ADVERTISEMENT

ಗುಂಡ್ಲುಪೇಟೆ: ಕೋಡಿ ಬಸವೇಶ್ವರ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:58 IST
Last Updated 8 ಏಪ್ರಿಲ್ 2025, 13:58 IST
ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿಯಲ್ಲಿ ಕೋಡಿಬಸವೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿಯಲ್ಲಿ ಕೋಡಿಬಸವೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು   

ಗುಂಡ್ಲುಪೇಟೆ: ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ಕೋಡಿ ಬಸವೇಶ್ವರ ರಥೋತ್ಸವ ವಿಜೃಂಭಣೆಯಿಂದ ಸೋಮವಾರ ಜರುಗಿತು.

ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮ ಮತ್ತು ಹೊರ ವಲಯದ ಬರಗಿ ಕೆರೆ ಬಳಿಯ ಕೋಡಿಬಸವೇಶ್ವರ ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಲಾಗಿತ್ತು. ಗ್ರಾಮದ ಎಲ್ಲಾ ದೇವಾಲಯಗಳಿಗೂ ದೀಪಾಲಂಕಾರ ಮಾಡಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಕೋಡಿ ಬಸವೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ವೀರಭದ್ರ ಕುಣಿತ, ತಮಟೆ, ಮಂಗಳವಾದ್ಯ, ಸತ್ತಿಗೆ ಸುರಪಾನಿ ಇತರೆ ಜನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಗ್ರಾಮದ ಬಸ್ ನಿಲ್ದಾಣದ ಬಳಿ ಧ್ವಜ ಪತಾಕೆ, ತಳಿರು, ತೋರಣ ಮತ್ತು ಬಗೆಬಗೆಯ ಹೂವಿನಿಂದ ಅಲಂಕೃತಗೊಂಡ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿ ಇರಿಸಿ ಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರು ಜೈಕಾರದ ಘೋಷಣೆಗಳೊಂದಿಗೆ ರಥವನ್ನು ಎಳೆದರು.

ADVERTISEMENT

ಬೃಹತ್ ಗಾತ್ರದ ಹಗ್ಗ ಹಿಡಿದು ಬಿರುಬಿಸಿಲನ್ನು ಲೆಕ್ಕಸದೇ ಉಳುಮೆ ಮಾಡಿದ ಜಮೀನಿನ ಮೂಲಕ ಎಳೆದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮತ್ತೆ ಅದೇ ಮಾರ್ಗದಲ್ಲಿ ರಥವನ್ನು ಗ್ರಾಮಕ್ಕೆ ಎಳೆದು ತರಲಾಯಿತು.

ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಳೀಯ ಘಟಕದವರು ವಿಶೇಷ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.