ADVERTISEMENT

ಯಳಂದೂರು | ಕಡು ಬೇಸಿಗೆಯ ಕೇಸರಿ ಕಾವ್ಯ

ರಸ್ತೆಬದಿ, ನಗರ, ಹಳ್ಳಿ, ಕಾನನ ಎಲ್ಲೆಲ್ಲೂ ಈಗ ಗುಲ್‌ಮೊಹರ್‌ ಸೌಂದರ್ಯ

ನಾ.ಮಂಜುನಾಥ ಸ್ವಾಮಿ
Published 17 ಮೇ 2020, 19:45 IST
Last Updated 17 ಮೇ 2020, 19:45 IST
ಚಾಮರಾಜನಗರದ ಸೋಮವಾರಪೇಟೆ ಬಳಿಯ ಸತ್ಯಮಂಗಲ ರಸ್ತೆ ಬದಿಯಲ್ಲಿ ಅರಳಿ ನಿಂತ ಗುಲ್‌ ಮೊಹರ್‌
ಚಾಮರಾಜನಗರದ ಸೋಮವಾರಪೇಟೆ ಬಳಿಯ ಸತ್ಯಮಂಗಲ ರಸ್ತೆ ಬದಿಯಲ್ಲಿ ಅರಳಿ ನಿಂತ ಗುಲ್‌ ಮೊಹರ್‌   

ಯಳಂದೂರು: ಮೇ ತಿಂಗಳ ಮಧ್ಯದಲ್ಲಿದ್ದೇವೆ. ರಸ್ತೆಗಳ ಬದಿಯಲ್ಲಿ, ನಗರ, ಗ್ರಾಮೀಣ ಪ್ರದೇಶ, ಕಾನನ... ಹೀಗೆ ನೋಡಿದಲ್ಲೆಲ್ಲಾ ಈಗ ಕೆಂಪು ಪುಷ್ಪಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

‘ಮೇ ಫ್ಲವರ್’‌ ಎಂದು ಸಾಮಾನ್ಯವಾಗಿ ಕರೆಯುವ ‘ಗುಲ್‌ ಮೊಹರ್’ನ ಸಮಯ ಇದು. ಜಿಲ್ಲೆಯ ಪ್ರತಿ ಗ್ರಾಮ, ರಸ್ತೆ, ಹೊಲ, ಗದ್ದೆ, ಶಾಲೆಗಳ ಬಳಿ ಗುಲ್‌ಮೊಹರ್‌ ಈಗಕಾಣಬಹುದು. ಉಷ್ಣ ವಲಯದ ಮರವಾಗಿರುವ ಇದು ಪ್ರಪಂಚದ ಎಲ್ಲೆಡೆ ಬೆಳೆಯುತ್ತದೆ.

ಮದುವೆ, ಹಬ್ಬ ಮತ್ತು ಗೃಹ ಪ್ರವೇಶದ ಸಂದರ್ಭದಲ್ಲಿ ಇದರ ಹೂ ಗೊಂಚಲನ್ನು ಕಿತ್ತುಚಪ್ಪರಗಳ ನಡುವೆ ಅಲಂಕರಿಸುವ ಪರಂಪರೆ ಗ್ರಾಮೀಣ ಭಾಗಗಳಲ್ಲಿ ಇನ್ನೂ ಉಳಿದಿದೆ. ಸುಮಾರು 15ರಿಂದ 60 ಅಡಿ ಎತ್ತರ ಬೆಳೆಯುವ ಇದನ್ನು ವನಗಳಲ್ಲಿ ಮತ್ತು ರಸ್ತೆಯಇಕ್ಕೆಲಗಳಲ್ಲಿ ಹೆಚ್ಚು ಬೆಳೆಸಲಾಗುತ್ತದೆ.

ADVERTISEMENT

‘ಇದು ಕಡುಗೆಂಪು, ಕಿತ್ತಳೆ ಗೆಂಪು, ಕೇಸರಿ ಲತೆಗಳು ಹಸಿರು ವೃಕ್ಷಕ್ಕೆ ಬಾಸಿಂಗ ತೊಡಿಸಿದಂತೆ ಆಕರ್ಷಕವಾಗಿ ಕಾಣುತ್ತದೆ. ಮಳೆಗಾಲದ ಮುಂಜಾವಿನ ರಸ್ತೆಯಲ್ಲಿ ಪುಷ್ಪಗಳು ಉದುರಿದಾಗ ಪುಷ್ಪದ ಚಾದರ ಎದ್ದುಕಾಣುತ್ತದೆ. ಹಳದಿ ಮತ್ತು ಬಿಳಿ ಹೂಗಳ ಸಂತತಿಯನ್ನೂ ಕಾಣಬಹುದು. ಮಕ್ಕಳು ಇದರಪುಷ್ಪಪಾತ್ರೆಯನ್ನು ಕಿತ್ತು ಇದರೊಳಗಿನ ಕೇಸರದ ಕೊಕ್ಕೆಯನ್ನು ತೆಗೆದು ಆಟವಾಡುವಸಂಭ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕಾಣಬಹುದು’ ಎಂದು ಹೇಳುತ್ತಾರೆ ಅಂಬಳೆಶಿವಪ್ಪ.

ಅವರೆಕಾಯಿಯಂತಹ ಉದ್ದನೆಯ ಕತ್ತಿಯಾಕಾರದ ಕೋಡು ಸಣ್ಣ ಗಾತ್ರದ 20–30 ಬೀಜಗಳನ್ನು ಹೊಂದಿರುತ್ತದೆ. 5 ಸೆಂ.ಮೀ, ಉದ್ದ ಬೆಳೆಯುವ ಹಸಿರು ಬಣ್ಣದ ಕೋಡು ಬಲಿತಾಗ ಕಡುಕಂದು ವರ್ಣ ಹೊಂದಿದರೆ,ಮರದ ಕಾಂಡ ಬೂದು ಮಿಶ್ರಿತ ಕಂದು ಬಣ್ಣ ಪಡೆಯುತ್ತದೆ. ಬೀಜ ಮತ್ತು ರೆಂಬೆ ನೆಟ್ಟುಹೊಸ ಸಸ್ಯಗಳನ್ನು ಬೆಳೆಸಬಹುದು. ಅಲಂಕಾರಿಕಕ್ಕೆ ಇಲ್ಲವೇ ನೆರಳಿಗಾಗಿ ಸಾಲು ಮರದಂತೆಬೆಳೆಸುತ್ತಾರೆ.

ಅಲಂಕಾರಕ್ಕೆ ಮಾತ್ರವಲ್ಲ, ನೆರಳಿಗೂ ಬೇಕು
ಮೇ, ಜೂನ್‌, ಜುಲೈಗಳಲ್ಲಿ ಹೂವುಗಳಿಂದ ಜನರನ್ನು ಆಕರ್ಷಿಸುವ ಈ ಮರ, ವರ್ಷ ಪೂರ್ತಿ ಜನರಿಗೆ ನೆರಳು ನೀಡುತ್ತದೆ.

‘ಬೇಸಿಗೆಯ ದಾಹ ನೀಗಲು, ಸಂಜೆ ಮತ್ತು ಬೆಳಿಗ್ಗೆ ವಾಯುವಿಹಾರಿಗಳು ಅಡ್ಡಾಡುವಾಗ ಮರದ ನೆರಳಲ್ಲಿ ಸ್ವಲ್ಪ ಸಮಯ ಕುಳಿತು ವಿಶ್ರಮಿಸುತ್ತಾರೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿಬದಿಗಳಲ್ಲೂ ಗುಲ್‌ ಮೊಹರ್‌ ಲತೆಗಳು ಹಸಿರು ವೃಕ್ಷಕ್ಕೆ ಕೆಂಪು ಛತ್ರಿ ತೊಟ್ಟಂತೆಜನಮನವನ್ನು ಆಕರ್ಷಿಸುತ್ತಿದೆ’ ಎನ್ನುತ್ತಾರೆ ಪತ್ರಿಕಾ ವಿತರಕ ಗೋವಿಂದರಾಜ್‌.

ಬೀಜದಿಂದ ಉತ್ಪಾದಿಸಿದ ಅಂಟು, ಎಣ್ಣೆಯನ್ನು ಜವಳಿ, ಚರ್ಮ, ಸಾಬೂನು, ಔಷಧಿ‌ ಮೊದಲಾದ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ವೃಕ್ಷದ ಮೂಲ ಮಡಗಾಸ್ಕರ್‌. ಫೆಬಾಸಿಯೇ ಕುಟುಂಬದ ಸೀಸಲ್ಪಿನಿಯೊಯಿಡೆ ಉಪ ಕುಟುಂಬಕ್ಕೆ ಸೇರಿದೆ. ಇದರ ಸಸ್ಯ ಶಾಸ್ತ್ರೀಯ ಹೆಸರುಡೆಲೊನಿಕ್ಸ್‌ ರೆಜಿಯ. ಕನ್ನಡದಲ್ಲಿ ಕತ್ತಿಕಾಯಿ ಮರ, ಹೀಮದಿಯಲ್ಲಿ ಗುಲ್‌ಮೊಹರ್‌, ಬೆಂಕಿಮರ, ದೊಡ್ಡ ರತ್ನಗಂಧಿ, ಸೀಮೆ ಸಂಕೇಶ್ವರ, ಕೃಷ್ಣಾಚುರ, ರಾಧಾಚುರ ಎಂಬ ಹೆಸರುಗಳಿಂದಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.