ್ರೇಡ್‌–2 ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕಸಹಾಯಕರ ಹುದ್ದೆಗೆ ನೇರ ನೇಮಕಾತಿಗೆ ಸಂಬಂಧಿಸಿದ ಸರ್ಕಾರದ ಆದೇಶ ಹಿಂಪಡೆಯಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

‌ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸೇರಿದ ನೌಕರರು, ನ್ಯಾಯ ಕೊಡಿಸುವಂತೆ ಘೋಷಣೆ ಕೂಗಿದರು. ‌

ಬಿಲ್‌ ಕಲೆಕ್ಟರ್‌/ಗುಮಾಸ್ತ ಹುದ್ದೆಯಿಂದ ಗ್ರೇಡ್‌–2 ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕಸಹಾಯಕರ ಹುದ್ದೆಗೆ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಇದೇ ಜೂನ್‌ 24ರಂದು ಸಹಮತ ನೀಡಿದೆ. ಇದರ ಅನ್ವಯ ಜುಲೈ 2ರಂದು ಆದೇಶ ಹೊರಡಿಸಿದ್ದ ಸರ್ಕಾರ ಜುಲೈ 3ರಂದು ನೇಮಕಾತಿ ಆದೇಶ ವಾಪಸ್‌ ಪಡೆದಿದೆ. ಇದರಿಂದ ನಿವೃತ್ತಿಯ ಅಂಚವಿನಲ್ಲಿರುವ ಸಾವಿರಾರು ನೌಕರರಿಗೆ ತೊಂದರೆಯಾಗಿದೆ. ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ಸಿಬ್ಬಂದಿಗೆ 10ರಿಂದ 15 ತಿಂಗಳು ವೇತನವಿಲ್ಲದೆ ಸಂಕಷ್ಟದಲ್ಲಿದ್ದಾಗ 15ನೇ ಹಣಕಾಸು ಯೋಜನೆಯಲ್ಲಿ ಸಿಬ್ಬಂದಿಗೆ ವೇತನ ನೀಡುವಂತೆ 2020ರ ನವೆಂಬರ್‌ 25ರಂದು ಸರ್ಕಾರ ಆದೇಶ ಹೊರಡಿಸಿದೆ. ಆದರೂ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.‌

‘ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಎಲ್ಲ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ಇಎಫ್‌ಎಂಎಸ್‌ಗೆ ಸೇರದೇ ಇರುವ ಉಳಿದ ಸಿಬ್ಬಂದಿಯನ್ನು ಸೇರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಸ್ವಾಮಿ,ರಾಜ್ಯ ಸಹ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ಕಾರ್ಯದರ್ಶಿ ಪಿ.ಮಹದೇವಸ್ವಾಮಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.