
ಗುಂಡ್ಲುಪೇಟೆ: ‘ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಅಗತ್ಯವಿರುವ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಇನ್ನಷ್ಟು ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗುವುದು’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ತಾಲ್ಲೂಕು ಬೆಳಚಲವಾಡಿ ಹಾಗೂ ಕಲ್ಲಹಳ್ಳಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಕೆ.ಕೆ.ಹುಂಡಿ ಗ್ರಾಮದಲ್ಲಿ ರಸ್ತೆ ನಿರ್ಮಾಣ, ಮಗುವಿನಹಳ್ಳಿ ಕಾಲೊನಿ, ಕಾರೇಮಾಳ, ಆಡಿನ ಕಣಿವೆ, ಹಗ್ಗದಹಳ್ಳ, ಕನ್ನೇಗಾಲ ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಮುಖ್ಯಮಂತ್ರಿ ಅವರ ₹50 ಕೋಟಿ ವಿಶೇಷ ಅನುದಾನದಲ್ಲಿ ಬಹು ಬೇಡಿಕೆ ರಸ್ತೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಎಸ್.ಇ.ಪಿ, ಸಾಮಾನ್ಯ ವರ್ಗದ ಹೆಚ್ಚು ಅನುದಾನ ಬರಲಿದೆ. ಟಿಎಸ್‌ಪಿಯಿಂದಲೂ ₹4 ಕೋಟಿ ಬರುವ ನಿರೀಕ್ಷೆಯಿದೆ. ಈಗಾಗಲೇ ಪಿಎಂ ಜನ್ ಮನ್ ಯೋಜನೆಯಡಿ ಕಾಡಂಚಿನ ಜೇನು ಕುರುಬ ಜನಾಂಗದ ಕಾಲೊನಿಗಲ್ಲಿ ₹1.35 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
‘ಕಾರೇಮಾಳದಲ್ಲಿ 137 ಮಂದಿ ಹಾಡಿ ಜನರಿಗೆ ಮನೆ ನಿರ್ಮಾಣಕ್ಕಾಗಿ ಈಗಾಗಲೇ ಪಟ್ಟಿ ಕಳುಹಿಸಲಾಗಿದ್ದು, ಮಂಜೂರಾತಿಗೆ ಕ್ರಮ ವಹಿಸಲಾಗುವುದು. ಜೊತೆಗೆ 2 ತಿಂಗಳಿಂದ ಕೆಎಸ್‌ಆರ್‌ಟಿಸಿ ಬಸ್ ಗ್ರಾಮಕ್ಕೆ ಬರುತ್ತಿಲ್ಲ ಎಂಬ ದೂರಿದ್ದು, ಬಸ್ ಬಿಡುವಂತೆ ಡಿಪೋ ಮ್ಯಾನೇಜರ್ ಅವರಿಗೆ ತಿಳಿಸಲಾಗುವುದು’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ಹಂಗಳ ಗ್ರಾಪಂ ಅಧ್ಯಕ್ಷೆ ಚಿಕ್ಕತಾಯಮ್ಮ, ಸದಸ್ಯರಾದ ನಾಗರಾಜು, ವೃಷಬೇಂದ್ರ, ಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಷಕಂಠ, ಸಿದ್ದರಾಜು, ಶಿರಿಯಪ್ಪ, ಗೋಪಾಲಪುರ ಲೋಕೇಶ್, ಚಂದ್ರಪ್ಪ, ಶಿವಸ್ವಾಮಿ, ಶಿವಣ್ಣ, ವೀರನಪುರ ಗುರುಪ್ರಸಾದ್, ಮಡಹಳ್ಳಿ ಮಣಿ, ಬಸವಣ್ಣ, ಕಲ್ಲಿಗೌನಡಹಳ್ಳಿ ಬಸವರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.