ADVERTISEMENT

ಚಾಮರಾಜನಗರ: ಸಿ.ಎಂ ವಿರುದ್ಧ ಹೊನ್ನೂರು ಪ್ರಕಾಶ್ ಪದಬಳಕೆ ಖಂಡನೀಯ

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:31 IST
Last Updated 29 ಮೇ 2025, 15:31 IST
ಎಚ್‌.ವಿ.ಚಂದ್ರು
ಎಚ್‌.ವಿ.ಚಂದ್ರು   

ಚಾಮರಾಜನಗರ: ಚಾಮುಲ್‌ನ ಐಸ್‌ಕ್ರೀಂ ಘಟಕ ಸ್ಥಾಪನೆ ನಿರ್ಧಾರ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್‌ ಎಲ್ಲೆ ಮೀರಿ ವರ್ತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಸಿರುವುದು ಖಂಡನೀಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಹೊನ್ನೂರು ಪ್ರಕಾಶ್ ಗೂಂಡಾ ಸಂಸ್ಕೃತಿ ಪ್ರದರ್ಶನ ಮಾಡಿರುವುದು, ಮುಖ್ಯಮಂತ್ರಿ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಜನಪರ ಹಾಗೂ ರೈತರ ಪರ ಕಾಳಜಿ ಹೊಂದಿರುವ ಮುಖ್ಯಮಂತ್ರಿ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದರು.   

ಹೊನ್ನೂರು ಪ್ರಕಾಶ್ ಅಧಿಕಾರಿಗಳ ವಿರುದ್ಧವೂ ಬಹಿರಂಗ ಟೀಕೆ, ವಾಗ್ದಾಳಿ, ತೇಜೋವಧೆ ನಡೆಸುತ್ತಾರೆ. ಅಧಿಕಾರಿಗಳು ತಪ್ಪೆಸಗಿದರೆ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಾರೆ. ಬಹಿರಂಗವಾಗಿ ನಿಂದಿಸುವ ಅಧಿಕಾರ ಅವರಿಗಿಲ್ಲ. ದಲ್ಲಾಳಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅವರು, ದಲ್ಲಾಳಿಯಾಗಿರುವ ಚಾಮುಲ್ ಮಾಜಿ ಅಧ್ಯಕ್ಷ ನಾಗೇಂದ್ರ ಅವರೊಟ್ಟಿಗೆ ಸೇರಿ ಪ್ರತಿಭಟನೆ ನಡೆಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ADVERTISEMENT

ಚಾಮರಾಜನಗರದಲ್ಲಿ ವಿಶ್ವಗುರು ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದ್ದು ಹೊನ್ನೂರು ಪ್ರಕಾಶ್ ಅವರ ಅಳಿಯ ಸಂಸ್ಥೆಯ ವ್ಯವಸ್ಥಾಪಕರಾಗಿದ್ದರು. ಸಂಘದ ಸದಸ್ಯರಾಗಿ ಸಾಲವನ್ನೂ ಪಡೆದಿರುವ ಅವರು ಅವ್ಯವಹಾರದ ಬಗ್ಗೆ ಹೋರಾಟ ಮಾಡದಿರುವುದು ಅನುಮೂನ ಮೂಡಿಸುತ್ತದೆ ಎಂದರು.

ಚಾಮುಲ್‌ ಹಾಲು ಉತ್ಪಾದಕರ ಹಿತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಸಂಸ್ಥೆ ಹಾಗೂ ರೈತರ ಭವಿಷ್ಯದ ಹಿತದೃಷ್ಟಿಯಿಂದ ಐಸ್‌ಕ್ರೀಂ ಘಟಕ ಸ್ಥಾಪಿಸಲು ಮುಂದಾಗಿದೆ. ಕೇಂದ್ರ ಸರ್ಕಾರದಿಂದ ₹10 ಕೋಟಿ ನೆರವು, ಕೆಎಂಎಫ್‌ನಿಂದ ತಲಾ ₹10 ಕೋಟಿ ಸಹಾಯಧನ ಹಾಗೂ ಬಡ್ಡಿರಹಿತ ಸಾಲ ಹಾಗೂ ಒಕ್ಕೂಟದಲ್ಲಿರುವ ಆರ್ಥಿಕ ಸಂಪನ್ಮೂಲ ಬಳಸಿಕೊಂಡು ಐಸ್‌ಕ್ರೀಂ ಘಟಕ ಸ್ಥಾಪಿಸುತ್ತಿದೆ ಎಂದು ಸಮರ್ಥನೆ ನೀಡಿದರು.   

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆರ್.ಮಹದೇವು, ಮುಖಂಡರಾದ ಎಂ.ಶಿವಮೂರ್ತಿ, ಮಹದೇವ ಪ್ರಸಾದ್, ಸೊತ್ತನಹುಂಡಿ ಎಂ.ಸೋಮಣ್ಣ, ರಾಜೇಂದ್ರ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.