ADVERTISEMENT

ಊರಿಗೆ ಮರಳಿದ ನಿವೃತ್ತ ಯೋಧ ಮಲ್ಲೇಶ್‌ಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 6:18 IST
Last Updated 10 ಜುಲೈ 2022, 6:18 IST
ಸೇನೆಯಿಂದ ನಿವೃತ್ತಿಹೊಂದಿ ಊರಿಗೆ ಮರಳಿದ ಮಲ್ಲೇಶ್‌ ಅವರನ್ನು ಶನಿವಾರ ಚಾಮರಾಜನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು
ಸೇನೆಯಿಂದ ನಿವೃತ್ತಿಹೊಂದಿ ಊರಿಗೆ ಮರಳಿದ ಮಲ್ಲೇಶ್‌ ಅವರನ್ನು ಶನಿವಾರ ಚಾಮರಾಜನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು   

ಚಾಮರಾಜನಗರ: ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ಬೇವಿನತಾಳಪುರದ ಯೋಧ ಬಿ.ಎಂ.ಮಲ್ಲೇಶ್ ಅವರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿ ಸಂಘ, ಅಖಿಲ ಭಾರತ ವೀರಶೈವ - ಲಿಂಗಾಯಿತ ಮಹಾಸಭಾ ಯುವ ಘಟಕ ಹಾಗೂ ಬೇವಿನತಾಳಪುರ ಗ್ರಾಮಸ್ಥರು, ಅಭಿಮಾನಿಗಳು, ಗೆಳೆಯರು ಅದ್ದೂರಿ ಸ್ವಾಗತ ಕೋರಿದರು.

ಬಿ.ಎಂ.ಮಲ್ಲೇಶ್ ಮಾತನಾಡಿ, ‘ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) 21 ವರ್ಷ ಸೇವೆ ಸಲ್ಲಿಸಿದ್ದೇನೆ. ಜಮ್ಮು ಕಾಶ್ಮೀರದಲ್ಲಿ ಏಳು ವರ್ಷ, ರಾಜಸ್ಥಾನದಲ್ಲಿ ಐದು ವರ್ಷ, ತ್ರಿಪುರಾದಲ್ಲಿ ನಾಲ್ಕು ವರ್ಷ, ಪಶ್ಚಿಮ ಬಂಗಾಳದಲ್ಲಿ ಆರು ವರ್ಷ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಬಂದಿದ್ದೇನೆ. ಇದು ತುಂಬಾ ಖುಷಿ ತಂದಿದೆ. ಎಲ್ಲರೂ ದೇಶಾಭಿಮಾನ ಬೆಳಸಿಕೊಳ್ಳಬೇಕು’ ಎಂದರು.

‘ಕರ್ನಾಟಕ ಎಂದರೆ ತುಂಬಾ ಅಭಿಮಾನ. ಅದರಲ್ಲೂ ಚಾಮರಾಜನಗರ ಎಂದರೆ ಬಹಳ ಹೆಮ್ಮೆಯಾಗುತ್ತದೆ. ನಾನು ಓದಿದ್ದು ಇಲ್ಲೇ. ನಿವೃತ್ತಿ ಜೀವನದಲ್ಲಿ ವ್ಯಾಪಾರ ಆರಂಭಿಸಿ ಸರಳ ಬದುಕು ಮಾಡಲು ನಿರ್ಧರಿಸಿದ್ದೇನೆ’ ಎಂದರು.

ADVERTISEMENT

ನಂತರ ನಗರದ ರೈಲ್ವೆ ನಿಲ್ದಾಣದಿಂದ ಹೂವಿನಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಬಿ.ಎಂ.ಮಲ್ಲೇಶ್ ಅವರನ್ನು ಮರವಣೆಗೆಯಲ್ಲಿ ಬೇವಿನತಾಳಪುರಕ್ಕೆ ಕರೆದೊಯ್ಯಲಾಯಿತು. ಮಾಜಿ ಯೋಧ ಪಿ.ಮಹದೇವಸ್ವಾಮಿ ಅವರು ಜೊತೆಗಿದ್ದರು.

ಈ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ಸಂಯೋಜಕ ಪರ್ವತ್ ರಾಜ್, ಅಖಿಲ ಭಾರತ ವೀರಶೈವ - ಲಿಂಗಾಯತ ಮಹಾಸಭಾ ಯುವ ಘಟಕ ಅಧ್ಯಕ್ಷ ವಿ.ಗುರುಪ್ರಸಾದ್, ರಂಗಸ್ವಾಮಿ, ರಾಜೇಶ್, ಮಹೇಶ್, ಕರ್ನಾಟಕ ಸೇನೆ ಅಧ್ಯಕ್ಷ ಮಿಂಚು ನಾಗೇಂದ್ರ, ಟೌನ್ ಅಧ್ಯಕ್ಷ ಮಂಜುನಾಥ್, ರುದ್ರ, ಹೈಟೆಕ್ ಶಿವು, ಪುಣಜನೂರು ಗಿರೀಶ್, ಹರಿಪ್ರಸಾದ್, ಹೊಸೂರು ಮಹೇಶ್, ನಿತೀಶ್, ಶರತ್, ಪ್ರಜ್ವಲ್, ರವಿ, ಸುನಿಲ್, ಮಹದೇವಸ್ವಾಮಿ, ಚೇತನ, ರಾಜೇಶ್, ಮಹೇಶ್, ಕಾರ್ತಿಕ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.