
ಗುಂಡ್ಲುಪೇಟೆ: ‘ರಸ್ತೆ ಬದಿ ಹಾಗೂ ಮನೆಗಳ ಸುತ್ತಮುತ್ತ ಓಡಾಡುವ ಬೀದಿ ನಾಯಿಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶರವಣ ಹೇಳಿದರು.
ಪಟ್ಟಣದ ಕ್ರೈಸ್ತ ಪಬ್ಲಿಕ್ ಶಾಲೆಯಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ನಾಯಿ ಕಡಿತ ಮತ್ತು ಸುರಕ್ಷಿತ ಕ್ರಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚಿಕ್ಕ ಮಕ್ಕಳು, ಹಿರಿಯ ನಾಗರಿಕರಿಗೆ ನಾಯಿ ಕಡಿತ ಪ್ರಕರಣ ಹೆಚ್ಚಳವಾಗಿದೆ. ಇದಕ್ಕೆ ಕ್ರಮವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ನಾಯಿ ಕಡಿತ ನಂತರ ರೇಬೀಸ್ ಚುಚ್ಚು ಮದ್ದು ಹಾಕಿಸುವುದೂ ಅಗತ್ಯ’ ಎಂದು ತಿಳಿಸಿದರು.
‘ನ್ಯಾಯಾಲಯ ಆದೇಶದಂತೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಿಕ್ಷಣ ಸಂಸ್ಥೆಗಳ ಒಳಗೆ ನಾಯಿಗಳು ಬರದಂತೆ ಕ್ರಮ ವಹಿಸಿ, ಕಾಂಪೌಡ್ ನಿರ್ಮಾಣ ಮಾಡಬೇಕು. ಆಯಾಯ ಸಂಸ್ಥೆ ಆವರಣದಲ್ಲಿ ಒಬ್ಬ ವ್ಯಕ್ತಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಉನ್ನತಮಟ್ಟದ ಅಧಿಕಾರಿಗಳು ರಸ್ತೆಯಲ್ಲಿ ಸತ್ತು ಬಿದ್ದಿರುವ ನಾಯಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳು ಬೀದಿ ನಾಯಿಗಳನ್ನು ಕಂಡರೆ ಕೀಟಲೆ ಮಾಡಬಾರದು. ಹೊರಗೆ ಓಡಾಡುವಾಗ ಪೋಷಕರು ಜೊತೆ ಇರಬೇಕು. ನಾಯಿ ಕಚ್ಚಿದರೆ ಕೂಡಲೇ ಹತ್ತಿರದ ಆಸ್ಪತ್ರೆ ಸಂಪರ್ಕಿಸಿ ಚುಚ್ಚು ಮದ್ದು ಪಡೆಯಬೇಕು’ ಎಂದು ಸಲಹೆ ನೀಡಿದರು.
ಪುರಸಭೆ ಪರಿಸರ ಎಂಜಿನಿಯರ್ ಮಹೇಶ್, ಆರೋಗ್ಯಾಧಿಕಾರಿ ಪರಮೇಶ್ವರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.