ADVERTISEMENT

ಹೂ ಮುಡಿದ ‘ಗುಲ್ ಮೊಹರ್’; ಪರಿಸರಕ್ಕೆ ರಂಗು ತುಂಬುವ ಕೆಂಬಣ್ಣದ ಪುಷ್ಪಗಳ ಲೋಕ 

​ಪ್ರಜಾವಾಣಿ ವಾರ್ತೆ
Published 9 ಮೇ 2025, 12:30 IST
Last Updated 9 ಮೇ 2025, 12:30 IST
ಯಳಂದೂರು ತಾಲ್ಲೂಕಿನ ಅಂಬಳೆ ಹಾಗೂ ಉಪ್ಪಿನಮೋಳೆ ಸುತ್ತಮುತ್ತ ಅರಳಿರುವ ಗುಲ್ ಮೊಹರ್
ಯಳಂದೂರು ತಾಲ್ಲೂಕಿನ ಅಂಬಳೆ ಹಾಗೂ ಉಪ್ಪಿನಮೋಳೆ ಸುತ್ತಮುತ್ತ ಅರಳಿರುವ ಗುಲ್ ಮೊಹರ್   

ಯಳಂದೂರು: ಮೇ ಮೊದಲ ವಾರ ಮುಗಿಯುತ್ತಿದ್ದು, ಮೇ-ಫ್ಲವರ್ ಹೂಗಳು ಕಣ್ಣು ಬಿಟ್ಟಿವೆ. ಬಿಸಿಲ ಬೇಗೆಗೆ ನಲುಗದ, ಮಳೆಗೆ ಮುಕ್ಕಾಗದ ಕೆಂಬಣ್ಣದ ಪುಷ್ಪಗಳು ರಂಗು ತಂದಿತ್ತಿವೆ. ಬೆಟ್ಟ, ಕಾಡು, ಮೇಡುಗಳ ಹಾದಿಗಳಲ್ಲಿ ಚಂದದ ಮೊಹರು ಒತ್ತಿದ ಇಂತಹ ‘ಗುಲ್ ಮೊಹರ್’ ವೃಕ್ಷಗಳನ್ನು ಜುಲೈವರೆಗೂ ಕಣ್ತುಂಬಿಕೊಳ್ಳಬಹುದು.

ತಾಲ್ಲೂಕಿನ ಎಲ್ಲಡೆ ಗುಲ್ ಮೊಹರ್ ವೃಕ್ಷಗಳಿವೆ. ಮುಂಗಾರು ಆರಂಭಕ್ಕೆ ಚಿಗುರಿ, ಮಳೆ ಹೆಚ್ಚಾಗುತ್ತಿದ್ದಂತೆ ತಿಳಿ ಕೆಂಪು, ಕೇಸರಿ ಇಲ್ಲವೇ ದಟ್ಟ ಕುಂಕುಮದ ಬಣ್ಣ ಚೆಲ್ಲುತ್ತದೆ. ರಣ ಬಿಸಿಲಿನಲ್ಲೂ ರಂಗು ಹೆಚ್ಚಿಸಿಕೊಳ್ಳುವ ಮರಗಳು ಪರಿಸರ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಗುಲ್ ಮೊಹರ್ ಬಯಲು ಸೀಮೆಯಲ್ಲಿ ಹೆಚ್ಚು ಹೂ ಅರಳಿಸಿವೆ. ಬೆಟ್ಟ, ಗುಡ್ಡಗಳಲ್ಲಿ ನಿಧಾನಕ್ಕೆ ಚಿಗುರುತ್ತಿವೆ. ವೃಕ್ಷಗಳ ಮುಡಿಯಲ್ಲಿ ಕೇಸರಿ ಕೆಂಪು ಮಿಶ್ರಿತ ವರ್ಣದಲ್ಲಿ ಅರಳಿ ಜನಮನಕ್ಕೆ ತಂಪು ತುಂಬಿದರೆ, ನಿಸರ್ಗಕ್ಕೆ ತಂಪಿನ ಆರತಿ ಬೆಳಗುವಂತೆ ರಾರಾಜಿಸುತ್ತಿವೆ.

ADVERTISEMENT

ಗ್ರಾಮೀಣ ಭಾಗದ ಜನರು ಮದುವೆ ಮನೆಗಳಲ್ಲಿ, ಗೃಹ ಪ್ರವೇಶದಲ್ಲಿ ಗುಲ್‌ಮೊಹರ್ ಟೊಂಗೆಗಳನ್ನು ಹೂ ಸಮೇತ ಕಿತ್ತು ಅಲಂಕರಿಸುತ್ತಾರೆ. ಮರದಲ್ಲಿರುವ ಖಡ್ಗವನ್ನು ಹೋಲುವ ಉದ್ದವಾದ ಕಾಯಿಗಳನ್ನು ಮಕ್ಕಳು ಕಿತ್ತು ಬೇಸಿಗೆ ರಜೆಯಲ್ಲಿ ಆಡಿ ನಲಿಯುತ್ತಾರೆ. ಹಸಿರು ಮೊಗ್ಗು, ಅದರೊಳಗಿನ ದಟ್ಟ ಕೆಂಪು ದಳ, ಕೇಸರದ ಭಾಗಗಳು ನಯವಾಗಿದ್ದು, ಕೀಟಗಳನ್ನು ಆಕರ್ಷಿಸುತ್ತದೆ ಎನ್ನುತ್ತಾರೆ ಪರಿಸರ ವಿಜ್ಞಾನಿ ಸಿದ್ದಪ್ಪಶೆಟ್ಟಿ.

ಗುಲ್ ಮೊಹರ್‌ಗೆ ಧಾರ್ಮಿಕ ಹಿನ್ನಲೆಯೂ ಇದೆ. ಕ್ರಿಸ್ತನನ್ನು ಸಿಲುಬೆಗೆ ಏರಿಸಿದಾಗ ಆತನಿಂದ ಚಿಮ್ಮಿದ ರಕ್ತ ತಗುಲಿ ದಟ್ಟ ಕೆಂಪು ಹೂವಾಗಿ ಅರಳಿತು ಎನ್ನುತ್ತಾರೆ ಕ್ರೈಸ್ತರು. ಮೂಲಿಕೆ ತಜ್ಞರು ಈ ವೃಕ್ಷದಿಂದ ಕಷಾಯವನ್ನು ತಯಾರಿಸಿ ಕೊಡುತ್ತಿದ್ದ ಬಗೆಯನ್ನು ಹೇಳುತ್ತಾರೆ. ಒಟ್ಟಾರೆ, ಈ ಹೂಗಳ ಸೊಬಗು ಮತ್ತು ಬಣ್ಣ ವಯಸ್ಸಿನ ಅಂತರ ಇಲ್ಲದೆ ಎಲ್ಲರನ್ನು ಸೆಳೆಯುತ್ತದೆ ಎನ್ನುತ್ತಾರೆ ಏಟ್ರಿ ಕ್ಷೇತ್ರ ಪಾಲಕ ನಾಗೇಂದ್ರ.

ಗುಲ್ ಮೊಹರ್ ಚರಿತ್ರೆ: ಗುಲ್ ಮೊಹರ್ ವೃಕ್ಷಗಳಿಗೆ ಆಯಾ ದೇಶದಲ್ಲಿ ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಪರ್ಶಿಯನ್ ಮೂಲದ ಈ ವೃಕ್ಷ ಆಯಾ ನಿಸರ್ಗದಲ್ಲಿ ತಿಳಿ ಕೆಂಪು, ದಟ್ಟ ಕೆಂಪು ಹಾಗೂ ಕೇಸರಿ ಕೆಂಪು ಹೂ ಬಿಡುತ್ತವೆ. ಇದರ ಆಧಾರದ ಮೇಲೆ ‘ಗುಲ್’ ಎಂದರೆ ಗುಲಾಬಿ, ‘ಮೊಹರ್’ ಎಂದರೆ ಗುರುತು ಎಂದು ಅರ್ಥೈಸಲಾಗಿದೆ. ಬೇರೆ ಬೇರೆ ದೇಶಗಳ ಹವಾಮಾನಕ್ಕೆ ಅನುಗುಣವಾಗಿ ವರ್ಷಪೂರ್ತಿ ಹೂ ಬಿಡುತ್ತವೆ.

ಭಾರತದಲ್ಲಿ ಏಪ್ರಿಲ್-ಜೂನ್ ನಡುವೆ ಕಂಗೊಳಿಸುತ್ತವೆ. ಗ್ರಾಮೀಣರು ಶುಭ ಸಂಕೇತವಾಗಿ ಇದರ ಹೂ ಗೊಂಚಲನ್ನು ಕಿತ್ತು ಚಪ್ಪರ, ಹಸೆಗಳಲ್ಲಿ ಅಲಂಕರಿಸುತ್ತಾರೆ. ರಸ್ತೆ ವಿಸ್ತರಣೆ ಹಾಗೂ ಮರಗಳ ಹನನದಿಂದ ಇವುಗಳ ಸಂತತಿ ನಶಿಸುತ್ತಿದ್ದು, ಈ ಮರಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎನ್ನುತ್ತಾರೆ ಪರಿಸರ ಪ್ರಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.