ADVERTISEMENT

ರೇಷ್ಮೆ ನೂಲಿನಲ್ಲಿ ಮೂಡಿದ ಡಾ.ರಾಜ್‌, ಪುನೀತ್‌

ಕೈಮಗ್ಗ ದಿನಾಚರಣೆ: ರಾಜ್ಯ ಮಟ್ಟದ ನೇಯ್ಗೆ ಸ್ಪರ್ಧೆಯಲ್ಲಿ ಕೊಳ್ಳೇಗಾಲದ ಶ್ರೀನಿವಾಸ್‌ಗೆ ಎರಡನೇ ಪ್ರಶಸ್ತಿ

ಸೂರ್ಯನಾರಾಯಣ ವಿ
Published 7 ಆಗಸ್ಟ್ 2022, 7:42 IST
Last Updated 7 ಆಗಸ್ಟ್ 2022, 7:42 IST
ಕೊಳ್ಳೇಗಾಲದ ಶ್ರೀನಿವಾಸ ಅವರು ನೇಯ್ದಿರುವ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅವರ ಕಲಾಕೃತಿಯನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ವೀಕ್ಷಿಸಿದರು
ಕೊಳ್ಳೇಗಾಲದ ಶ್ರೀನಿವಾಸ ಅವರು ನೇಯ್ದಿರುವ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅವರ ಕಲಾಕೃತಿಯನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ವೀಕ್ಷಿಸಿದರು   

ಚಾಮರಾಜನಗರ:ರಾಷ್ಟ್ರೀಯ ಕೈಮಗ್ಗ ದಿನಾಚರಣೆ (ಆ.7) ಅಂಗವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನೇಯ್ಗೆ ಸ್ಪರ್ಧೆಯ ರೇಷ್ಮೆ ವಿಭಾಗದಲ್ಲಿ ಈ ವರ್ಷವೂ ಜಿಲ್ಲೆಯ ನೇಕಾರರೊಬ್ಬರು ಎರಡನೇ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೊಳ್ಳೇಗಾಲದ ದೇವಾಂಗಪೇಟೆಯ ನಿವಾಸಿ,ಕೊಳ್ಳೇಗಾಲದ ಮಂಜುನಾಥ ಕೈಮಗ್ಗ ನೇಕಾರರ ಮತ್ತು ಹುಲಿಕಾರರ ಸಹಕಾರ ಸಂಘದ ಸದಸ್ಯರಾಗಿರುವ ಪಿ.ಶ್ರೀನಿವಾಸ್‌ (58) ಪ್ರಶಸ್ತಿಗೆ ಆಯ್ಕೆಯಾದವರು.

ರೇಷ್ಮೆ ನೂಲಿನಲ್ಲಿ ಅವರು ನೇಯ್ದಿರುವ ವರನಟ ಡಾ.ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಕಲಾಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.ರೇಷ್ಮೆ, ಉಣ್ಣೆ ಹಾಗೂ ಹತ್ತಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ರಾಜ್ಯದಾದ್ಯಂತ 50ಕ್ಕೂ ಮಂದಿ ನೇಕಾರರು ಸ್ಪರ್ಧಿಸಿದ್ದರು.

ADVERTISEMENT

ರೇಷ್ಮೆ ವಿಭಾಗದಲ್ಲಿ ಚಿತ್ರದುರ್ಗದ ಡಿ.ಎಸ್‌.ಮಲ್ಲಿಕಾರ್ಜುನ ಅವರು ನೇಯ್ದಿರುವ ರೇಷ್ಮೆ ಸೀರೆ ಮೊದಲ ಪ್ರಶಸ್ತಿ ಪಡೆದರೆ, ಶ್ರೀನಿವಾಸ್‌ ಅವರ ಗೋಡೆಗೆ ತೂಗುಹಾಕುವ (ವಾಲ್‌ ಹ್ಯಾಂಗರ್‌) ಕಲಾಕೃತಿ ಎರಡನೇ ಪ್ರಶಸ್ತಿಗೆ ಆಯ್ಕೆಯಾಗಿದೆ.

ರಾಜ್ಯದಲ್ಲಿ ಕೈಮಗ್ಗದ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಕ್ಕಾಗಿ ಇಲಾಖೆಯು ಎಂಟು ವರ್ಷಗಳಿಂದ ಈ ಸ್ಪರ್ಧೆ ನಡೆಸುತ್ತಿದೆ. ಕಳೆದ ವರ್ಷ ಮೊದಲ ಬಾರಿಗೆ ಜಿಲ್ಲೆಯ ಮೂವರು ನೇಕಾರರು ಸ್ಪರ್ಧಿಸಿದ್ದರು. ಕೊಳ್ಳೇಗಾಲದವರೇ ಆದ ಕೃಷ್ಣಮೂರ್ತಿ ಅವರು ಎರಡನೇ ಪ್ರಶಸ್ತಿ ಪಡೆದಿದ್ದರು.

ಕಲಾಕೃತಿ ಹೇಗಿದೆ?: ಪುನೀತ್‌ ರಾಜ್‌ಕುಮಾರ್‌ ಅವರು ನಿಧನ ಹೊಂದಿದ ಸಂದರ್ಭದಲ್ಲಿ ಕರಾವಳಿಯ ಗ್ರಾಫಿಕ್‌ ಕಲಾವಿದ ಅವರು ರಚಿಸಿದ್ದ, ಸ್ವರ್ಗದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ತಂದೆ ಡಾ.ರಾಜ್‌ಕುಮಾರ್‌ ಅವರ ಹಿಂಬದಿ ನಿಂತು ಅವರ ಕಣ್ಣುಗಳನ್ನು ಮುಚ್ಚಿ ಹಿಡಿದಿರುವ ಹಿಡಿದಿರುವಚಿತ್ರ ಜನಪ್ರಿಯತೆ ಗಳಿಸಿತ್ತು. ಅದೇ ಚಿತ್ರವನ್ನು ಶ್ರೀನಿವಾಸ್‌ ಅವರು ರೇಷ್ಮೆ ನೂಲಿನಲ್ಲಿ ನೇಯ್ದು ಈ ಕಲಾಕೃತಿ ರಚಿಸಿದ್ದಾರೆ.

ನಗುಮುಖದ ಡಾ.ರಾಜ್‌ಕುಮಾರ್‌ ಅವರು ತಮ್ಮ ಕಣ್ಣುಗಳನ್ನು ಮುಚ್ವಿದವರು ಯಾರು ಎಂಬುದನ್ನು ಯೋಚಿಸುತ್ತಿರುವುದು, ತಂದೆಯವರ ಎರಡು ಕಣ್ಣುಗಳನ್ನು ಮುಚ್ಚಿರುವ ನಗುಮುಖದ ಪುನೀತ್‌ ರಾಜ್‌ಕುಮಾರ್‌, ಹಾರುತ್ತಿರುವ ಪಾರಿವಾಳ, ರಾಜ್‌ ಕುಮಾರ್‌ ಅವರ ಕಾಲಿನಲ್ಲಿ, ಪುನೀತ್‌ ಅವರ ಹೆಗಲಿನಲ್ಲಿ ಕುಳಿತಿರುವ ಪಾರಿವಾಳದ ಚಿತ್ರಗಳು ರೇಷ್ಮೆ ನೂಲಿನಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ.

‘ಸತತ ಎರಡನೇ ವರ್ಷವೂ ಜಿಲ್ಲೆಯ ನೇಕಾರರಿಗೆ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅತ್ಯಂತ ಸುಂದರವಾಗಿ ಬಂದಿದೆ. ಈ ನೇಯ್ಗೆ ಅತ್ಯಂತ ಕ್ಲಿಷ್ಟಕರ, ಶ್ರೀನಿವಾಸ್‌ ಅವರು ತಾಳ್ಮೆಯಿಂದ ಅತ್ಯಂತ ಸುಂದರವಾಗಿ ನೇಯ್ದಿದ್ದಾರೆ. 5,000 ಹುಕ್ಸ್‌ ಜಕಾರ್ಡ್‌ ಇರುವ ಯಂತ್ರ ಇದಕ್ಕೆ ಬೇಕು. ಆದರೆ. ಶ್ರೀನಿವಾಸ್‌ 248 ಹುಕ್ಸ್‌ ಜಕಾರ್ಡ್‌ ಸಾಧನ ಬಳಸಿ ನೇಯ್ದಿದ್ದಾರೆ’ ಎಂದು ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಯೋಗೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ತಿಂಗಳುಗಳಿಗಿಂತಲೂ ಹೆಚ್ಚು ಸಮಯವನ್ನು ಶ್ರೀನಿವಾಸ್‌ ಇದಕ್ಕೆ ತೆಗೆದುಕೊಂಡಿದ್ದಾರೆ. ₹50 ಸಾವಿರ ಖರ್ಚೂ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ನಮ್ಮ ನೇಕಾರರಿಗೆ ಸಿಕ್ಕಿರುವ ದೊಡ್ಡ ಗೌರವ ಇದು. ‌ಭಾನುವಾರ (ಆಗಸ್ಟ್‌ 7) ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ಅವರು ಹೇಳಿದರು.

ಪುನೀತ್‌ಗಾಗಿ ಮಾಡಿದೆ: ಶ್ರೀನಿವಾಸ್‌

ಪ್ರಶಸ್ತಿ ಬಂದಿರುವುದಕ್ಕೆ ‘ಪ್ರಜಾವಾಣಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದ ನೇಕಾರ ಶ್ರೀನಿವಾಸ್‌ ಅವರು, ‘ಪುನೀತ್‌ ರಾಜ್‌ಕುಮಾರ್‌ ಹಾಗೂ ರಾಜ್‌ಕುಮಾರ್‌ ಅವರ ಬಗ್ಗೆ ರೇಷ್ಮೆ ಕಲಾಕೃತಿ ತಯಾರು ಮಾಡಬೇಕು ಎಂಬ ಮನಸ್ಸು ಬಂತು. ನನ್ನ ಪತ್ನಿಯ ಸಲಹೆಯ ಮೇರೆಗೆ ಈ ರೇಷ್ಮೆ ಬಟ್ಟೆ ನೇಯ್ದಿದ್ದೇನೆ. ಪ್ರಶಸ್ತಿ ಬಂದಿರುವುದರಿಂದ ಖುಷಿಯಾಗಿದೆ. ಮುಖ್ಯಮಂತ್ರಿ ಅವರೂ ಇದನ್ನು ವೀಕ್ಷಿಸಿದ್ದಾರೆ’ ಎಂದರು.

‘ಡಾ.ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಇಬ್ಬರೂ ನಮ್ಮ ಜಿಲ್ಲೆಯರು. 6.5 ಕೋಟಿ ಕನ್ನಡಿಗರಿಗೂ ಬೇಕಾಗಿದ್ದ ಪುನೀತ್‌ ಅವರು ನಮ್ಮ ಜಿಲ್ಲೆಯ ರಾಯಭಾರಿಯೂ ಆಗಿದ್ದವರು. ಅವರು ಹಠಾತ್‌ ನಿಧನರಾಗಿದ್ದು ಎಲ್ಲರಿಗೂ ಮನೆಯ ಮಗನನ್ನು ಕಳೆದುಕೊಂಡಷ್ಟು ದುಃಖ ಆಗಿದೆ. ನೇಯ್ಗೆ ಸ್ಪರ್ಧೆಯ ಬಗ್ಗೆ ತಿಳಿದಾಗ ಪುನೀತ್‌ಗಾಗಿ ಏನಾದರೂ ಮಾಡಬೇಕು ಅಂದುಕೊಂಡೆ. ಖರ್ಚಿನ ಬಗ್ಗೆ ನಾನು ಯೋಚಿಸಿಲ್ಲ. ಇದಕ್ಕೆ ನನ್ನ ಸಂಘದವರು, ಸ್ನೇಹಿತರು, ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ’ ಎಂದು ಶ್ರೀನಿವಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.