ADVERTISEMENT

ಮಹದೇಶ್ವರ ಬೆಟ್ಟ: ಗಬ್ಬು ನಾರುತ್ತಿದೆ ಗುರುನಗರ!

ಎಲ್ಲೆಂದರಲ್ಲಿ ಹರಡಿರುವ ತ್ಯಾಜ್ಯ; ಸಾಂಕ್ರಮಿಕ ರೋಗಗಳ ಭೀತಿ

ಜಿ.ಪ್ರದೀಪ್ ಕುಮಾರ್
Published 11 ಜನವರಿ 2025, 6:38 IST
Last Updated 11 ಜನವರಿ 2025, 6:38 IST
ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಗುರುನಗರ ಮುಖ್ಯ ದ್ವಾರದಲ್ಲಿ ಬಿದ್ದಿರುವ ಕಸದ ರಾಶಿ
ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಗುರುನಗರ ಮುಖ್ಯ ದ್ವಾರದಲ್ಲಿ ಬಿದ್ದಿರುವ ಕಸದ ರಾಶಿ   

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಗುರುನಗರ ಗ್ರಾಮ ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ನರಳುತ್ತಿದ್ದು ಗಬ್ಬೆದ್ದು ನಾರುತ್ತಿದೆ. ಗ್ರಾಮದ ರಸ್ತೆಯ ಬದಿಯಲ್ಲಿ ಹರಡಿಕೊಂಡಿರುವ ತ್ಯಾಜ್ಯ ಮಾರಣಾಂತಿಕ ಕಾಯಿಲೆಗಳನ್ನು ತೊಂಡೊಡ್ಡುವ ಅಪಾಯ ಸೃಷ್ಟಿಸಿದೆ. ಪ್ರತಿದಿನ ಗುರುನಗರ ಗ್ರಾಮಸ್ಥರು ಗಬ್ಬು ವಾಸನೆಯಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗುರುನಗರ ಗ್ರಾಮದಲ್ಲಿ ಕಳೆದ ಹಲವು ತಿಂಗಳುಗಳಿಂದ ಚರಂಡಿ ನೀರು ರಸ್ತೆಯ ಮಧ್ಯೆಯೇ ಹರಿಯುತಿದ್ದು ಸಾರ್ವಜನಿಕರು ಹೊಲಸು ತುಳಿದುಕೊಂಡೇ ಓಡಾಡಬೇಕಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು, ಸಾಂಕ್ರಮಿಕ ಕಾಯಿಲೆಗಳು ಹರಡುವ ಆತಂಕ ಎದುರಾಗಿದೆ. 

ತ್ಯಾಜ್ಯ ವಿಲೇವಾರಿ ಮಾಡುವಂತೆ ಸ್ವಚ್ಛತೆ ಕಾಪಾಡುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಗ್ರಾಮ ಪಂಚಾಯಿತಿ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಸಮಸ್ಯೆ ಬಗೆಹರಿಸಬೇಕಾದ ಹೊಣೆಗಾರಿಕೆ ಹೊತ್ತಿರುವ ಗ್ರಾಮ ಪಂಚಾಯಿತಿಯೇ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದರಿಂದ ತ್ಯಾಜ್ಯದ ನಡುವೆಯೇ ಬದುಕಬೇಕಾಗಿದೆ. ಗುರುನಗರ ಪಂಚಾಯಿತಿಯಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

ಗ್ರಾಮದಲ್ಲಿ 100 ರಿಂದ 150 ಕುಟುಂಬಗಳು ವಾಸವಾಗಿದ್ದು, ಸರ್ಕಾರಿ ಸವಲತ್ತುಗಳು ಸಮರ್ಪಕವಾಗಿ ತಲುಪುತ್ತಿಲ್ಲ. ರಸ್ತೆಯಾಗಲಿ ಚರಂಡಿಯಾಗಲಿ ಸಮರ್ಪಕವಾಗಿ ಇಲ್ಲ. ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ಮಂಜೂರಾಗಿದ್ದರೂ ಕೇವಲ 50 ಮೀಟರ್ ರಸ್ತೆ ನಿರ್ಮಾಣ ಮಾಡಿ ಉಳಿಕೆ ಕಾಮಗಾರಿ ಮಾಡಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಸಂಪರ್ಕ ಪೈಪ್‌ಲೈನ್‌ ಕೊಳಚೆ ನೀರಿನ ಮೂಲಕವೇ ಹಾದು ಹೋಗಿದೆ. ಸಾಂಕ್ರಾಮಿಕ ರೋಗವು ಹರಡುವ ಭೀತಿಯಲ್ಲಿ ಗ್ರಾಮಸ್ಥರು ಇದ್ದೇವೆ ಎಂದು ಗುರುನಗರ ಗ್ರಾಮದ ಯುವಕ ಚ‌ಂದ್ರಶೇಖರ್ ಆರೋಪಿಸಿದರು.

ಗ್ರಾಮದ ಮುಖ್ಯ ದ್ವಾರದಲ್ಲೇ ಕಸದ ರಾಶಿಬಿದ್ದಿದೆ. ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಕಸ ವಿಲೇವಾರಿ ಮಾಡುವ ಭರವಸೆ ಇದುವರೆಗೂ ಈಡೇರಿಲ್ಲ. ತ್ಯಾಜ್ಯ ಗಬ್ಬೆದ್ದು ನಾರುತ್ತಿರುವುದರಿಂದ ರಾತ್ರಿ ವೇಳೆ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ. ರಸ್ತೆಯೂದ್ದಕ್ಕೂ ಶೌಚಾಲಯದ ಹೊಲಸು, ಸ್ನಾನ ಮಾಡಿ, ಬಟ್ಟೆ ತೊಳೆದು ಹೊರಬಿಡುವ ನೀರು ಹರಿಯುತ್ತದೆ. ಇದನ್ನೇ ತುಳಿದುಕೊಂಡು ಗ್ರಾಮಸ್ಥರು ನಡೆದಾಡಬೇಕಾಗಿದೆ. ಪ್ರತಿನಿತ್ಯವೂ ಕಿರಿಕಿರಿಯಾಗುತ್ತಿದ್ದು ಮಾನಸಿಕವಾಗಿ ವೇದನೆ ಅನುಭವಿಸುತ್ತಿದ್ದೇವೆ.

ಗ್ರಾಮದ ಮಕ್ಕಳಿಗೆ ಹಾಗೂ ವೃದ್ಧರು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಪ್ರಾಣಹಾನಿ ಸಂಭವವೂ ಹೆಚ್ಚಾಗಿದೆ. ಅಹಿತಕರ ಘಟನೆಗಳು ನಡೆದರೆ ಸಂಬಂಧದಪಟ್ಟ ಅಧಿಕಾರಿಗಳೆ ನೇರ ಹೊಣೆಗಾರರಾಗುತ್ತಾರೆ ಎಂದು ಗ್ರಾಮಸ್ಥರು 'ಪ್ರಜಾವಾಣಿ’ಗೆ ತಿಳಿಸಿದರು.

ಒಳಚರಂಡಿ ಇಲ್ಲದೆ ಗಲಿಜು ನೀರು ರಸ್ತೆಯ ಮೇಲೆ ಹರಿಯುತ್ತಿರುವ ದೃಶ್ಯ

ಬಾರಿ ಗಾತ್ರದ ವಾಹನ ಸಂಚಾರದಿಂದ ಸಮಸ್ಯೆ

2 ವರ್ಷಗಳ ಹಿಂದೆ ಇದೇ ರೀತಿ ತ್ಯಾಜ್ಯದ ಸಮಸ್ಯೆ ನಿರ್ಮಾಣವಾಗಿತ್ತು. ಆಗ 7 ಇಂಚಿನ ಪೈಪ್ ಬಳಸಿ ಒಳಚರಂಡಿ ಕಾಮಗಾರಿ ನಿರ್ಮಾಣ ಮಾಡಲಾಗಿತ್ತು. ಗುರುನಗರ ಗ್ರಾಮದಲ್ಲಿ ಮನೆ ನಿರ್ಮಾಣಮಾಡುವ ಗ್ರಾಮಸ್ಥರು ಬಾರಿ ಗಾತ್ರದ ವಾಹನಗಳನ್ನು ಚಲಾಯಿಸಿ ಒಳಚರಂಡಿ ಸಂಪೂರ್ಣವಾಗಿ ಜಖಂಗೊಂಡಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಗ್ರಾಮಸ್ಥರಿಗೆ ಸ್ವಚ್ಛತಾ ಅರಿವು ಮೂಡಿಸಲಾಗುವುದು. –ಕಿರಣ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.