ADVERTISEMENT

ಗುಂಡ್ಲುಪೇಟೆ: ಮಹಾಪಾರ್ವತಿ ಅಮ್ಮ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:27 IST
Last Updated 1 ಜುಲೈ 2025, 15:27 IST
ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಸಕಲಪುರದ ಮಹಾಪಾರ್ವತಿ ಅಮ್ಮನವರ ಜಾತ್ರಾ ಮಹೋತ್ಸವ ಮೆರವಣಿಗೆ ನಡೆಯಿತು
ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಸಕಲಪುರದ ಮಹಾಪಾರ್ವತಿ ಅಮ್ಮನವರ ಜಾತ್ರಾ ಮಹೋತ್ಸವ ಮೆರವಣಿಗೆ ನಡೆಯಿತು   

ಗುಂಡ್ಲುಪೇಟೆ: ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಸಕಲಪುರದ ಮಹಾಪಾರ್ವತಿ ಅಮ್ಮನವರ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಬರಗಿ ಗ್ರಾಮಸ್ಥರು ಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಬರಗಿ ಗ್ರಾಮದಿಂದ ಛತ್ರಿ, ಚಾಮರ, ನಂದಿ ಧ್ವಜ, ಮಂಗಳವಾದ್ಯದೊಂದಿಗೆ ಅಮ್ಮನವರ ಉತ್ಸವಮೂರ್ತಿ ಮತ್ತು ಆಭರಣಗಳೊಡನೆ ಅರಣ್ಯದಲ್ಲಿರುವ ದೇವಾಲಯಕ್ಕೆ ತೆರಳಿದ್ದರು.

ಅಲ್ಲಿ ಅಮ್ಮನವರ ಮೂರ್ತಿಯನ್ನು ಚಿನ್ನಾಭರಣಗಳು ಮತ್ತು ನಾನಾ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಬಾಯಿ ಬೀಗ ಇತರೆ ಹರಕೆಗಳನ್ನು ಒಪ್ಪಿಸಲಾಯಿತು. ಮಂಗಳವಾರ ಬೆಳಗಿನ ಜಾವ 5ಕ್ಕೆ ಕೊಂಡೋತ್ಸವ, ಬಳಿಕ ಎಡೆಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿತು.

ADVERTISEMENT

ಗ್ರಾಮದಲ್ಲಿ ಅಲಂಕೃತವಾದ ಹೂವಿನ ಮಂಟಪದಲ್ಲಿ ಅಮ್ಮನವರ ಉತ್ಸವ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಅಲಂಕೃತ ಹೋರಿಗಳು, ನಂದಿಧ್ವಜ, ವೀರಭದ್ರ ಕುಣಿತ, ಮಂಗಳವಾದ್ಯ, ತಮಟೆ ಇತರೆ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಸಮವಸ್ತ್ರ ಧರಿಸಿದ್ದ ಯುವಕರು ಮಂಟಪವನ್ನು ಹೊತ್ತು ಸಾಗಿದರು.

ಮೆರವಣಿಯುದ್ದಕ್ಕೂ ಕಲಾತಂಡಗಳ ತಾಳಕ್ಕೆ ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು. ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕಿ ಉತ್ಸವವನ್ನು ಬರಮಾಡಿಕೊಂಡು, ಪೂಜೆ ಸಲ್ಲಿಸುವ ಮತ್ತು ಹೂವನ್ನು ಎಸೆಯುವ ಮೂಲಕ ಭಕ್ತಿ ಮೆರೆದರು. ಪ್ರತಿ ವರ್ಷದಂತೆ ತಾಲ್ಲೂಕಿನ ನಾನಾ ಕಡೆಗಳಿಂದ ರೈತರು ತಮ್ಮ ಜಾನುವಾರುಗಳನ್ನು ಕರೆತಂದು ಪಂಜು ಹಚ್ಚುವ ಮೂಲಕ ಹರಕೆ ಪೂರೈಸಿದರು. ಈಡುಗಾಯಿ ಸೇವೆಯೂ ನಡೆಯಿತು.

ಗುಂಡ್ಲುಪೇಟೆ ಠಾಣೆ ಪಿಐ ಜಯಕುಮಾರ್, ಸಬ್‌ ಇನ್‌ಸ್ಪೆಕ್ಟರ್ ಸಾಹೇಬಗೌಡ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.