ಹನೂರು: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಶುಕ್ರವಾರ ಸಂಭ್ರಮದಿಂದ ನೆರವೇರಿತು.
ದ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಚೈತ್ರ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರು ಮತ್ತು ಹೋರಾಟಗಾರರನ್ನು ಸ್ಮರಣೆ ಮಾಡುವ ಸುದಿನ ಇದು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜಕ್ಕಾಗಿ ದೇಶ ಪ್ರೇಮವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು ಎಂದರು.
ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ನಾಯಕತ್ವದಲ್ಲಿ ರಚನೆಯಾದ ಸಂವಿಧಾನದ ಮೂಲಕ ಸದೃಢ ಭಾರತ ನಿರ್ಮಾಣವಾಗಿದೆ ಎಂದರು. ಸಾಮಾಜಿಕ ನ್ಯಾಯ, ಸಮ ಸಮಾಜ ನಾಡು ಕಟ್ಟಲು ಕೆಲಸ ಮಾಡೋಣ ಎಂದರು.
ಎಸ್ ಎಸ್ ಎಲ್ ಸಿಯಲ್ಲಿ ಸಾಧನೆ ಮಾಡಿದ ಅಂಜಲಿ ವಿ. ಎಲ್ಲೆಮಾಳ ಸರ್ಕಾರಿ ಶಾಲೆಯ ಚೆನ್ನಾಲಿಂಗನಹಳ್ಳಿ ಪ್ರಿಯ ದರ್ಶಿನಿ, ಸುಸೈನ ಮಾರಹಳ್ಳಿ ಮೂರು ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.
13 ವಿದ್ಯಾರ್ಥಿಗಳಿಗೆ ವೀಲ್‌ಚೇರ್ ವಿತರಣೆ ಮಾಡಲಾಯಿತು. ಪೌರ ಕಾರ್ಮಿಕರಾದ ರಾಮಿ, ಅಗ್ನಿ ಶಾಮಕ ಸಿಬ್ಬಂದಿ ಪೆರಿಯಾ ನಾಯಗಮ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ಸೆಸ್ಕ್ ಸಿಬ್ಬಂದಿಯ ಅತ್ಯಾಕರ್ಷಕ ಪಥಸಂಚಲನ ಆಕರ್ಷಣೆ ಹೆಚ್ಚಿಸಿತು. ಶಾಲೆಗಳ ಮಕ್ಕಳು ದೇಶಭಕ್ತಿ ಸಾರುವ ಗೀತೆಗಳಿಗೆ ಆಕರ್ಷಕ ನೃತ್ಯವನ್ನು ಸಾದರಪಡಿಸಿದರು. ಗೌತಮ ಶಾಲೆ, ಮಂಗಲ ಏಕಲವ್ಯ ಶಾಲೆ, ಪಟ್ಟಣದ ಕ್ರಿಸ್ತರಾಜ ಶಾಲೆ, ವಿವೇಕಾನಂದ ಶಾಲೆ, ಜಿ. ವಿ.ಗೌಡ ಶಾಲೆ, ಬಿ. ಎಂ. ಜಿ.ಶಾಲೆ, ಹೋಲಿ ಏಂಜಲ್ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಇಒ ಉಮೇಶ್, ತಾಲೂಕು ವೈದ್ಯಾಧಿಕಾರಿ ಪ್ರಕಾಶ್, ಹನೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆನಂದ್ ಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.