
ಗುಂಡ್ಲುಪೇಟೆ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಪಿಡಿಒಗಳು ಕ್ರಮ ವಹಿಸಿ, ಅಗತ್ಯವಿದ್ದರೆ ಗಮನಕ್ಕೆ ತರುವಂತೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ನಡೆದ ಬರ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕರು, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದ್ದು, ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಿ ಕೆಲಸ ಮಾಡಬೇಕು. ಗ್ರಾಮಗಳಲ್ಲಿ ಚರಂಡಿ ಹೂಳೆತ್ತುವುದಕ್ಕೆ ಮೊದಲ ಆದ್ಯತೆಯನ್ನು ಪಿಡಿಒಗಳು ನೀಡಬೇಕು. ತೊಂಡವಾಡಿ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ, ಜನಜಾಗೃತಿ; ಕೂತನೂರಿನಲ್ಲಿ ಅನೈರ್ಮಲ್ಯ ತಾಂಡವಾಡುವ ಬಗ್ಗೆ ಶಾಸಕರು ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಪಟ್ಟಣದ ಡೋಂಗ್ರಿ ಗೆರೆಶಿಯಾ ಕಾಲೊನಿಯಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸಲು ಸೂಚಿಸಿದರು.
ತಗ್ಗಲೂರು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ. ಅಂತರ್ಜಲ ಲಭ್ಯತೆ ಇಲ್ಲದ್ದರಿಂದ ಕೊಳವೆಬಾವಿ ಕೊರೆಯಿಸುವುದು ಬೇಡ. ಖಾಸಗಿ ಬೋರ್‌ವೆಲ್‌ಗಳನ್ನು ತಾತ್ಕಾಲಿಕವಾಗಿ ಬಳಸಿ ಎಂದು ಸಲಹೆ ನೀಡಿದರು. ತಾ.ಪಂ. ಇಒ ಮತ್ತು ಜಿ.ಪಂ. ಸಿಇಒ ಮೂಲಕ ಸಹಕಾರ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದರು.
ಹಂಗಳದಲ್ಲಿ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದು, ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿರುವುದು, ಬೇಸಿಗೆಯಲ್ಲಿ ಸಮಸ್ಯೆ ಬಿಗಡಾಯಿಸುವ ಬಗ್ಗೆ, ಬೊಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕುಂದಕೆರೆ, ಉಪಕಾರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪಿಡಿಒ ವಿ.ಶಾಂತಮಲ್ಲಪ್ಪ ಮಾಹಿತಿ ನೀಡಿದರು. ಬಹುಗ್ರಾಮ ನೀರಿನ ಸಂಪರ್ಕವಿಲ್ಲದೆ ಮಡಹಳ್ಳಿಯಲ್ಲೂ ನೀರಿಗೆ ಅಭಾವದ ಬಗ್ಗೆ ಪಿಡಿಒ ಎಸ್.ಪ್ರಸಾದ್ ಮಾಹಿತಿ ನೀಡಿದರು.
ಕುರುಬರಹುಂಡಿಯ ಕೊಳವೆ ಬಾವಿಗೆ ಮೋಟಾರ್ ಪಂಪ್, ಸಲಕರಣೆ ಅಳವಡಿಸದ್ದರಿಂದ ಬೆಳಚಲವಾಡಿಯಲ್ಲಿ ಸಮಸ್ಯೆ ಆಗಿರುವ ಬಗ್ಗೆ ಪಿಡಿಒ ಗುರುಪ್ರಸಾದ್, ಹೆಗ್ಗವಾಡಿ ಗ್ರಾಮದ ಯಂತ್ರಾಗಾರದ ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಸೆಸ್ಕ್ ವಿಧಿಸಿದ ದಂಡ ಪಾವತಿ ಅಸಾಧ್ಯದ ಬಗ್ಗೆ ಪಿಡಿಒ ನಾಗಭೂಷಣ ಆರಾಧ್ಯ ಹೇಳಿಕೊಂಡರು. ಪುತ್ತನಪುರ ಹಂಗಳ ಪುರ, ಬಸವಾಪುರ ಗ್ರಾಮಗಳ ಕುಡಿವ ನೀರಿನ ಯಂತ್ರಗಾರಗಳ ಬಿಲ್ ಪಾವತಿಗೆ ಅನುದಾನವಿಲ್ಲದ ವಿಷಯ ತಿಳಿಸಲಾಯಿತು.
ತಹಶೀಲ್ದಾರ್ ಎಂ.ಎಸ್.ತನ್ಮಯ್, ತಾಲ್ಲೂಕು ಪಂಚಾಯಿತಿ ಇಒ ಷಣ್ಮುಗಂ, ಬಿಇಒ ಟಿ.ಆರ್.ಸ್ವಾಮಿ, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಭಾಸ್ಕರ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮಾದೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಸಿಡಿಪಿಒ ಹೇಮಾವತಿ, ಟಿಎಚ್‌ಒ ಡಾ.ಅಲೀಂಪಾಷ , ಪಿಡಿಒಗಳು , ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.