ADVERTISEMENT

ಹನೂರು: ಬಸ್‌ ಟಾಪ್‌ ಮೇಲೆ ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರಿಂದ ಅಪಾಯಕಾರಿ ಸವಾರಿ!

ಸಮಪರ್ಕವಾಗಿಲ್ಲದ ಸಾರಿಗೆ ವ್ಯವಸ್ಥೆ, ಗಮನಹರಿಸದ ಕೆಎಸ್‌ಆರ್‌ಟಿಸಿ, ವಿದ್ಯಾರ್ಥಿಗಳಿಗೆ ತೊಂದರೆ

ಬಿ.ಬಸವರಾಜು
Published 21 ಜೂನ್ 2022, 19:30 IST
Last Updated 21 ಜೂನ್ 2022, 19:30 IST
ಹನೂರು ತಾಲ್ಲೂಕಿನ ಶಾಗ್ಯ ಗ್ರಾಮಕ್ಕೆ ಹೋಗುವ ಬಸ್ಸಿನಲ್ಲಿ ವಿದ್ಯಾರ್ಥಿಗಳು ಟಾಪ್ ಮೇಲೆ‌ ಕುಳಿತು ಪ್ರಯಾಣ ಮಾಡುತ್ತಿರುವುದು
ಹನೂರು ತಾಲ್ಲೂಕಿನ ಶಾಗ್ಯ ಗ್ರಾಮಕ್ಕೆ ಹೋಗುವ ಬಸ್ಸಿನಲ್ಲಿ ವಿದ್ಯಾರ್ಥಿಗಳು ಟಾಪ್ ಮೇಲೆ‌ ಕುಳಿತು ಪ್ರಯಾಣ ಮಾಡುತ್ತಿರುವುದು   

ಹನೂರು: ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ತಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಪರದಾಡುತ್ತಿದ್ದಾರೆ.

ಬೆಟ್ಟಗುಡ್ಡಗಳಿಂದ ಕೂಡಿದ ಗ್ರಾಮಗಳನ್ನೇ ಹೊಂದಿರುವ ಹನೂರು ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೆಲವೇ ಕೆಲವು ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಹಾಗಾಗಿ, ಇರುವ ಬಸ್‌ಗಳಲ್ಲೇ ಕಿಕ್ಕಿರಿದು ಪ್ರಯಾಣಿಕರಿರುತ್ತಾರೆ. ವಿದ್ಯಾರ್ಥಿಗಳು ಸೇರಿದಂತೆ ಇತರರು ಅನಿವಾರ್ಯವಾಗಿ ಬಸ್‌ ಟಾಪ್‌ ಮೇಲೆ ಕುಳಿತು ಪ್ರಯಾಣ ಮಾಡಬೇಕಾಗಿದೆ.

ಇಲ್ಲದಿದ್ದರೆ ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹೆಚ್ಚು ಹಣ ನೀಡುವ ಶಕ್ತಿ ಯಾರಿಗೂ ಇಲ್ಲ.

ADVERTISEMENT

ರಾಮಾಪುರದಿಂದ ದಿನ್ನಳ್ಳಿ, ಕೊತ್ತಗುಳಿ, ಗಾಜನೂರು, ಕೊಪ್ಪ, ಅರ್ಜುನದೊಡ್ಡಿ, ಸತ್ತಿಮಂಗಲ ಗ್ರಾಮಗಳಿಗೆ ತೆರಳಲು ಬೆರಳೆಣಿಕೆಯ ಬಸ್‌ಗಳನ್ನು ಅವಲಂಬಿಸಬೇಕಾಗಿದೆ.

ರಾಮಾಪುರದಿಂದ‌ ಹೂಗ್ಯಂ ಗ್ರಾಮಕ್ಕೆ ಸಂಪರ್ಕ‌ ಕಲ್ಪಿಸುವ ಈ ರಸ್ತೆ‌ ಮಲೆಮಹದೇಶ್ವರ ವನ್ಯಧಾಮದೊಳಗೆ ಹಾದು ಹೋಗಿರುವುದರಿಂದ‌ ಖಾಸಗಿ ವಾಹನಗಳಲ್ಲೂ ತೆರಳುವುದು ಕಷ್ಟಕರ.

‘ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ದೂರದ ರಾಮಾಪುರಕ್ಕೆ ಹೋಗಬೇಕು. ಈ ವೇಳೆ ಮಾರ್ಗಮಧ್ಯ ವನ್ಯಪ್ರಾಣಿಗಳು ಅಡ್ಡಲಾದರೆ ಅವು ರಸ್ತೆ ದಾಟುವವರೆಗೂ ಕಾದು ಬಳಿಕ ತೆರಳಬೇಕು. ಒಂದೆರಡು ಬಸ್‌ಗಳನ್ನು ಬಿಟ್ಟು ಬೇರೆ ಸಮಯದಲ್ಲಿ ಬಸ್ ಸೌಲಭ್ಯವಿಲ್ಲ’ ಎಂದು ದಿನ್ನಳ್ಳಿ ಗ್ರಾಮದ ಮಾದೇವ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಾಪುರದಿಂದ‌ ಮಾರ್ಟಳ್ಳಿ, ವಡಕೆಹಳ್ಳದಿಂದ ಮಾರ್ಟಳ್ಳಿ ಹಾಗೂ ಪೊನ್ನಾಚಿ ಮತ್ತು ಹನೂರಿನಿಂದ ಒಡೆಯರಪಾಳ್ಯ ಹಾಗೂ ಶಾಗ್ಯ ಗ್ರಾಮದ ಭಾಗಗಳಿಗೂ ಬಸ್ ಸೌಕರ್ಯವಿಲ್ಲದೆ ಇಂದಿಗೂ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

‘ಬೆಳಿಗ್ಗೆ ಹಾಗೂ ಸಂಜೆ ವೇಳೆ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದೆ ಖಾಸಗಿ ವಾಹನಗಳ ಮೊರೆ ಹೋಗಬೇಕು. ಅವು ‌ನಿಗದಿತ ಸಮಯಕ್ಕೆ ಬಾರದಿದ್ದಾಗ ಮಕ್ಕಳು ಆ ದಿನ ಶಾಲೆಗೆ ಹೋಗದೇ ಮನೆಯಲ್ಲೇ ಉಳಿಯಬೇಕಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಮಾರ್ಟಳ್ಳಿಯ ಅರ್ಪುದಾಜ್ ಹೇಳಿದರು.

ಅಪಾಯಕಾರಿ ಪ್ರಯಾಣ: ಪಟ್ಟಣದಿಂದ ಶಾಗ್ಯ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬಸ್‌ಗಳ ಕೊರತೆಯಿಂದಾಗಿ ಬರುವ ಬಸ್‌ಗಳ‌ ಟಾಪ್ ಮೇಲೆಯೇ ಕುಳಿತು ಸಂಚರಿಸಬೇಕಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಶಾಗ್ಯ, ಹಲಗಾಪುರ, ಬಂಡಳ್ಳಿ ಹಾಗೂ ಮಣಗಳ್ಳಿ ಗ್ರಾಮದಿಂದ‌ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಪಟ್ಟಣಕ್ಕೆ ಬರುತ್ತಾರೆ. ಎರಡೂ ಹೊತ್ತು ಸಮಯಲ್ಲಿ ಟಾಪ್ ಮೇಲೆಯೇ ಕುಳಿತು ತಮ್ಮ ಗ್ರಾಮಗಳಿಗೆ ಅಪಾಯಕಾರಿ ಪ್ರಯಾಣ ಮಾಡುತ್ತಾರೆ.

ತಿಂಗಳ ಹಿಂದೆ ಟಾಪ್ ಮೇಲೆ‌ ಕುಳಿತು ಹೋಗುವ ವೇಳೆ ಮರದ ಕೊಂಬೆ ತಗುಲಿ ವಿದ್ಯಾರ್ಥಿಯೊಬ್ಬ ಬಸ್ಸಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ಇದರ ಬೆನ್ನಲ್ಲೇ ಈ‌‌ ಮಾರ್ಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ ಗಳನ್ನು ಬಿಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಕೆಲವು ದಿನಗಳ ಬಳಿಕ ಪರಿಸ್ಥಿತಿ ಯಥಾಸ್ಥಿತಿ ಮುಂದುವರಿದಿದೆ.

‘ಸಮಸ್ಯೆ ನಿವಾರಣೆಗೆ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ ಕೊಳ್ಳೇಗಾಲ ಘಟಕದ ವ್ಯವಸ್ಥಾಪಕ ಮಂಜುನಾಥ್‌ ಅವರು, ‘ಹನೂರು ಭಾಗದಲ್ಲಿ ಬಹುತೇಕ ಗ್ರಾಮಗಳಲ್ಲಿ ಸಾರಿಗೆ ವ್ಯವಸ್ಥೆ ಕೊರತೆಯಿದೆ ಎಂಬುದು ಗೊತ್ತಾಗಿದೆ. ಶೀಘ್ರದಲ್ಲೇ ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುವುವುದು’ ಎಂದರು.

ಬಸ್‌ ವ್ಯವಸ್ಥೆ ಇಲ್ಲದಿರುವುದರಿಂದ ಬಂಡಳ್ಳಿ ,ಶಾಗ್ಯ ಭಾಗದ ಮಕ್ಕಳು ಬಸ್‌ ಟಾಪ್‌ ಮೇಲೆ ಕುಳಿತು ಸಂಚರಿಸಬೇಕಾಗಿದೆ.
- ಸೆಂದಿಲ್‌, ಗೋಪಿನಾಥಂ, ಸಹಾಯ ಹಸ್ತ ಟ್ರಸ್ಟ್

ಮುಂದೆ ನಡೆಯುವ ಅವಘಡವನ್ನು ತಪ್ಪಿಸಲು, ಕೆಎಸ್‌ಆರ್‌ಟಿಸಿ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಹಾಕಬೇಕು
- ಮಹೇಶ್, ಶಾಗ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.