ADVERTISEMENT

ಗ್ಯಾರಂಟಿ ಯೋಜನೆ: ಅರ್ಹರೆಲ್ಲರಿಗೂ ತಲುಪಲಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:42 IST
Last Updated 21 ಡಿಸೆಂಬರ್ 2025, 4:42 IST
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು   

ಚಾಮರಾಜನಗರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿ ಶನಿವಾರ ಐದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಯುವನಿಧಿ ಕಾರ್ಯಕ್ರಮಗಳನ್ನು ತೊಡಕಾಗದಂತೆ ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.

ಕಳೆದ ಪ್ರಗತಿ ಪರಿಶೀಲನಾ ಸಭೆಯ ನಡಾವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳ ಅನುಪಾಲನಾ ವರದಿ ಹಾಗೂ ನವೆಂಬರ್ ಅಂತ್ಯದವರೆಗಿನ ಪ್ರಗತಿ ಪರಿಶೀಲಿಸಿದ ಅಧ್ಯಕ್ಷರು ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಂಡಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎಂದರು.

ADVERTISEMENT

ಅನ್ನಭಾಗ್ಯ ಯೋಜನೆಯಡಿ ನವೆಂಬರ್‌ನಲ್ಲಿ ಶೇ 91.25ರಷ್ಟು ಆಹಾರಧಾನ್ಯ ಹಂಚಿಕೆಯಾಗಿದೆ. ಕಳೆದ ಫೆಬ್ರವರಿಯಿಂದ ನವೆಂಬರ್‌ರವರೆಗೆ ಡಿಬಿಟಿ ಮೊತ್ತದ ಬದಲಾಗಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ವಸುಂಧರಾ ಸಭೆಗೆ ಮಾಹಿತಿ ನೀಡಿದರು.

ಅನ್ನಭಾಗ್ಯ ಕಾರ್ಯಕ್ರಮಡದಿ ವಿತರಿಸುವ ಅಕ್ಕಿಯ ತೂಕದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಚೀಲಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಹಿಂದಿರುಗಿಸಬೇಕು. ದೂರುಗಳು ಬಾರದಂತೆ ಪಡಿತರ ವಿತರಣೆ ಮಾಡಬೇಕು ಎಂದು ಅಧ್ಯಕ್ಷ ಎಚ್.ವಿ.ಚಂದ್ರು ಸೂಚಿಸಿದರು.

ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉದ್ಯೋಗ ಪಡೆದುಕೊಳ್ಳಲು ಪೂರಕ ಕ್ರಮ ವಹಿಸಬೇಕು. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುವಂತೆ ನೋಡಿಕೊಳ್ಳಬೇಕು. ಉದ್ಯೋಗಕ್ಕೆ ಪೂರಕವಾಗಿರುವ ಕೌಶಲ, ಅಪ್ರೆಂಟಿಸ್ ತರಬೇತಿ ನೀಡಲು ಕೌಶಲಾಭಿವೃದ್ಧಿ ಇಲಾಖೆ ಕ್ರಮವಹಿಸಬೇಕು ಎಂದರು.

ಜಮೀನಿನಲ್ಲಿ ಮನೆ ನಿರ್ಮಣ ಮಾಡಿಕೊಂಡವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಎನ್.ಒ.ಸಿ ನೀಡುವಾಗ ಎದುರಾಗುತ್ತಿರುವ ಸಮಸ್ಯೆಗಳು ಪರಿಹಾರವಾಗಬೇಕು. ಶಕ್ತಿ ಯೋಜನೆಯಡಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುವರಿ ಟ್ರಿಪ್‌ಗಳನ್ನು ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮಾತನಾಡಿ, ಸಭೆಯಲ್ಲಿ ಚರ್ಚೆಯಾಗುವ ವಿಷಯಗಳ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಲಹೆಗಳನ್ನು ಪರಿಗಣಿಸಿ ಕಾರ್ಯಕ್ರಮಗಳು ಶೇ 100ರಷ್ಟು ಅನುಷ್ಠಾನಗೊಳ್ಳಲು ಶ್ರಮವಹಿಸಬೇಕು ಎಂದು ಸೂಚಿಸಿದರು.

‌‌ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬಿ.ಪಿ. ನಾಗರಾಜ ಮೂರ್ತಿ, ರವಿ, ಸಿದ್ದರಾಜು, ಸದಸ್ಯರಾದ ಸೋಮೇಶ್ವರ, ಎಸ್.ಪ್ರಭು ಪ್ರಸಾದ್, ಕೆ.ಬಿ. ಚಿನ್ನಸ್ವಾಮಿ, ಉಮಾಪತಿ, ಎಂ. ಪ್ರದೀಪ್, ಭಾಗ್ಯ, ರಾಚಯ್ಯ, ಆರ್. ರಾಜೇಂದ್ರ, ಎಚ್.ಎನ್. ಜಯರಾಜು, ಎಂ. ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಆರ್. ಸುರೇಶ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.